Advertisement

ಶಿಕ್ಷಕರು ಸಂಘಟಿತ ಹೋರಾಟ ನಡೆಸಲಿ

09:57 AM Feb 27, 2019 | Team Udayavani |

ಬೆಳಗಾವಿ: ಶಿಕ್ಷಕರು ಬೇಡಿಕೆಗಳ ಈಡೇರಿಕೆಗಾಗಿ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದಾರೆ. ಆದರೆ ಇನ್ನೂ ಬಹುತೇಕ ಈಡೇರಿಲ್ಲ. ಹೀಗಾಗಿ ಸಂಘಟಿತ ಹೋರಾಟ ನಡೆಸುವ ಮೂಲಕ ಸರಕಾರಗಳ ಕಣ್ಣು ತೆರೆಸುವ ಕೆಲಸ ಮಾಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ ಮಾಡಿದರು.

Advertisement

ನಗರದ ಧರ್ಮನಾಥ ಭವನದಲ್ಲಿ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ವತಿಯಿಂದ ಮಂಗಳವಾರ ನಡೆದ 2018-19ನೇ ಸಾಲಿನ ಶೈಕ್ಷಣಿಕ ಸಮ್ಮೇಳನ ಹಾಗೂ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಸಂಘಟನೆಗಳು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಬಾರದು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘಗಳು ರಚನೆಯಾದರೂ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ. ಶಿಕ್ಷಕರ ಹಿತದೃಷ್ಟಿಯಿಂದ ಇದು ಸರಿಯಲ್ಲ ಎಂದರು. ಬೇಡಿಕೆ ಈಡೇರಿಕೆಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಆದರೆ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಈ ಬಗ್ಗೆ ನನಗೆ ವಿಶ್ವಾಸವಿಲ್ಲ. ಹೀಗಾಗಿ ಹೋರಾಟದಿಂದ ಹಿಂದೆ ಸರಿಯಬಾರದು ಎಂದು ಸಲಹೆ ನೀಡಿದರು.

ಯಾವುದೇ ಮಗು ಶಿಕ್ಷಣ ವಂಚಿತವಾಗಬಾರದು ಎಂಬ ಉದ್ದೇಶದಿಂದ ಆರ್‌ಟಿಇ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯದಲ್ಲಿ 2800 ಪ್ರಾಥಮಿಕ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದಾರೆ. ಅವುಗಳು ಮುಚ್ಚಿದರೆ ನಿರುದ್ಯೋಗಿ ಪದವೀಧರರು ಏನು ಮಾಡಬೇಕು ಎಂಬ ಬಗ್ಗೆ ಸಂಘಟನೆಗಳು ಹೋರಾಟ ಮಾಡದಿರುವುದಕ್ಕೆ ಏನು ಕಾರಣ ಎಂಬುದನ್ನು ತಿಳಿಸಬೇಕು ಎಂದು ಹೇಳಿದರು.

ವಿಪ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಕೆಲಸಗಳು ತೀವ್ರಗತಿಯಲ್ಲಿ ನಡೆಯುತ್ತಿಲ್ಲ. ಇವು ಮುಂದಕ್ಕೆ ಸಾಗದೇ ಇಲಾಖೆ ಕುಂಟುತ್ತ ಸಾಗಿದೆ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರನ್ನು ನೇಮಿಸಬೇಕಾಗಿದೆ. ಇದಕ್ಕೆ ಬಸವರಾಜ ಹೊರಟ್ಟಿ ಸೂಕ್ತ ಎಂದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ಆರ್‌ಟಿಐ ಯೋಜನೆ ಜಾರಿ ಮಾಡಿದಾಗಿನಿಂದ ಸರಕಾರಿ ಶಾಲೆಗಳನ್ನು ಬಂದ್‌ ಮಾಡಲಾಗುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಸರಕಾರ ಪ್ರೋತ್ಸಾಹಿಸುತ್ತಿದೆ. ಶಿಕ್ಷಕರ ಒತ್ತಡ ಸರರ್ಕಾರ ಗಮನಿಸಬೇಕು ಎಂದರು.

Advertisement

ರಾಜ್ಯಸಭಾ ಸದಸ್ಯ ಡಾ| ಪ್ರಭಾಕರ ಕೋರೆ ಮಾತನಾಡಿ, ಪೋಷಕರು ಗುಣಾತ್ಮಕ ಶಿಕ್ಷಣ ಸಿಗುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಾರೆ. ಹೀಗಾಗಿ ಸರಕಾರಿ ಶಾಲೆಗಳು ಮುಚ್ಚುತ್ತಿವೆ ಎಂದು ಹೇಳಿದರು. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಅನಿಲ ಬೆನಕೆ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯ ಚೌಡರಡ್ಡಿ ತೂಪಲ್ಲಿ, ಸಂಘದ ಅಧ್ಯಕ್ಷ ಎಚ್‌. ಕೆ. ಮಂಜುನಾಥ, ಉಪಾಧ್ಯಕ್ಷ ರಾಮು ಗುಗವಾಡ, ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಪೂಜಾರಿ, ಖಜಾಂಚಿ ಪಿ.ಎ. ಸರಸ್ವತಿ ಸೇರಿದಂತೆ ಪದಾಧಿಕಾರಿಗಳು ಇದ್ದರು.

ಶಿಕ್ಷಣ ಇಲಾಖೆ ಅನಾಥ 
ಸಮ್ಮಿಶ್ರ ಸರ್ಕಾರದಲ್ಲಿ ಹೊರಟ್ಟಿ ಅವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಬೇಕಾಗಿತ್ತು. ಶಿಕ್ಷಕರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಹೊರಟ್ಟಿ ಶಿಕ್ಷಕರ ಪ್ರತಿನಿ ಧಿಯಾದವರನ್ನು ಒಪ್ಪದಿರುವುದು ಸರಿಯಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಅನಾಥವಾಗಿದೆ ಎಂದು ವಿಧಾನಪರಿಷತ್‌ ಸದಸ್ಯ ಅರುಣ ಶಹಾಪುರ ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next