ದಾವಣಗೆರೆ: ಬೆಳಗಾವಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟ ಸಂದರ್ಭದಲ್ಲಿ ಲಾಠಿ ಚಾರ್ಜ್ ನಡೆಸಿರುವುದನ್ನು ವಿರೋಧಿಸಿ ಗುರುವಾರ (ಡಿ.12) ಜಯದೇವ ವೃತ್ತದಲ್ಲಿ ಪಂಚಮಸಾಲಿ ಸಮಾಜ ಬಾಂಧವರು ತೀವ್ರ ಪ್ರತಿಭಟನೆ ನಡೆಸಿದರು.
ಬೆಳಗಾವಿ ಘಟನೆಯಿಂದ ಇಡೀ ಸಮಾಜಕ್ಕೆ ಅಪಾರ ನೋವಾಗಿದೆ. ಪಂಚಮಸಾಲಿ ಸಮಾಜ ಬಾಂಧವರು ಸಾತ್ವಿಕರು. ಸರ್ಕಾರಕ್ಕೆ ಕೆಟ್ಟ ಹೆಸರು ತರಲಿಕ್ಕೆ ಬಂದವರಲ್ಲ. ನ್ಯಾಯಯತ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲು ಬಂದವರು. ಅಂತಹವರ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ಖಂಡನೀಯ ಎಂದರು.
ಬೆಳಗಾವಿಯಲ್ಲಿ ಮಂಗಳವಾರ ನಡೆದ ಹೋರಾಟದ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಕಲ್ಲು ತೂರುವ ಮೂಲಕ ಹೋರಾಟದ ದಿಕ್ಕು ತಪ್ಪಿಸುವ ಮತ್ತು ಸಮಾಜಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಿದ್ದಾರೆ. ಸರ್ಕಾರ ಇಡೀ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಸಮಾಜಕ್ಕೆ ಎದುರಾದ ಕಪ್ಪುಚುಕ್ಕೆ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಹೋರಾಟಗಾರರ ವಿರುದ್ಧ ಎಲ್ಲ ಪ್ರಕರಣ ರದ್ಧುಪಡಿಸಬೇಕು. ಸರ್ಕಾರವೇ ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ಮುಂದೆ ಈ ರೀತಿಯಲ್ಲಿ ಎಲ್ಲಿಯೂ ಆಗದಂತೆ ಸರ್ಕಾರ ಜಾಗ್ರತೆ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಾಜಿ ಶಾಸಕ ಎಚ್.ಎಸ್. ಶಿವಶಂಕರ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಚಂದ್ರಶೇಖರ ಪೂಜಾರಿ, ಮಹಾಂತೇಶ್ ಒಣರೊಟ್ಟಿ, ಪ್ರಭು ಕಲ್ಬುರ್ಗಿ, ಎಚ್.ಎಸ್. ಯೋಗೇಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್. ರಾಜಶೇಖರ ನಾಗಪ್ಪ, ಅಶೋಕ್ ಗೋಪನಾಳ್ ಇತರರು ಇದ್ದರು.