Advertisement

Congress: ಪಕ್ಷದ ಶಾಸಕರು ಹೈಕಮಾಂಡ್ ಸೂಚನೆ ಪಾಲಿಸುವ ವಿಶ್ವಾಸವಿದೆ: ಬೇಳೂರು ಗೋಪಾಲಕೃಷ್ಣ

06:06 PM Jan 14, 2025 | Esha Prasanna |

ಸಾಗರ: ರಾಜ್ಯದಲ್ಲಿ ಪಕ್ಷದ ಮುಂಚೂಣಿ ನಾಯಕರು ಔತಣಕೂಟದ ಸಭೆಗಳು ನಡೆಸಿರುವುದು ಕುತೂಹಲ ಮೂಡಿಸಿದೆ.  ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌  ಸುರ್ಜೇವಾಲ ಅವರು ಇಂತಹ ಮೀಟಿಂಗ್ ನಿಲ್ಲಿಸಲು ಸೂಚನೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರು ಹೈಕಮಾಂಡ್ ಸೂಚನೆ ಪಾಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

Advertisement

ತಾಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವದಲ್ಲಿ ಮಂಗಳವಾರ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಂದರ್ಭ ಬಂದರೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡುವ ಬಗ್ಗೆಯೂ ಹೇಳಿದ್ದಾರೆ. ಕೆಲವರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.

ಇಂತಹ ಗೊಂದಲ ಸೃಷ್ಟಿಯಾಗಲು ನಾವು 140 ಸ್ಥಾನ ಗೆದ್ದಿರುವುದೇ ಕಾರಣವೇ ಎನ್ನುವ ಅನುಮಾನ ಉಂಟಾಗುತ್ತಿದೆ. ಏಕೆಂದರೆ ಕಡಿಮೆ ಸಂಖ್ಯೆ ಇದ್ದಿದ್ದರೆ ಇಂತಹ ಗೊಂದಲ ಉಂಟಾಗುತ್ತಿರಲಿಲ್ಲ. ನಮ್ಮ ನಮ್ಮಲ್ಲಿ ಅನಗತ್ಯ ಹೇಳಿಕೆ ನೀಡುವುದರಿಂದ ರಾಜ್ಯದ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ ಎಂದರು.

ಸೇತುವೆ ಕಾಮಗಾರಿ ಏಪ್ರಿಲ್‌-ಮೇ ವೇಳೆಗೆ ಪೂರ್ಣ:
ಈಗಾಗಲೇ ತುಮರಿ ಸೇತುವೆ ನಿರ್ಮಾಣ ಅಂತಿಮ ಹಂತದಲ್ಲಿದೆ. ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಸೇತುವೆ ಕಾಮಗಾರಿ ಪೂರ್ಣಗೊಳ್ಳಬಹುದು. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಕರೆಸುವ ಆಲೋಚನೆಯಲ್ಲಿ ಬಿಜೆಪಿಯವರಿದ್ದಾರೆ. ಇನ್ನು ನಾಲ್ಕೈದು ದಿನಗಳಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಂತರ ಸೇತುವೆ ಲೋಕಾರ್ಪಣೆ ದಿನಾಂಕ ನಿಗದಿಪಡಿಸಲಾಗುತ್ತದೆ ಎಂದು ಹೇಳಿದರು.

ಅಡಕೆ ಸಮಾವೇಶದಲ್ಲಿ ಚರ್ಚೆ: 

ಜ.18ರಂದು ನಡೆಯಲಿರುವ ಅಡಕೆ ಬೆಳೆಗಾರರ ಬೃಹತ್ ಸಮಾವೇಶಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗಿದೆ. ಕೇಂದ್ರ ಕೃಷಿ ಸಚಿವರು, ರಾಜ್ಯ ತೋಟಗಾರಿಕಾ ಸಚಿವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಡಕೆ ಬೆಳೆಗಾರರ ಸಮಸ್ಯೆ ಬಗೆಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತೆಗೆದುಕೊಳ್ಳಬಹುದಾದ ನಿಲುವಿನ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.

ಪೂಜಾ ಕಾರ್ಯಕ್ರಮದಲ್ಲಿ ಯೋಗೇಂದ್ರ ಅವಧೂತ ಸ್ವಾಮಿಗಳು, ಸಿಗಂದೂರು ರಾಮಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಇನ್ನಿತರರು ಪಾಲ್ಗೊಂಡಿದ್ದರು. ಸೋಮಶೇಖರ ಲ್ಯಾವಿಗೆರೆ, ಇಂದೂಧರ ಗೌಡ ಬೇಸೂರು, ಕಲಸೆ ಚಂದ್ರಪ್ಪ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.