ಬೆಳಗಾವಿ: ಮಳೆಗಾಲ ಮುಗಿಯಿತೆಂದರೆ ಮಾಂಸ ಪ್ರಿಯರಿಗೆ ಇಷ್ಟವಾದ ಆಹಾರ ಪದಾರ್ಥಗಳಲ್ಲಿ ಮೀನು ಅಚ್ಚುಮೆಚ್ಚು. ಆದರೆ ಈ ಸಲದ ಪ್ರವಾಹದ ಅಬ್ಬರಕ್ಕೆ ಮೀನುಗಾರಿಕೆ ಸೊರಗಿ ಮಾರುಕಟ್ಟೆಗೆ ಮೀನಿನ ಆವಕ ಕಡಿಮೆ ಆಗಿದ್ದರಿಂದ ದರ ಗಗನಕ್ಕೇರಿದೆ.
ಸಾಮಾನ್ಯವಾಗಿ ಮುಂಗಾರು ಮಳೆಯಾಗಿ ನೂಲು ಹುಣ್ಣಿಮೆ ಮುಗಿದ ಮರುದಿನದಿಂದಲೇ ಮೀನುಗಾರಿಕೆ ಉದ್ಯೋಗ ವೇಗ ಪಡೆದುಕೊಳ್ಳುತ್ತದೆ. ಆ ದಿನದಿಂದ ಮೀನಿಗೆ ಬಲೆ ಹಾಕುವ ಕೆಲಸ ಶುರುವಾದಂತೆ ಮೀನು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುವುದು ವಾಡಿಕೆ. ಆದರೆ ಈ ಸಲ ಉಂಟಾದ ಭಾರೀ ಪ್ರವಾಹದಿಂದ ಇನ್ನೂ ಮೀನುಗಾರಿಕೆ ವಹಿವಾಟು ಅಷ್ಟೊಂದು ವೇಗ ಪಡೆದುಕೊಂಡಿಲ್ಲ. ಹೀಗಾಗಿ ಬೆಳಗಾವಿ, ಹುಬ್ಬಳ್ಳಿ, ಕೊಲ್ಲಾಪುರಗಳಿಗೆ ಮೀನು ಅಂದುಕೊಂಡಂತೆ ಬರುತ್ತಿಲ್ಲ.
ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಾದ ರತ್ನಾಗಿರಿ, ಮಾಲವನ್, ಕನಕವಲಿ, ವೆಂಗುರ್ಲಾ, ಗೋವಾದಿಂದ ಮೀನು ಹೆಚ್ಚಾಗಿ ಬರುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ಬೀಸುತ್ತಿರುವ ಗಾಳಿ, ಮಳೆಯಿಂದಾಗಿ ಮೀನುಗಾರರು ಸಮುದ್ರದ ದೂರದ ಪ್ರದೇಶಗಳಿಗೆ ಹೋಗಿ ಮೀನುಗಾರಿಕೆ ಮಾಡುತ್ತಿಲ್ಲ. ಹೀಗಾಗಿ ಕಳೆದ ಒಂದು ತಿಂಗಳಿಂದ ಮೀನು ಮಾರುಕಟ್ಟೆಗೆ ಅಂದುಕೊಂಡಷ್ಟು ಪ್ರಮಾಣದಲ್ಲಿ ಬಾರದೇ ಮೀನು ಪ್ರಿಯರಿಗೆ ನಿರಾಸೆಯಾಗಿದೆ.
ದರ ದುಬಾರಿ: ಸದ್ಯ ಹುಬ್ಬಳ್ಳಿ, ದಾವಣಗೆರೆ, ಬೆಳಗಾವಿ, ಮಹಾರಾಷ್ಟ್ರದ ಕೊಲ್ಲಾಪುರ ಮೀನು ಮಾರುಕಟ್ಟೆಗಳಿಗೆ ಕಳೆದ 20 ದಿನಗಳಿಂದ ಚೆನ್ನೈ ಹಾಗೂ ಕೇರಳದಿಂದ ಮೀನು ಬರುತ್ತಿದೆ. ಲಾರಿ ತುಂಬಿಕೊಂಡು ಬರುತ್ತಿರುವ ತರಹೇವಾರಿ ಮೀನುಗಳಿಗೆ ಭಾರೀ ಬೇಡಿಕೆ ಇದ್ದು, ಬೆಲೆಯೂ ಅತಿ ಹೆಚ್ಚಾಗಿರುವುದರಿಂದ ಗ್ರಾಹಕರು ಅನಿವಾರ್ಯವಾಗಿ ಹೆಚ್ಚಿನ ದುಡ್ಡು ಬಿಚ್ಚಿ ನಾಲಿಗೆ ರುಚಿ ತಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಕೆಲವು ದಿನಗಳಿಂದಷ್ಟೇ ಕರಾವಳಿ ಭಾಗದ ಕಾರವಾರ, ಭಟ್ಕಳ, ಹೊನ್ನಾವರ, ಗೋವಾದ ಪಣಜಿ, ಮಡಗಾಂವ, ರತ್ನಾಗಿರಿಯಿಂದ ಮೀನು ಬರುತ್ತಿರುವುದರಿಂದ ಸ್ವಲ್ಪ ಪ್ರಮಾಣದಲ್ಲಿ ಅಭಾವ ತಗ್ಗಿದರೂ ಇನ್ನೂ ಜನಸಾಮಾನ್ಯರ ಕೈಗೆಟುಕುವಷ್ಟು ದರ ತಗ್ಗಿಲ್ಲ.
ಮಳೆ ತಗ್ಗಿದರೂ ನದಿ ನೀರಿನ ಮಟ್ಟ ಇನ್ನೂ ಕೆಳಗಿಳಿದಿಲ್ಲ. ಹೀಗಾಗಿ ನದಿ, ಹಳ್ಳಗಳಲ್ಲಿ ಸಿಗುವ ಮೀನು ಕೂಡ ಮಾರುಕಟ್ಟೆಗೆ ಬರುತ್ತಿಲ್ಲ. ಮಳೆ ನೀರು ಕಡಿಮೆಯಾದಾಗ ಮಾತ್ರ ಮೀನುಗಳು ಹೆಚ್ಚಾಗಿ ಬರುತ್ತವೆ. ಆಗ ದರವೂ ಕೂಡ ತಗ್ಗುತ್ತದೆ. ಮಳೆ ಕಡಿಮೆಯಾಗಿ ಸಂಪೂರ್ಣವಾಗಿ ಬಿಸಿಲು ಬಿದ್ದರೆ ಮೂರ್‍ನಾಲ್ಕು ದಿನಗಳಲ್ಲಿಯೇ ಮೀನಿನ ಕೊರತೆ ತೀರುವುದರಲ್ಲಿ ಸಂದೇಹವೇ ಇಲ್ಲ ಎನ್ನುತ್ತಾರೆ ಮೀನು ವ್ಯಾಪಾರಸ್ಥರು.