Advertisement

ಆಲೂ ನೀರುಪಾಲು, ಮನೆ ಮಣ್ಣುಪಾಲು

01:01 PM Aug 22, 2019 | Team Udayavani |

ಭೈರೋಬಾ ಕಾಂಬಳೆ
ಬೆಳಗಾವಿ:
ರಪ ರಪ ಸುರಿದ ಮಳೆಯಿಂದ ಗುಡ್ಡದ ನೀರೆಲ್ಲ ಊರಿಗೆ ಬಂದು ಮಣ್ಣಿನ ಮನೆಗಳನ್ನೆಲ್ಲ ಮಣ್ಣು ಪಾಲು ಮಾಡಿದರೆ, ಪ್ರವಾಹದಿಂದ ಬೆಳೆಯೆಲ್ಲ ಕೊಚ್ಚಿ ಹೋಗಿದೆ. ಬಡವರ ಮನೆ ಧರೆಗುರುಳಿ ಅನೇಕರು ಮನೆ ಕಳೆದುಕೊಂಡು ಬೀದಿ ಪಾಲಾದರೆ. ಅತ್ತ ರೈತರ ಕೈಗೆ ಬಂದ ಆಲೂಗಡ್ಡೆ, ಶೇಂಗಾ ಸೇರಿದಂತೆ ಅನೇಕ ತರಕಾರಿ ಬೆಳೆಗಳು ಮಳೆ ನೀರಿನಲ್ಲಿ ಕೊಚ್ಚಿ ಕೊಳೆತು ಹೋಗಿ ಬದುಕು ಸರ್ವನಾಶ ಮಾಡಿದೆ.

Advertisement

ತಾಲೂಕಿನ ಮೋದಗಾ ಗ್ರಾಮದಲ್ಲಿ ಸುಮಾರು 80ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಹಿಂದೆ ಎಂದೂ ಕಂಡು ಕೇಳರಿಯದಷ್ಟು ಮಳೆ ಬಿದ್ದಿದೆ. ಗ್ರಾಮದಿಂದ ಸ್ವಲ್ಪ ದೂರದಲ್ಲಿಯೇ ಇರುವ ಗುಡ್ಡದಿಂದ ನೀರು ಪ್ರವಾಹದಂತೆ ಹರಿದು ಬಂದಿದೆ. ಬಂದ ನೀರೆಲ್ಲ ನೇರವಾಗಿ ಪ್ರವೇಶ ದ್ವಾರದಿಂದಲೇ ಊರಿಗೆ ನುಗ್ಗಿ ಜನರ ಬದುಕನ್ನು ಮಣ್ಣುಪಾಲು ಮಾಡಿದೆ.

ಮಣ್ಣಿನ ಮನೆಗಳೆಲ್ಲ ನೀರು ಪಾಲಾಗಿ ಬಿದ್ದು ಹೋಗಿದ್ದು, ಕೆಲ ಮನೆಗಳು ಸಂಪೂರ್ಣ ಕುಸಿದಿದ್ದರೆ, ಇನ್ನೂ ಕೆಲ ಮನೆಗಳ ಗೋಡೆಗಳು ಬಿದ್ದು ವಾಸಕ್ಕೂ ಯೋಗ್ಯವಾಗದಂತಾಗಿವೆ. ಅಲ್ಪಸ್ವಲ್ಪ ಗೋಡೆಗಳು ಬಿದ್ದಿದ್ದರಿಂದ ಜನರು ಜೀವ ಕೈಯಲ್ಲಿ ಹಿಡಿದು ಮನೆಯೊಳಗೆ ಹೋಗಬೇಕಾಗಿದೆ. ಬಿದ್ದ ಮನೆಗಳ ಗೋಡೆಗಳಿಗೆ ಕೆಲವರು ಪ್ಲಾಸ್ಟಿಕ್‌ ಹಾಕಿದ್ದರೆ, ಇನ್ನೂ ಕೆಲವರು ದಂಟುಗಳಿಂದ ಮುಚ್ಚಿ ಬಿಸಿಲು, ಮಳೆ ಬಾರದಂತೆ ತಡೆದಿದ್ದಾರೆ. ಆದರೆ ಮೇಲ್ಛಾವಣಿಗಳಿಗೆ ಇರುವ ಆಧಾರ ಬಿದ್ದು ಹೋಗಿದ್ದರಿಂದ ಇಂದೋ, ನಾಳೆಯೋ ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕೂಲಿ ಮಾಡಿ ಹೊಟ್ಟಿ ನಡಿತೈತಿ. ಹಂಗೋ ಹಿಂಗೋ ಮಾಡಿ ಹಿರ್ಯಾರ ಮನಿ ಕಟ್ಟಿದ್ರು. ಭಾಳ ವರ್ಸದ ಮನಿ, ಮಣ್ಣಿನ್ಯಾಗ ಕಟ್ಟಿದ್ದು, ಜೋರ ಸುರದ ಮಳಿಗಿ ಗ್ವಾಡ್ಯಾಗ ನೀರ ಹೊಕ್ಕ ಮನಿ ಬಿದ್ದೈತಿ. ಗ್ವಾಡಿ ಬೀಳೊದ ಮೊದಲ ಗೊತ್ತ ಆಗಿದ್ರಿಂದ ಓಡಿ ಹೊರ ಬಂದೀವಿ. ಇಲ್ಲದಿದ್ರ ನಮ್ಮ ಜೀವಾ ಇರತಿರಲಿಲ್ಲ ಎಂದು ಮನೆ ಕಳೆದುಕೊಂಡ ಗ್ರಾಮಸ್ಥರಾದ ಶರ್ಮಿಳಾ ಬಡಿಗೇರ ಹಾಗೂ ಫಕೀರವ್ವ ಚೌಗಲಾ ನೋವು ತೋಡಿಕೊಂಡರು.

ಕೈಗೆ ಬಂದ ತುತ್ತು ಬಾಯಿಗೆ ಬರ್ಲಿಲ್ಲ: ಮೋದಗಾ ಗ್ರಾಮದಿಂದ ಸುಮಾರು 10-12 ಕಿಮೀ ಒಳ ಹಾದಿ ಹಿಡಿದು ಮರಿಕಟ್ಟಿ ಗ್ರಾಮದ ಮೂಲಕ ಸಾಗಿದರೆ ರಾಷ್ಟ್ರೀಯ ಹೆದ್ದಾರಿ ಸಿಗುತ್ತದೆ. ಈ ಊರಿಗಿಂತಲೂ ಎತ್ತರ ಪ್ರದೇಶವಾದ ಗುಡ್ಡದಿಂದ ನೀರು ಹರಿದು ಬಂದಿದೆ. ಸುತ್ತಲಿನ ನೂರಾರು ಎಕರೆ ಭೂ ಪ್ರದೇಶದಲ್ಲಿ ಬೆಳೆದ ತರಕಾರಿ, ಶೇಂಗಾ, ಎಲೆಕೋಸು, ಹೂಕೋಸು, ಕೋತಂಬರಿ, ಸೋಯಾಬಿನ್‌, ಭತ್ತ ಸೇರಿದಂತೆ ಅನೇಕ ಬೆಳೆಗಳು ಕೊಚ್ಚಿ ಹೋಗಿವೆ. ಮಾರುದ್ದ ಬೆಳೆದು ನಿಂತಿದ್ದ ಬೆಳೆಗಳಲ್ಲಿ 10-15 ದಿನಗಳ ಕಾಲ ನೀರು ನಿಂತಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಬಿದ್ದ ನೀರೆಲ್ಲ ಬೇರೆ ಕಡೆಗೆ ಆಗಲೀ ಅಥವಾ ಮುಖ್ಯ ದ್ವಾರದ ಬಳಿ ಇರುವ ಗಟಾರು ಮೂಲಕ ಹೋಗುವ ವ್ಯವಸ್ಥೆಯೇ ಇರಲಿಲ್ಲ. ಸರಾಗವಾಗಿ ನೀರು ಹರಿದು ಹೋಗದೇ ಊರಿಗೆ ನುಗ್ಗಿ ಅನಾಹುತ ಮಾಡಿದೆ. ಆಗ ಗ್ರಾಪಂ ಸದಸ್ಯ ಶಿವಾಜಿ ಅಷ್ಟೇಕರ ಅವರು ತಮ್ಮ ಬಳಿ ಇರುವ ಜೆಸಿಬಿ ಬಳಸಿ ನೀರು ಹೊರ ಹರಿದು ಹೋಗುವಂತೆ ಮಾಡಿದ್ದಾರೆ. ಸುಮಾರು 80 ಗಂಟೆಗಳ ಕಾಲ ತಮ್ಮ ಜೆಸಿಬಿಯಿಂದ ಕೆಲಸ ಮಾಡಿಸಿ ತೊಂದರೆ ತಪ್ಪಿಸಿದ್ದಾರೆ. ಗ್ರಾಮಸ್ಥರಿಗೆ ಸಮಸ್ಯೆ ಆಗದಿರಲಿ ಎಂಬ ಉದ್ದೇಶದಿಂದಲೇ ಮುಂದಿನ ಅನಾಹುತ ತಪ್ಪಿಸಿದ್ದಾರೆ. ಮಳೆಯಿಂದ ದನದ ಕೊಟ್ಟಿಗಳೂ ಬಿದ್ದಿವೆ. ಹೀಗಾಗಿ ಗ್ರಾಮದಲ್ಲಿ ಪ್ರತಿಷ್ಠಾಪಿಸುವ ಶ್ರೀ ಗಣೇಶೊತ್ಸವ ಮಂಡಳದ ಮಂಟಪದಲ್ಲಿಯೇ ದನದ ಕೊಟ್ಟಿಗೆಯ ಶೆಡ್‌ ನಿರ್ಮಿಸಿ ಕೊಡಲಾಗಿದೆ. ಈ ಮಂಟಪದ ವೇದಿಕೆ ಮೇಲೆ 7 ಜಾನುವಾರುಗಳನ್ನು ಕಟ್ಟಲಾಗಿದೆ. ನಿತ್ಯ ಮೇವು ಹಾಗೂ ನೀರು ತಂದು ಹಾಕಲಾಗುತ್ತಿದೆ.

Advertisement

ಗ್ರಾಮದಲ್ಲಿ ಬೆಳೆದ ಬಟಾಟಿ ಬೆಳೆಯಂತೂ ಹೆಸರಿಗೆ ಇಲ್ಲದಂತಾಗಿದೆ. ಸಂಪೂರ್ಣ ಕೊಳೆತಿದೆ. ಇನ್ನು ಜಮೀನು ಸ್ವಚ್ಛ ಮಾಡಿ ಬೇರೆ ಬೆಳೆ ಬೆಳೆಯೋದೇ ಕಷ್ಟಕರವಾಗಿದೆ. ಇಷ್ಟೆಲ್ಲ ಬೆಳೆ ಹಾನಿಯಾದರೂ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮನೆ ಕಳೆದುಕೊಂಡ ಸುಮಾರು 29 ಜನರಿಗೆ ಸದ್ಯ ಮೊದಲ ಹಂತದ 3800 ರೂ. ಮೊತ್ತದ ಚೆಕ್‌ ತಲುಪಿದ್ದು, ಬಾಕಿ ಉಳಿದ 6200 ರೂ. ಮೊತ್ತದ ಚೆಕ್‌ಗಾಗಿ ಕಾಯುತ್ತಿದ್ದಾರೆ.

ಶಾಲಾ ಪುಸ್ತಕ ನಾಲ್ಕು ದಿನ ಒಣಗಿಸಿದ್ರು
ಭಾರೀ ಮಳೆ ಯಾರನ್ನೂ ಬಿಟ್ಟಿಲ್ಲ. ಮನೆ ಒಳಗಿದ್ದ ಶಾಲಾ ಪುಸ್ತಕಗಳೂ ನೀರು ಪಾಲಾಗಿವೆ. ಮೋದಗಾ ಗ್ರಾಮದ ವಿಲಾಸ ಹಾಗೂ ವಿಠuಲ ಕುಸೋಜಿ ಅವರ ಮನೆ ಬಿದ್ದು ಬಹುತೇಕ ವಸ್ತುಗಳು ಮಣ್ಣಿನಡಿ ಸಿಲುಕಿಕೊಂಡಿವೆ. ಮೂರ್‍ನಾಲ್ಕು ಮಕ್ಕಳು ಶಾಲೆಗೆ ಹೋಗುತ್ತಾರೆ. ಶಾಲಾ ಪುಸ್ತಕಗಳೆಲ್ಲ ನೀರಿನಲ್ಲಿ ಬಿದ್ದು ತೊಯದಯ ತೊಪ್ಪೆಯಾಗಿದ್ದವು. ಸದ್ಯ ಮಳೆ ನಿಂತು ಬಿಸಿಲು ಬರುತ್ತಿದ್ದಂತೆ ಎಲ್ಲರೂ ಪುಸ್ತಕಗಳನ್ನು ಒಣಗಿಸುತ್ತಿದ್ದಾರೆ. ನಾಲ್ಕು ದಿನಗಳಿಂದ ಬಿಸಿಲಿಗೆ ಹಾಕಿದಾಗ ಈಗ ಸ್ವಲ್ಪ ಒಣಗಿವೆ.

ಮನ್ಯಾಗಿನ ಗಂಡಸರ ಗೌಂಡಿ ಕೈಕೆಳಗ, ಹೊಲದ ಕೆಲಸಕ್ಕ ಬ್ಯಾರೆದಾವರ ಮನಿಗಿ ಹೋಗ್ತಾರ. ನಾವೂ ಹೆಣ್ಮಕ್ಕಳ ಕೂಲಿ ಕೆಲಸಕ್ಕ ಹೋಗ್ತೀವಿ. ಇದರಾಗ ಬಂದ ರೊಕ್ಕದಾಗ ನಮ್ಮ ಜೀವನಾ ನಡದೈತಿ. ಅಷ್ಟರೊಳಗ ಮಕ್ಕಳನ್ನೂ ಸಾಲಿ, ಕಾಲೇಜಕ್ಕ ಕಳಸಾಕತ್ತೇವಿ. ಮನಿ ಬಿದ್ದ ಮ್ಯಾಲ ಒಂದ ವಾರ ಸಾಲ್ಯಾಗ ಇದ್ದ ಬಂದೀವಿ. ಈಗ ಬಾಜೂಕಿನ ಮನ್ಯಾಗ ಇದೀವಿ. ಇನ್ನ ಮುಂದ ಬಾಡಗಿ ಮನಿ ತಗೊಂಡ ಜೀವನಾ ನಡಸೋದರಿ.
ಭಾಗೀರಥಿ ಹಾಗೂ ಪಾರ್ವತಿ ಕುಸೋಜಿ,
  ಮನೆ ಕಳೆದುಕೊಂಡವರು

Advertisement

Udayavani is now on Telegram. Click here to join our channel and stay updated with the latest news.

Next