Advertisement

Belagavi: ಗಣೇಶ ಮೂರ್ತಿಗಳು ಈ ಬಾರಿ ದುಬಾರಿ! ಶೇ.20-25 ದರ ಹೆಚ್ಚಳ

04:41 PM Sep 04, 2023 | Team Udayavani |

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲೆಡೆ ಗಣಪನನ್ನು ಶ್ರದ್ಧಾ-ಭಕ್ತಿಯಿಂದ ಪ್ರತಿಷ್ಠಾಪಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗಣೇಶ ಮೂರ್ತಿಗಳು ದುಬಾರಿಯಾಗಿವೆ. ಶೇ. 20ರಿಂದ 25 ಮೂರ್ತಿಗಳ ದರದಲ್ಲಿ ಏರಿಕೆ ಆಗಿದೆ.

Advertisement

ಬೆಳಗಾವಿಯ ಗಣೇಶೋತ್ಸವ ಎಂದರೆ ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ನೆರವೇರುತ್ತದೆ. ಸುಮಾರು 119 ವರ್ಷಗಳ ಇತಿಹಾಸ ಹೊಂದಿರುವ ಬೆಳಗಾವಿ ಗಣೇಶನ ಹಬ್ಬ ವೈಭವ ವರ್ಷದಿಂದ ವರ್ಷಕ್ಕೆ
ಹೆಚ್ಚಾಗುತ್ತಲೇ ಸಾಗಿದೆ. ಈ ಬಾರಿ ಮಾರುಕಟ್ಟೆಯಲ್ಲಿ ಗಣೇಶ ಮೂರ್ತಿಗಳ ದರದಲ್ಲಿ ಏರಿಕೆ ಕಂಡು ಬಂದಿರುವುದರಿಂದ ಸಾರ್ವಜನಿಕರ ಜೇಬಿಗೆ ತುಸು ಕತ್ತರಿ ಬಿದ್ದಂತಾಗಿದೆ.

ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗಣೇಶ ಮೂರ್ತಿಗಳನ್ನು ಮನೆ-ಮನಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಳ್ಳಿ ಹಳ್ಳಿ, ಗಲ್ಲಿ, ಬೀದಿ, ಬಡಾವಣೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಈಗಾಗಲೇ ಸುಮಾರು ಐದಾರು ತಿಂಗಳಿಂದ ಮೂರ್ತಿ ತಯಾರಿಕೆ ಕಾರ್ಯ ಭರದಿಂದ ಸಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ಕಲಾವಿದರು ಗಣಪತಿ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ಸದ್ಯ ತಯಾರಿಕೆ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಬಣ್ಣ ಹಚ್ಚಿ ಅಂತಿಮ ರೂಪ ನೀಡುವಲ್ಲಿ ಕಲಾವಿದರು ನಿರತರಾಗಿದ್ದಾರೆ.

ಮಳೆಯಲ್ಲಿ ನೆನೆದು ಹಾನಿ: ಮಹಾರಾಷ್ಟ್ರದ ಮುಂಬೈ ಸೇರಿದಂತೆ ವಿವಿಧ ಕಡೆಗೆ ಕಳೆದ ತಿಂಗಳು ಧಾರಾಕಾರ ಮಳೆ ಸುರಿದಿತ್ತು. ತಯಾರಾಗಿದ್ದ ಗಣೇಶ ಮೂರ್ತಿಗಳನ್ನು ಶೆಡ್‌ಗಳಲ್ಲಿ ಇಡಲಾಗಿತ್ತು. ಹಲವು ಕಡೆಗಳಲ್ಲಿ ನೀರು ನುಗ್ಗಿ ಭಾರೀ ಪ್ರಮಾಣದಲ್ಲಿ
ಮೂರ್ತಿಗಳು ನೆನೆದು ಹಾನಿಯಾಗಿದೆ. ಸಣ್ಣ ಪುಟ್ಟ ಮೂರ್ತಿಗಳು ಉಳಿದುಕೊಂಡಿದ್ದು, ದೊಡ್ಡ ಮೂರ್ತಿಗಳು ನೀರಿನಿಂದ ಹಾನಿಯಾಗಿವೆ. ಈಗ ಮತ್ತೆ ತಯಾರಿಸಿ ಬೇರೆ ಕಡೆಗೆ ಕಳುಹಿಸುವುದು ಕಷ್ಟಕರವಾಗಿದ್ದು, ಹೀಗಾಗಿ ಕಡಿಮೆ ಪ್ರಮಾಣದಲ್ಲಿ
ಮೂರ್ತಿಗಳು ಬೆಳಗಾವಿಗೆ ಬಂದಿವೆ. ಇದರಿಂದ ದರ ತುಸು ಹೆಚ್ಚಾಗಿದೆ ಎನ್ನುತ್ತಾರೆ ಮೂರ್ತಿ ಮಾರಾಟಗಾರರು.

ಜತೆಗೆ ಮೂರ್ತಿಗಳಿಗೆ ಅಗತ್ಯ ಇರುವ ಕಚ್ಚಾ ವಸ್ತುಗಳ ದರ ಏರಿಕೆ ಆಗಿದೆ. ಪ್ಲಾಸ್ಟರ್‌, ಜೇಡಿ ಮಣ್ಣು, ಗೋಕಾಕ ಹಾಗೂ ಖಾನಾಪುರ ಮಣ್ಣು, ಬಣ್ಣ, ಕಬ್ಬಿಣ, ಕಟ್ಟಿಗೆಯ ಪ್ಲೇಟ್‌, ಆ್ಯಂಗಲ್‌, ಪೈಪ್‌, ಹಗ್ಗದ ದರ ಹೆಚ್ಚಾಗಿದ್ದರಿಂದ ಮೂರ್ತಿ ತಯಾರಿಯ ವೆಚ್ಚವೂ ಹೆಚ್ಚಳವಾಗಿದೆ. ಇನ್ನು ಮೂರ್ತಿಗಳನ್ನು ತಯಾರಿಸಲು ಬೇರೆ ಬೇರೆ ಕಡೆಯಿಂದ ಕಾರ್ಮಿಕರು ಬಂದಿದ್ದಾರೆ.
ಕಾರ್ಮಿಕರ ವೇತನವೂ ಹೆಚ್ಚಳವಾಗಿದ್ದರಿಂದ ಅನಿವಾರ್ಯ ಮೂರ್ತಿಗಳ ದರ ಹೆಚ್ಚಳ ಮಾಡಲಾಗಿದೆ. ಹಗಲು-ರಾತ್ರಿ ಪಾಳಿಯಲ್ಲಿ ಕಾರ್ಮಿಕರು ಒಂದೆರಡು ತಿಂಗಳಿಂದ ದುಡಿಯುತ್ತಿದ್ದಾರೆ.

Advertisement

ಮಹಾರಾಷ್ಟ್ರದಿಂದ ಬಂದ ಮೂರ್ತಿಗಳು: ಜಿಲ್ಲೆಯ ಹಲವು ಕಡೆಗಳಲ್ಲಿ ಮೂರ್ತಿ ನಿರ್ಮಾಣ ಕಾರ್ಯ ನಡೆದಿದೆ. ಜತೆಗೆ ಬೆಳಗಾವಿಗೆ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಗಜಾನನ ಮೂರ್ತಿಗಳು ಲಗ್ಗೆ ಇಡುತ್ತವೆ. ಸದ್ಯ ಮಾರುಕಟ್ಟೆಯಲ್ಲಿ ಮೂರ್ತಿಗಳು ಬಂದಿಳಿದಿದ್ದು, ನಗರದ ಹಲವು ಕಡೆಗಳಲ್ಲಿ ಸಣ್ಣ ಸಣ್ಣ ಸ್ಟಾಲ್‌ಗ‌ಳನ್ನು ಹಾಕಿ ಮೂರ್ತಿಗಳನ್ನು ಇಟ್ಟಿದ್ದಾರೆ. ಮುಂಬೈ, ಪುಣೆ, ಕೊಲ್ಲಾಪುರ, ರತ್ನಾಗಿರಿ, ಕರಾಡ, ಸಾತಾರಾ, ಇಚಲಕರಂಜಿಗಳಿಂದ ಗಣೇಶ ಮೂರ್ತಿಗಳು ಬಂದಿವೆ. ಇನ್ನು ಸೆಪ್ಟೆಂಬರ್‌ ಮೊದಲ ವಾರದಿಂದ ಮೂರ್ತಿಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ.

ಮೂರ್ತಿಗಳ ಬುಕ್ಕಿಂಗ್‌ ಆರಂಭ
ಸದ್ಯ ಬೆಳಗಾವಿಗೆ ಬಂದಿರುವ ಮೂರ್ತಿಗಳಿಗೆ ಗ್ರಾಹಕರು ಬುಕ್ಕಿಂಗ್‌ ಆರಂಭಿಸಿದ್ದಾರೆ. ತಮಗೆ ಬೇಕಾದ ಸುಂದರ ಮತ್ತು ಆಕರ್ಷಕ ಮೂರ್ತಿಗಳಿಗೆ ಮುಂಗಡ ಹಣ ಕೊಟ್ಟು ಬುಕ್ಕಿಂಗ್‌ ಮಾಡಿಟ್ಟಿದ್ದಾರೆ. ಸಾರ್ವಜನಿಕ ಮೂರ್ತಿಗಳನ್ನು ನಾಲ್ಕೈದು ತಿಂಗಳ ಹಿಂದೆಯೇ ಜನರು ಕಾಯ್ದಿರಿಸಿದ್ದಾರೆ. ತಮಗೆ ಬೇಕಾದ ವಿವಿಧ ಅವತಾರಗಳ, ರೂಪಗಳ ಮೂರ್ತಿಗಳನ್ನು ತಯಾರಿಸಲು ಆರ್ಡ್‌ರ್‌ ಕೊಟ್ಟಿದ್ದಾರೆ. ದೊಡ್ಡ ಗಣಪತಿಗಳು 20 ಸಾವಿರರಿಂದ 1 ಲಕ್ಷ ರೂ. ದರವರೆಗೂ ತಯಾರಾಗಿವೆ.

ಮುಂಬೈ, ಕೊಲ್ಲಾಪುರ ಸೇರಿದಂತೆ ವಿವಿಧ ಭಾಗಗಳಿಂದ ಗಣೇಶ ಮೂರ್ತಿಗಳನ್ನು ತಂದು ನಾವು ಮಾರಾಟ ಮಾಡುತ್ತೇವೆ. ಈ ವರ್ಷ ಸುಮಾರು 300ಕ್ಕೂ ಹೆಚ್ಚು ಮೂರ್ತಿಗಳನ್ನು ನಾವು ಮಾರಾಟ ಮಾಡುತ್ತೇವೆ. ಒಂದೂವರೆ ಅಡಿ ಮೂರ್ತಿಗೆ ಸುಮಾರು 2800 ರೂ. ದರ ಇದೆ. ಮುಂಬೈ ಗಣಪತಿಗಳಿಗೆ ಬೇಡಿಕೆ ಹೆಚ್ಚಿದೆ.
ಗೌತಮ ಸಾವಂತ, ಮೂರ್ತಿ
ಮಾರಾಟಗಾರರು

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಗಣೇಶ ಮೂರ್ತಿಗಳ ತಯಾರಿಕೆ ವೆಚ್ಚ ಹೆಚ್ಚಾಗಿದೆ. ಬಣ್ಣ, ಪ್ಲಾಸ್ಟರ್‌, ಕಟ್ಟಿಗೆ, ಕಬ್ಬಿಣದ
ದರ ಹೆಚ್ಚಾಗಿದ್ದರಿಂದ ಅನಿವಾರ್ಯವಾಗಿ ಮೂರ್ತಿಗಳ ದರ ಹೆಚ್ಚಿಸಿದ್ದೇವೆ. ಶೇ.20ರಿಂದ 25 ದರ ಏರಿಕೆ ಆಗಿದೆ. ನಾವು ಈ ವರ್ಷ
ಸುಮಾರು 500ಕ್ಕೂ ಹೆಚ್ಚು ಸಣ್ಣ ಗಣಪತಿ ಹಾಗೂ 30ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿಗಳನ್ನು ತಯಾರಿಸಿದ್ದೇವೆ.
ಪ್ರಸಾದ ಪಾಟೀಲ, ಮೂರ್ತಿಕಾರರು.

*ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next