ಹುಕ್ಕೇರಿ: ಕೃಷಿಭಾಗ್ಯ, ನವೋದ್ಯಮ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿರುವ ರೈತ ಪರ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಮುಂದುವರಿಸಲಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದರು.
ಪಟ್ಟಣ ಹೊರವಲಯದ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ಬುಧವಾರ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಧಿಧೀನದ ಕೃಷಿ ಡಿಪ್ಲೊಮಾ ಕಾಲೇಜಿನ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ರೈತ ಸಮೂಹದ ಬಲವರ್ಧನೆಗೆ ರಾಜ್ಯ ಸರ್ಕಾರ ಸದಾ ಬದ್ಧ ಎಂದರು.
ಕೃಷಿಭಾಗ್ಯ ಯೋಜನೆಯಡಿ 32 ಸಾವಿರ ಕೃಷಿ ಹೊಂಡಗಳ ನಿರ್ಮಾಣ ಗುರಿ ಹೊಂದಲಾಗಿದೆ. ನವೋದ್ಯಮ ಯೋಜನೆ ರೂಪಿಸಲಾಗಿದೆ. ರೈತರ ಆರ್ಥಿಕತೆಗೆ ಶಕ್ತಿ ತುಂಬುವ ಅನೇಕ ಸಹಾಯಧನ ಯೋಜನೆಗಳನ್ನು ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ 226 ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಿಸಿದ್ದು ತಾತ್ಕಾಲಿಕವಾಗಿ 2 ಸಾವಿರ ಮಧ್ಯಂತರ ಪರಿಹಾರ ಘೋಷಿಸಲಾಗಿದೆ ಎಂದರು.
ರಾಜ್ಯದಲ್ಲಿ 4 ಕೃಷಿ ವಿಶ್ವವಿದ್ಯಾಲಯಗಳಿದ್ದು ಕೃಷಿ ಡಿಪ್ಲೊಮಾ ಕಾಲೇಜನ್ನು ಕಳೆದ ಬಿಜೆಪಿ ಸರ್ಕಾರವೇ ಸ್ಥಗಿತಗೊಳಿಸಿದೆ. ಹುಕ್ಕೇರಿಯಲ್ಲಿ ದಿ|ಉಮೇಶ ಕತ್ತಿ ಅವರ ಕನಸಿನಂತೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಹಾಗಾಗಿ ಬರುವ ದಿನಗಳಲ್ಲಿ ಇಲ್ಲಿಯೇ ಸ್ಥಳೀಯವಾಗಿ ರೈತ ಮಕ್ಕಳಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ಬಿಎಸ್‌ಸಿ ಅಗ್ರಿ, ಡಿಪ್ಲೊಮಾ ಸೇರಿದಂತೆ ಕೃಷಿ ಸಂಬಂಧಿತ ಕೋರ್ಸ್‌ಗಳನ್ನು ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ನಿಖಿಲ ಕತ್ತಿ ಮಾತನಾಡಿ, ಕೈತಪ್ಪಿ ಹೋಗಿದ್ದ ಈ ಕೃಷಿ ಕಾಲೇಜನ್ನು ಮರಳಿ ತರಲಾಗಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಬೇಕಾದ ಎಲ್ಲ ಸೌಲಭ್ಯ ಹೊಂದಿದ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು ಪುರುಷ-ಮಹಿಳೆಯರಿಗೆ ಪ್ರತ್ಯೇಕ ವಸತಿ ನಿಲಯಗಳ ನಿರ್ಮಾಣ ಭರದಿಂದ ಸಾಗಿದೆ. ಕಾರಣ ಹೊಸ ಕಟ್ಟಡದಲ್ಲಿ ಕೃಷಿ ಕೋರ್ಸ್‌ಗಳನ್ನು ಆರಂಭಿಸಬೇಕು ಎಂದು ಮನವಿ ಮಾಡಿದರು.
ಕುಲಸಚಿವ ಡಾ|ಎಂ.ವಿ.ಮಂಜುನಾಥ, ಆಡಳಿತ ಮಂಡಳಿ ಸದಸ್ಯ ಶ್ರೀನಿವಾಸ ಕೋಟ್ಯಾನ್, ತಾಪಂ ಇಒ ಪ್ರವೀಣ ಕಟ್ಟಿ, ಲೋಕೋಪಯೋಗಿ ಇಲಾಖೆ ಎಇಇ ಪ್ರವೀಣ ಮಾಡ್ಯಾಳ, ಸಹಾಯಕ ಅಭಿಯಂತರರಾದ ಪ್ರಭಾಕರ ಕಾಮತ, ಬಿ.ಆರ್.ಸಂದೀಪ, ಗುತ್ತಿಗೆದಾರ ಪುಂಡಲೀಕ ನಂದಗಾಂವಿ, ಪುರಸಭೆ ಮುಖ್ಯಾಧಿಕಾರಿ ಕಿಶೋರ ಬೆಣ್ಣಿ, ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಶೇಖರ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಆರ್.ಬಿ.ನಾಯ್ಕರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ವಿಜಯ ಮಿಶ್ರಿಕೋಟಿ, ಸಂಜೀವ ಮಿರಜಕರ, ನಿವೃತ್ತ ಅಧಿಕಾರಿ .ಬಿ.ಪಟ್ಟಣಶೆಟ್ಟಿ, ಮುಖಂಡರಾದ ಅಜ್ಜಪ್ಪ ಕಲ್ಲಟ್ಟಿ, ರಾಯಪ್ಪ ಢೂಗ, ಶೀತಲ ಬ್ಯಾಳಿ, ರವೀಂದ್ರ ಹಿಡಕಲ್ ಮತ್ತಿತರರು ಇದ್ದರು.
ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ|ಪಿ.ಎಲ್ .ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯ ಶಿಕ್ಷಕ ಶ್ರೀಶೈಲ ಹಿರೇಮಠ ನಿರೂಪಿಸಿದರು. ಕೃವಿವಿ ಡೀನ್ ಡಾ|ಆರ್.ಬಸವರಾಜಪ್ಪ ವಂದಿಸಿದರು.