Advertisement

Belagavi: ಮುನಿದ ಮುಂಗಾರು; ನೀರಿನ ನಿರೀಕ್ಷೆಯಲ್ಲಿ ಕೆರೆಗಳು

06:50 PM Aug 11, 2023 | Team Udayavani |

ಬೆಳಗಾವಿ: ಸನಿಹದಲ್ಲೇ ಜೀವನದಿ ಕೃಷ್ಣೆ ಇದ್ದರೂ ನೆಮ್ಮದಿ ಇಲ್ಲ. ಬೇಸಿಗೆ ಬಂತೆಂದರೆ ನೀರಿಗಾಗಿ ಪರದಾಟ. ಸಾಕಷ್ಟು ಕೆರೆಗಳಿದ್ದರೂ ಒಡಲು ಖಾಲಿ. ಇದು ಗಡಿ ಜಿಲ್ಲೆ ಬೆಳಗಾವಿಯ ಚಿತ್ರ. ಮುಂಗಾರು ಮಳೆಯ ಹೊಯ್ದಾಟ ಹತ್ತಾರು ಸಮಸ್ಯೆಗಳನ್ನು ಹುಟ್ಟುಹಾಕಿದೆ. ಮಳೆಗಾಲದಲ್ಲೂ ಕೆಲವು ಕಡೆ ಕುಡಿಯುವ ನೀರಿನ ಬವಣೆ ಮುಂದುವರಿದಿದೆ. ಅನಿವಾರ್ಯ ಎನ್ನುವಂತೆ ಬರ ಘೋಷಣೆಯ ಸ್ಥಿತಿ ನಿರ್ಮಾಣ ಮಾಡಿದೆ.

Advertisement

ಶುಕ್ರವಾರ ಬೆಳಗಾವಿ ಜಿಲ್ಲೆಯ ಅಥಣಿಗೆ ಆಗಮಿಸಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಈಗ ಬರ ಘೋಷಣೆ ಮತ್ತು ಕೆರೆ ತುಂಬಿಸುವ ಯೋಜನೆಯ ಸವಾಲು ಇದೆ. ಕಳೆದ ಎರಡು ದಿನಗಳ ಹಿಂದೆ ಜಿಲ್ಲೆಯ ಶಾಸಕರ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿಗಳ ಎದುರು ಇದೇ ಒತ್ತಾಯಗಳು ಕೇಳಿಬಂದಿವೆ.

ಮುಂಗಾರು ಮಳೆಯ ವೈಫಲ್ಯ ಜಿಲ್ಲೆಯ ಅಥಣಿ, ಕಾಗವಾಡ, ರಾಮದುರ್ಗ ಸೇರಿದಂತೆ ಕೆಲವು ಭಾಗದಲ್ಲಿ ಮತ್ತೆ ಬರಗಾಲದ ಆತಂಕ ಮೂಡಿಸಿದೆ. ಜೂನ್‌ ದಲ್ಲಿ ಉಂಟಾದ ಪ್ರತಿಶತ 68 ರಷ್ಟು ಮಳೆಯ ಕೊರತೆ ಎಲ್ಲವನ್ನೂ ಅಸ್ತವ್ಯಸ್ತ ಮಾಡಿದರೆ, ಇನ್ನೊಂದು ಕಡೆ ಗ್ರಾಮೀಣ ಪ್ರದೇಶದ ಜೀವನಾಡಿಯಾಗಿರುವ ಕೆರೆಗಳು ಈಗಲೂ ಖಾಲಿಯಾಗಿ ನಿಂತಿರುವುದು ಬರದ ಸ್ಥಿತಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಮುಖ್ಯವಾಗಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ 288 ಕೆರೆಗಳಲ್ಲಿ 119 ಕೆರೆಗಳು ಈಗಲೂ ಸಂಪೂರ್ಣ ಖಾಲಿಯಾಗಿರುವದು ಮುಂದಿನ ದಿನಗಳು ಅಂದುಕೊಂಡಂತೆ ನಿರಾಳವಾಗಿಲ್ಲ ಎಂಬ ಸೂಚನೆ ನೀಡಿವೆ. ಜುಲೈ ಅಂತ್ಯದವರೆಗೆ ಜಿಲ್ಲೆಯಲ್ಲಿ 780 ಕ್ಕೂ ಹೆಚ್ಚು ಕೆರೆಗಳಲ್ಲಿ ಬಹುತೇಕ ಕೆರೆಗಳು ಇನ್ನೂ ಒಡಲು ತುಂಬಿಕೊಂಡಿಲ್ಲ. ಕೆರೆಗಳ ಜಾಗದಲ್ಲಿ ನೀರಿನ ಬದಲು ಹಚ್ಚಹಸಿರು ಹುಲ್ಲು ಮತ್ತು ಕಸಕಡ್ಡಿ ಕಾಣುತ್ತಿವೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿನ ಬಹುತೇಕ ಕೆರೆಗಳು ದೊಡ್ಡ ಪ್ರಮಾಣದ ವಿಸ್ತೀರ್ಣ ಹೊಂದಿವೆ ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಈ ಎಲ್ಲ ಕೆರೆಗಳು ಈ ವರ್ಷ ಭರ್ತಿಯಾಗುವುದು ಅನುಮಾನ. ಇದೇ ಸ್ಥಿತಿ ಜಿಲ್ಲಾ
ಪಂಚಾಯತ್‌ ವ್ಯಾಪ್ತಿಯ ಕೆರೆಗಳಲ್ಲೂ ಇದೆ. ಹೀಗಾಗಿ ಕೆರೆ ತುಂಬಿಸುವ ಯೋಜನೆಗಳ ಮೇಲೆ ಅವಲಂಬನೆ ಅನಿವಾರ್ಯ ಎನ್ನುವಂತಾಗಿದೆ.

Advertisement

ಮತ್ತೆ ಬರದ ಛಾಯೆ: ಆತಂಕ ಪಡುವ ಸಂಗತಿ ಎಂದರೆ ಗಡಿ ಭಾಗದ ಅಥಣಿಯಲ್ಲಿ ಮತ್ತೆ ಬರದ ಭೀತಿ ಕಾಣಿಸಿಕೊಂಡಿದೆ. ಪಕ್ಕದಲ್ಲೇ ಕೃಷ್ಣಾ ನದಿ ಹರಿಯುತ್ತಿದ್ದರೂ ಉತ್ತರ ಭಾಗದ ಹಳ್ಳಿಗಳಿಗೆ ಬರದ ಚಿಂತೆ ಬಿಟ್ಟಿಲ್ಲ. ಸಾಲದ್ದಕ್ಕೆ ಅಥಣಿ ತಾಲೂಕಿನ 36 ಕೆರೆಗಳಲ್ಲಿ 30 ಕೆರೆಗಳು ತುಂಬದೆ ಖಾಲಿ ಇವೆ. ಐದು ಕೆರೆಗಳು ಸುಮಾರು ಶೇ. 1 ರಿಂದ 30 ರಷ್ಟು ನೀರು ತುಂಬಿಕೊಂಡಿವೆ. ಇದರಿಂದಾಗಿ ತಾಲೂಕಿನ ಜನರು ಬರ ಪೀಡಿತ ಪ್ರದೇಶ ಎಂದು ಘೋಷಣೆಗೆ ಸರಕಾರದ ಮೇಲೆ ಒತ್ತಡ ಹಾಕಿದ್ದಾರೆ.

ತಾಲೂಕಿನ ಕರಿಮಸೂತಿ ಏತ ನೀರಾವರಿ ಯೋಜನೆಯ ಲಾಭ ಅದರ ವ್ಯಾಪ್ತಿಯ ಕೆರೆಗಳಿಗೆ ದೊರೆತಿವೆ. ನಾಲ್ಕು ಕೆರೆಗಳು ಈ ನೀರಾವರಿ ಯೋಜನೆಯಿಂದ ತುಂಬಿಕೊಂಡಿವೆ. ಆದರೆ ನೀರಾವರಿ ಸೌಲಭ್ಯ ಇಲ್ಲದ ಐಗಳಿ, ಕೋಹಳ್ಳಿ, ರಾಮತೀರ್ಥ, ಅರಟಾಳ, ಅಡಳಹಟ್ಟಿ, ತೇಲಸಂಗ ಮೊದಲಾದ ಗ್ರಾಮಗಳ ಕೆರೆಗಳು ಮಳೆಗಾಲದ ಸಮಯದಲ್ಲೂ ನೀರಿಲ್ಲದೆ ಒಣಗಿ ನಿಂತಿವೆ.

ಅದೇ ರೀತಿ ಕಾಗವಾಡ ತಾಲೂಕಿನ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಈ ಎರಡೂ ತಾಲೂಕುಗಳಲ್ಲಿ ಅರ್ಧಭಾಗ ನದಿ ಪ್ರದೇಶ ಹೊಂದಿದ್ದರೆ ಇನ್ನರ್ಧ ಭಾಗ ಸದಾ ಬರಗಾಲದ ದವಡೆಗೆ ಸಿಲುಕುತ್ತ ಬಂದಿದೆ. ಇದರ ಪರಿಣಾಮ ಕಾಗವಾಡ ತಾಲೂಕಿನ ಹಲವು ಹಳ್ಳಿಗಳಲ್ಲಿ ಈಗಲೂ ಕುಡಿಯುವ ನೀರಿಗಾಗಿ ಪರದಾಟ ಕಣ್ಣಿಗೆ ರಾಚುತ್ತದೆ.

ಕಾಗವಾಡ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಾಗವಾಡ, ಅನಂತಪುರ, ಮಂಗಸೂಳಿ, ಶೇಡಬಾಳ, ಗುಂಡೇವಾಡಿ, ಖಿಳೇಗಾವ್‌, ಅಜೂರೆ ಸೇರಿದಂತೆ ಎಲ್ಲ 23 ಕೆರೆಗಳು ನೀರಿಲ್ಲದೆ ಒಣಗಿ ನಿಂತಿವೆ. ಅದೇ ರೀತಿ ಚಿಕ್ಕೋಡಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯ 17 ಕೆರೆಗಳ ಪೈಕಿ ಇನ್ನೂ 13 ಕೆರೆಗಳು ಖಾಲಿ ಇದ್ದರೆ ರಾಮದುರ್ಗ ತಾಲೂಕಿನಲ್ಲಿ 28 ಕೆರೆಗಳಲ್ಲಿ 20 ಕೆರೆಗಳು ಮತ್ತು ಸವದತ್ತಿ ತಾಲೂಕಿನಲ್ಲಿ 36 ಕೆರೆಗಳಲ್ಲಿ 27 ಕೆರೆಗಳು ಇನ್ನೂ ಖಾಲಿ ಖಾಲಿಯಾಗಿ ಕಾಣುತ್ತಿವೆ. ಉಳಿದ ಯಾವ ಕೆರೆಯೂ ಇದುವರೆಗೆ ಪ್ರತಿಶತ 50 ರಷ್ಟು ಭರ್ತಿಯಾಗಿಲ್ಲ.

ಕಾಗವಾಡ ತಾಲೂಕಿನಲ್ಲಿ ಮತ್ತೆ ಬರದ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಯಾವ ಕೆರೆಗಳಲ್ಲೂ ನೀರಿಲ್ಲ. ಕುಡಿಯುವ
ನೀರಿನ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಇದೆಲ್ಲದರ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ   ತರಲಾಗಿದೆ. ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡುವಂತೆ ಕೇಳಿದ್ದೇವೆ. ಸರಕಾರ ಕಾಗವಾಡ ಮತ್ತು ಅಥಣಿ ಬರ ಪೀಡಿತ ತಾಲೂಕು ಘೋಷಣೆ ಮಾಡುವ ವಿಶ್ವಾಸ ಇದೆ.
ರಾಜು ಕಾಗೆ, ಕಾಗವಾಡ ಶಾಸಕರು

ಅಥಣಿ ತಾಲೂಕಿನಲ್ಲಿ ಮುಂಗಾರು ಸಂಪೂರ್ಣ ವಿಫಲವಾಗಿದೆ. ಜೂನ್‌ ಮತ್ತು ಜುಲೈದಲ್ಲಿ ನಿರೀಕ್ಷಿಸಿದಷ್ಟು ಮಳೆ ಬರಲೇ ಇಲ್ಲ. ಇದರಿಂದ ಯಾವ ಕೆರೆಗಳಲ್ಲಿ ನೀರಿನ ಸಂಗ್ರಹ ಕಾಣುತ್ತಿಲ್ಲ. ಇದೇ ರೀತಿ ಮಳೆ ಕೈಕೊಟ್ಟರೆ ಮುಂದೆ ಪರಿಸ್ಥಿತಿ ಕೆಟ್ಟದಾಗಬಹುದು.
ಈ ಹಿನ್ನಲೆಯಲ್ಲಿ ಸರಕಾರಕ್ಕೆ ಅಥಣಿಯನ್ನು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡುವಂತೆ ಮನವಿ ಮಾಡಲಾಗಿದೆ.
ಮಹೇಶ ಕುಮಟಳ್ಳಿ, ಮಾಜಿ ಶಾಸಕರು

ಕಾಗವಾಡ ಮತ್ತು ಅಥಣಿ ತಾಲೂಕಿನಲ್ಲಿ ಬರದ ಸ್ಥಿತಿ ಇದೆ. ಮಳೆ ಕೈಕೊಟ್ಟಿದೆ. ಕೆರೆಗಳು ಖಾಲಿ ಇವೆ. ಕೋಹಳ್ಳಿ ಸೇರಿದಂತೆ
ತಾಲೂಕಿನ ಮುಖ್ಯ ಕೆರೆಗಳಲ್ಲಿ ನೀರೇ ಇಲ್ಲ. ಸರಕಾರ ಕೂಡಲೇ ಈ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕು. ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಬೇಕು.
ಮಹಾದೇವ ಮಡಿವಾಳ,
ರೈತ ಮುಖಂಡ, ಅಥಣಿ

ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next