ಬೆಳಗಾವಿ: ಕೊಲೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ವಿಶಾಲಸಿಂಗ್ ವಿಜಯಸಿಂಗ್ ಚವ್ಹಾಣ ಬಳಿ ಕಂಟ್ರಿ ಪಿಸ್ತೂಲು, ಮೂರು ಚಾಕು ಪತ್ತೆಯಾಗಿದ್ದು, ಚಾಕುವಿನಿಂದ ಪೇದೆ ಮೇಲೆ ದಾಳಿ ನಡೆಸಿದ್ದಾನೆ.
ಮಂಗಳವಾರ ಬೆಳಗಿನ ಜಾವ ನಗರದ ಧರ್ಮನಾಥ ಭವನ ಸಮೀಪ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮುಂದಾದಾಗ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ ಹಾಗೂ ತಂಡ ಆರೋಪಿಯ ಕಾಲಿಗೆ ಗುಂಡು ಹಾರಿಸಿದಾಗ ನೆಲಕ್ಕುರುಳಿ ಬಿದ್ದಿದ್ದಾನೆ.
ಇದನ್ನೂ ಓದಿ:ಪೊಲೀಸರ ಮೇಲೆ ಅಟ್ಯಾಕ್ ಗೆ ಯತ್ನಿಸಿದ ಕೊಲೆ ಆರೋಪಿ: ಮಾರ್ಧನಿಸಿತು ಗುಂಡಿನ ಸದ್ದು
ಈತನ ಮೊಣಕಾಲಿಗೆ ಗುಂಡೇಟು ಬಿದ್ದಿದ್ದು, ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ ಇದ್ದಾನೆ. ಚಾಕು ಇರಿತಕ್ಕೆ ಗಾಯಗೊಂಡ ಪೊಲೀಸ್ ಪೇದೆಗೂ ಚಿಕಿತ್ಸೆ ನೀಡಲಾಗುತ್ತಿದೆ.
15 ವರ್ಷಗಳ ಹಿಂದೆ ಗ್ಯಾಂಗ್‌ಸ್ಟಾರ್ ಪ್ರವೀಣ ಶಿಂತ್ರೆಯನ್ನು ಎನ್ ಕೌಂಟರ್ ಮಾಡಿದ ಬಳಿಕ ಈಗ ಬೆಳಗಾವಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮಾರ್ದನಿಸಿದ್ದು, ಕೊಲೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಮಂಗಳವಾರ ಬೆಳಗಿನ ಜಾವ ನಗರದ ಧರ್ಮನಾಥ ಭವನ ಸಮೀಪ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮುಂದಾದಾಗ ಪೊಲೀಸರು ಗುಂಡು ಹಾರಿಸುವ ಮೂಲಕ ಆತನನ್ನು ಹೆಡೆಮುರಿ ಕಟ್ಟಿದ್ದಾರೆ.
ಮಾರ್ಚ್ 15ರಂದು ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ ಎಂಬಾತನ ಕೊಲೆಗೆ ಸುಪಾರಿ ಪಡೆದಿದ್ದ ಆರೋಪ ವಿಶಾಲ ಸಿಂಗ್ ನ ಮೇಲಿದೆ. ಒಂದು ಕೊಲೆ, ಆರು ಕೊಲೆಗೆ ಯತ್ನ ಪ್ರಕರಣ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಿಶಾಲ ಸಿಂಗ್ ಚವ್ಹಾಣ ಭಾಗಿಯಾಗಿದ್ದಾನೆ. ಖಡೇಬಜಾರ್, ಕ್ಯಾಂಪ್, ಶಹಾಪುರ, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳಿವೆ. ಜತೆಗೆ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿಯೂ ಈತನ ವಿರುದ್ಧ ಪ್ರಕರಣಗಳಿವೆ.