ಬೆಳಗಾವಿ: ಬಳ್ಳಾರಿ ನಾಲಾದಲ್ಲಿ ಹಿಂದೆಂದೂ ಕಂಡು ಕೇಳರಿಯದಷ್ಟು ನೀರು ಬಂದು ಸುತ್ತಲಿನ ಕೃಷಿ ಜಮೀನುಗಳನ್ನೇ ನುಂಗಿದೆ. ಜಮೀನುಗಳಿಗೆ ನುಗ್ಗಿದ ಪ್ರವಾಹದ ನೀರಿನಿಂದ ತರಕಾರಿಯ ತವರೂರು ಎಂದೇ ಪ್ರಸಿದ್ಧಿಯಾದ ಸಿದ್ಧನಹಳ್ಳಿಯ ಹೊಲಗಳಲ್ಲಿ ರಾಶಿ ರಾಶಿ ಕಲ್ಲುಗಳು ಬಿದ್ದು ಗುಡ್ಡ ನಿರ್ಮಾಣಗೊಂಡು ಆತಂಕಕ್ಕೆ ಕಾರಣವಾಗಿದೆ.
Advertisement
ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಸಿದ್ಧನಹಳ್ಳಿ ಎಂಬ ಮುಳುಗಡೆ ಪ್ರದೇಶದ ಹೊಲಗಳಲ್ಲಿ ನೀರು ನುಗ್ಗುವುದಷ್ಟೇ ಅಲ್ಲದೇ ರಾಶಿ ರಾಶಿ ಕಲ್ಲುಗಳು ಬಂದು ಬಿದ್ದಿವೆ. ಅತ್ಯಂತ ಫಲವತ್ತಾದ ಜಮೀನು ಹೊಂದಿರುವ ಈ ಗ್ರಾಮದ ರೈತರಲ್ಲಿ ಆತಂಕ ಮೂಡಿದ್ದು, ಕಣ್ಣೀರು ಕಪಾಳಕ್ಕೆ ಬಂದಿವೆ.
Related Articles
Advertisement
ಜೂನ್, ಜುಲೈ ತಿಂಗಳಲ್ಲಿ ಮಳೆ ಮುನ್ಸೂಚನೆ ನೋಡಿ ಬಿತ್ತನೆ ಆರಂಭವಾಗುತ್ತದೆ. ಅದರಂತೆ ಈ ಸಲ ಬಹುತೇಕ ರೈತರು ಬಿತ್ತನೆ ಕಾರ್ಯ ಮುಗಿಸಿದ್ದರಿಂದ ಅಲ್ಪಸ್ವಲ್ಪ ಬೆಳೆಗಳು ಬಂದಿದ್ದವು. ಇನ್ನೇನು ನಾಲ್ಕೈದು ದಿನಗಳಲ್ಲಿ ತರಕಾರಿಗಳನ್ನು ಕಿತ್ತು ಮಾರುಕಟ್ಟೆಗೆ ಸಾಗಿಸುವ ತಯಾರಿ ನಡೆದಿತ್ತು. ನೀರಿನ ಪ್ರವಾಹದಲ್ಲಿ ಎಲ್ಲವೂ ಕೊಚ್ಚಿ ಹೋಗಿದೆ. ನಾಟಿ ಮಾಡಿದ್ದ ಭತ್ತದ ಒಂದೂ ಗಿಡ ಕೈಗೆ ಸಿಕ್ಕಿಲ್ಲ. ಇದು ಭೂಮಿಯೋ ಅಥವಾ ಗುಡ್ಡಗಾಡು ಪ್ರದೇಶವೋ ಎಂಬಂತೆ ಕಾಣಿಸುತ್ತಿದೆ ಎನ್ನುತ್ತಾರೆ ರೈತ ಯಲ್ಲಪ್ಪ ಪೂಜೇರಿ.
ಗ್ರಾಮದಲ್ಲಿ ಭುಗಿಲೆದ್ದ ಆಕ್ರೋಶ: ಪ್ರವಾಹ ಬಂದು ಇಷ್ಟೆಲ್ಲ ಅವಾಂತರ ಸೃಷ್ಟಿಸಿದ್ದರೂ ಯಾರೂ ಕಣ್ಣೆತ್ತಿ ನೋಡುತ್ತಿಲ್ಲ. ಕೇಂದ್ರ ಸಚಿವ ಸುರೇಶ ಅಂಗಡಿ ಬಿಟ್ಟರೆ ಇನ್ನೂ ಯಾರೂ ಇತ್ತ ಬಂದಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ಬಂದು ಸಮೀಕ್ಷೆ ಮಾಡಿಲ್ಲ. ಈ ಭಾಗದ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಎಲ್ಲ ಊರು ತಿರುಗಾಡುತ್ತಿದ್ದಾರೆ. ಆದರೆ ನಮ್ಮೂರಿಗೆ ಬಂದು ಸಾಂತ್ವನ ಹೇಳುತ್ತಿಲ್ಲ. ಅನೇಕ ಮನೆಗಳು ಬಿದ್ದು ಹೋಗಿ ಬೇರೆಯವರ ಮನೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ. ನಮ್ಮ ಬಗ್ಗೆ ಯಾರಿಗೂ ಅನುಕಂಪ ಇಲ್ಲವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮುಳುಗಡೆ ಪ್ರದೇಶ ಎಂಬ ಶಾಪ ನಮ್ಮನ್ನು ಅಂಟಿಕೊಂಡಿದೆ. ಅನೇಕ ವರ್ಷಗಳಿಂದ ಸಿದ್ಧನಹಳ್ಳಿ ಸೇರಿದಂತೆ ಸುತ್ತಲಿನ ಕೆಲ ಹಳ್ಳಿಗಳು ಬಳ್ಳಾರಿ ನಾಲಾ ಅಣೆಕಟ್ಟು ನಿರ್ಮಾಣಕ್ಕಾಗಿ ಸ್ಥಳಾಂತರ ಮಾಡುವುದಾಗಿ ಸರ್ಕಾರ ಹೇಳುತ್ತ ಬಂದಿದೆ. ಆದರೆ ಇನ್ನೂವರೆಗೆ ಸ್ಥಳಾಂತರ ಮಾಡದೇ, ಸೌಲಭ್ಯವನ್ನೂ ಕಲ್ಪಿಸದೇ ಜಿಲ್ಲಾಡಳಿತ ಚೆಲ್ಲಾಟ ಆಡುತ್ತಿದೆ. ಈ ಬಾರಿಯ ಮಳೆ ಸಂಪೂರ್ಣ ಜೀವನವನ್ನೇ ಕಸಿದುಕೊಂಡಿದೆ ಎಂದು ಗ್ರಾಮದ ನಿವಾಸಿ ಲಗಮಣ್ಣ ಸುಲಧಾಳ ಅಳಲು ತೋಡಿಕೊಂಡರು.