Advertisement

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

11:37 PM Dec 25, 2024 | Team Udayavani |

ಬೆಳಗಾವಿ: ಪೊಲೀಸ್ ಠಾಣೆಯಲ್ಲಿ ಬಿಜೆಪಿ ಸಭೆ ನಡೆಸಲು ಅವಕಾಶ ಕೊಟ್ಟ ಕಾರಣಕ್ಕಾಗಿ ಸಂಬಂಧಪಟ್ಟ ಖಾನಾಪುರ ಠಾಣೆಯ ಅಧಿಕಾರಿಯ ಅಮಾನತುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

Advertisement

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರು ಸಿಪಿಐ ಮಂಜುನಾಥ್ ನಾಯಕ್ ಅಮಾನತು ಕುರಿತು ಕೇಳಿದ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ  ಪೊಲೀಸ್ ಠಾಣೆಯೊಂದರಲ್ಲಿ ರಾಜಕೀಯ ಪಕ್ಷದ ಸಭೆ ನಡೆಸಲು ಅವಕಾಶ ನೀಡಿದ್ದು ತಪ್ಪು. ಸಿ.ಟಿ.ರವಿಯವರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಅವರನ್ನು ಬೇರೆಡೆಗಳಿಗೆ ಕರೆದೊಯ್ಯಲಾಗಿತ್ತು ಎಂದು ಬೆಳಗಾವಿಯ ಪೊಲೀಸ್ ಕಮಿಷನರ್ ಕೂಡ ಸ್ಪಷ್ಟಪಡಿಸಿದ್ದಾರೆ.

ರವಿಯವರು ತಮ್ಮ ತಪ್ಪನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದು, ಅವರ ಪ್ರಕರಣವನ್ನು ಸಿಐಡಿ ತನಿಖೆ ಮಾಡುತ್ತಿದೆ. ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇನ್ಸ್​ಪೆಕ್ಟರ್​ ಸಭೆ ಮಾಡಲು ಅವಕಾಶ ಕೊಟ್ಟರು. ಠಾಣೆಯಲ್ಲಿ ಬಿಜೆಪಿಯವರು ಬಂದು ಸಭೆ ಮಾಡಬಹುದಾ? ಹಾಗಾಗಿ ಸಿಪಿಐ ವಿರುದ್ಧ ಶಿಸ್ತು ಕ್ರಮ ತೆಗೆದುಕೊಂಡಿದ್ದೇವೆ‌‌ ಎಂದು ಸ್ಪಷ್ಟಪಡಿಸಿದರು.

ಮೊಟ್ಟೆ ದಾಳಿ ತನಿಖೆ:
ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಮುನಿರತ್ನ ಮೇಲೆ ಮೊಟ್ಟೆ ಎಸೆದಿರುವುದು ಯಾರು ಅಂತ ಗೊತ್ತಿಲ್ಲ. ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಪಾರ್ಟಿಗೆ ಸೇರಿದವರಾ ಅಥವಾ ಬೇರೆಯವರು ಎನ್ನುವುದು ಗೊತ್ತಿಲ್ಲ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಿಎಂ ಹೇಳಿದರು.


ನಾಳೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ: 
ಕಾಂಗ್ರೆಸ್‌ ಅಧಿವೇಶನ ಕುರಿತು ಮಾತನಾಡಿದ ಸಿಎಂ ಸಿದ್ದರಾಮಯ್ಯ  1924 ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪೂರ್ವಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಗಾಂಧೀಜಿಯವರ ವಿಚಾರಧಾರೆ ಪ್ರಚುರಪಡಿಸಲು ವರ್ಷಪೂರ್ತಿ ರಾಜ್ಯದೆಲ್ಲೆಡೆ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಗಿದೆ. 1924ರಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸಿದ್ದು, ಆ ಪ್ರಯುಕ್ತ ಶತಮಾನೋತ್ಸವದ ಆಚರಣೆಗೆ ಸಕಲ ಸಿದ್ಧತೆಗಳ ಮಾಡಿಕೊಂಡಿದೆ. ಡಿ. 26 ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ, ಸುವರ್ಣಸೌಧದ ಪಕ್ಕದಲ್ಲಿ ಗಾಂಧೀಜಿಯವರ ಪ್ರತಿಮೆ ಅನಾವರಣದ ಕಾರ್ಯಕ್ರಮವಿದ್ದು, 27ರಂದು ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next