Advertisement
ಶೇಷನಾಗ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಈ ಪ್ರದೇಶದಲ್ಲಿ ಆಮ್ಲಜನಕ ಕೊರತೆ ಉಂಟಾಗುತ್ತಿದ್ದು, ಹೀಗಾಗಿ ಆರೋಗ್ಯದಲ್ಲಿ ಏರುಪೇರು ಆಗುತ್ತಿರುವುದರಿಂದ ಬೆಳಗಾವಿಯ ಈ 32 ಪ್ರವಾಸಿಗರು ವಾಪಸ್ ಬಂದಿದ್ದು, ಈ ಬಗ್ಗೆ ರವಿವಾರ ಸಂಜೆ ಉದಯವಾಣಿಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
Related Articles
Advertisement
ವಿಪರೀತ ಮಳೆ ಆಗುತ್ತಿರುವುದರಿಂದ ಹವಾಮಾನ ವೈಪರೀತ್ಯದಿಂದಾಗಿ ಸದ್ಯ ಹೆಲಿಕಾಪ್ಟರ್ ವ್ಯವಸ್ಥೆಯೂ ಬಂದ್ ಮಾಡಲಾಗಿದೆ. ಇಂಥ ಒಂದು ಸಂದಿಗ್ಧ ಸ್ಥಿತಿಯಲ್ಲಿ ಗುಡ್ಡ ಏರಿ ನಡೆದುಕೊಂಡು ಹೋಗುವುದು ಅಸಾಧ್ಯ. ಹೀಗಾಗಿ ಸರ್ಕಾರ ಈ ಮಾರ್ಗ ಬಂದ್ ಮಾಡಿದೆ. ಸೋಮವಾರದಿಂದ ವೀರನಾಗ ಕಡೆಗೆ ತೆರಳುವ ಮಾರ್ಗದಿಂದ ದರ್ಶನ ಶುರುವಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ. ಸಾಧ್ಯವಾದರೆ ದರ್ಶನ ಪಡೆದುಕೊಂಡು ಬೆಳಗಾವಿಗೆ ವಾಪಸ್ ಆಗುತ್ತೇವೆ ಎನ್ನುತ್ತಾರೆ ಶಿವಾಜಿ ಮಂಡೋಳಕರ.
ನಮ್ಮ ಕಣ್ಣೆದುರು 3 ಶವ ಎತ್ತಿಕೊಂಡು ಹೋದರು ಶೇಷನಾಗ ಪ್ರದೇಶದಲ್ಲಿ ಗುಡ್ಡ ಹತ್ತುವಾಗ ಉಸಿರಾಟದ ತೊಂದರೆ ಬಹಳಷ್ಟು ಜನರಿಗೆ ಆಗಿದೆ. ಇದರ ಅನುಭವ ನಮ್ಮ ಗುಂಪಿನ ಬಹುತೇಕರಿಗೆ ಆಗಿದೆ. ಹೀಗಾಗಿ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ವಾಪಸ್ ಪೆಹಲಗಾಮ್‌ಕ್ಕೆ ಬಂದಿದ್ದೇವೆ. ಹೃದಯಾಘಾತ ಹಾಗೂ ಉಸಿರಾಟದ ತೊಂದರೆಯಿಂದ ಮೂವರು ಮೃತಪಟ್ಟಿದ್ದಾರೆ. ಮೂವರ ಮೃತದೇಹಗಳನ್ನು ಎತ್ತಿಕೊಂಡು ತರುತ್ತಿರುವುದು ನಮ್ಮ ಕಣ್ಣೆದುರು ನೋಡಿ ಆತಂಕಗೊಂಡಿದ್ದೇವೆ ಎಂದು ಮಹಾನಗರ ಪಾಲಿಕೆ ಸದಸ್ಯ ಶಿವಾಜಿ ಮಂಡೋಳಕರ ತಿಳಿಸಿದರು. ಕುದುರೆ, ಕಾಲ್ನಡಿಗೆಯಲ್ಲಿ ವಾಪಸ್ ಶೇಷನಾಗದಿಂದ ಪೆಹಲಗಾಮ್ ದೂರ 16 ಕಿ.ಮೀ. ಕ್ರಮಿಸುವುದು ಕಷ್ಟಕರ. ನಮ್ಮ ತಂಡದಲ್ಲಿಯ ಕೆಲವರು ಕುದುರೆ ಸಹಾಯದಿಂದ ಬಂದರೆ ಇನ್ನುಳಿದವರು ಕಾಲ್ನಡಿಗೆಯಲ್ಲಿ ಬಂದಿದ್ದೇವೆ. 6 ಕಿ.ಮೀವರೆಗೆ ಪಿಶುಟಾಪ್ ಎಂಬ ಗ್ರಾಮದವರೆಗೆ ವಿಪರೀತ ಮಳೆ ಇತ್ತು. ಇಲ್ಲಿಂದ ಚಂದನವಾಡಿ 3 ಕಿ.ಮೀ. ಅಂತರವಿದೆ. ಅಲ್ಲಿಂದ ಸ್ವಲ್ಪ ಅಂತರದಲ್ಲಿ ಬಂದಾಗ ತುಸು ಮಳೆ ಕಡಿಮೆ ಇದೆ ಎಂದು ಎಸ್‌ಬಿಐ ಅಧಿಕಾರಿ ಮಾರುತಿ ಬಂಬರಗೇಕರ ತಿಳಿಸಿದರು.
ಮೊಬೈಲ್ ಸಂಪರ್ಕ ಕಡಿತ
ನಮ್ಮ ತಂಡದಲ್ಲಿಯ ಒಬ್ಬ ವ್ಯಕ್ತಿ ಕುದುರೆ ಏರಿ ಮುಂದೆ ಸಾಗಿದ್ದಾರೆ. ನಾವು ಹಿಂದಿನಿಂದ ಬರುತ್ತಿದ್ದೇವೆ ಎಂದುಕೊಂಡು ಕುದುರೆಯಲ್ಲಿ ಪಂಚಕರಣಿವರೆಗೆ ಹೋಗಿದ್ದಾರೆ. ಮೊಬೈಲ್ ಸಂಪರ್ಕ ಸಾಧ್ಯವಾಗದ್ದಕ್ಕೆ ಬಹಳ ಕಷ್ಟವಾಯಿತು. ಇಲ್ಲಿ ಪೋಸ್ಟಪೇಯ್ಡ್ ಮೊಬೈಲ್ ನೆಟ್‌ವರ್ಕ್ ಮಾತ್ರ ಲಭ್ಯ ಆಗುತ್ತಿವೆ. ಪಂಜಾಬ್‌ನ ಪ್ರವಾಸಿಗರ ಮೂಲಕ ಅವರ ಮೊಬೆ„ಲ್‌ದಿಂದ ಸಂಪರ್ಕ ಮಾಡಿ ಪಂಚಕರಣಿಯಿಂದ 7-8 ಸಾವಿರ ರೂ. ನೀಡಿ ಕುದುರೆ ಸಹಾಯದಿಂದ ಮತ್ತೆ ವಾಪಸ್ ಆಗಿದ್ದಾರೆ ಎಂದು ಮಾರುತಿ ಬಂಬರಗೇಕರ ತಿಳಿಸಿದರು.
-ಭೈರೋಬಾ ಕಾಂಬಳೆ