Advertisement

Belagavi: ಬರ ಪಟ್ಟಿಯಲ್ಲಿಲ್ಲ ಬೆಳಗಾವಿ-ಖಾನಾಪುರ ತಾಲೂಕು

05:48 PM Sep 16, 2023 | Team Udayavani |

ಬೆಳಗಾವಿ: ನಿರೀಕ್ಷೆ ಮಾಡಿದಂತೆ ಗಡಿ ಜಿಲ್ಲೆ ಬೆಳಗಾವಿಯ 13 ತಾಲೂಕುಗಳು ಬರ ಪೀಡಿತ ಪ್ರದೇಶಗಳೆಂದು ಸರಕಾರದಿಂದ ಘೋಷಣೆಯಾಗಿವೆ. ಆದರೆ ಮಳೆ ಕೊರತೆಯಿಂದ ಬೆಳೆ ನಷ್ಟ ಅನುಭವಿಸಿರುವ ಬೆಳಗಾವಿ-ಖಾನಾಪುರ ತಾಲೂಕುಗಳು ಈ ಪಟ್ಟಿಯಿಂದ ಕೈಬಿಟ್ಟು ಹೋಗಿರುವುದು ಸಹಜವಾಗಿ ರೈತ ಸಮುದಾಯದಲ್ಲಿ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಹಾಗೆ ನೋಡಿದರೆ ಮಲೆನಾಡಿನ ಸೆರಗಿನಲ್ಲಿರುವ ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿ ಮಳೆ ಕೊರತೆಯಾಗಿದ್ದು ಬಹಳ ಕಡಿಮೆ. ಉತ್ತಮ ಮಳೆಯಿಂದ ಯಾವಾಗಲೂ ಈ ತಾಲೂಕುಗಳಲ್ಲಿ ಸಮೃದ್ಧ ಬೆಳೆ ಕಂಗೊಳಿಸುತ್ತದೆ. ಆದರೆ ಈ ಬಾರಿ ಮಾತ್ರ ಎರಡೂ ತಾಲೂಕುಗಳು ಮಳೆಯ ಕೊರತೆ ಎದುರಿಸಿವೆ. ಅದರಲ್ಲೂ ದಟ್ಟ ಅರಣ್ಯ ಪ್ರದೇಶ  ಹೊಂದಿರುವ ಖಾನಾಪುರ ತಾಲೂಕಿನಲ್ಲೇ ಮಳೆ ಕೊರತೆ ಸಾಕಷ್ಟು ಆತಂಕ ಉಂಟು ಮಾಡಿತ್ತು.

ಇದೇ ಕಾರಣದಿಂದ ಬೆಳಗಾವಿ-ಖಾನಾಪುರ ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಬೇಕು ಎಂಬ ಒತ್ತಾಯಗಳು ಇಲ್ಲಿಯ ಜನಪ್ರತಿನಿಧಿಗಳು ಮತ್ತು ರೈತ ಸಮುದಾಯದಿಂದ ಕೇಳಿ ಬಂದಿತ್ತು. ಆದರೆ ಕೇಂದ್ರದ ಮಾನದಂಡ, ನಿಯಮಾವಳಿ ಪ್ರಕಾರ ಈ ತಾಲೂಕುಗಳು ಬರ ಪಟ್ಟಿಯಿಂದ ಹೊರಗುಳಿದಿದ್ದು ರೈತರಲ್ಲಿ ಆಕ್ರೋಶ ಹುಟ್ಟು ಹಾಕಿದೆ.

ಸರಕಾರ ಈಗ ಘೋಷಣೆ ಮಾಡಿರುವ ಮೊದಲ ಹಂತದ ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ರಾಮದುರ್ಗ, ರಾಯಬಾಗ, ಸವದತ್ತಿ, ಚನ್ನಮ್ಮನ ಕಿತ್ತೂರು, ನಿಪ್ಪಾಣಿ, ಕಾಗವಾಡ, ಮೂಡಲಗಿ, ಯರಗಟ್ಟಿ ತಾಲೂಕುಗಳನ್ನು ತೀವ್ರ ಬರಪೀಡಿತ ತಾಲೂಕುಗಳೆಂದು ಗುರುತಿಸಲಾಗಿದೆ.  ಬೆಳಗಾವಿ,ಖಾನಾಪುರ ತಾಲೂಕು ಈ ಪಟ್ಟಿಯಲ್ಲಿ ಇಲ್ಲ. ಕೃಷಿ, ಕಂದಾಯ, ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ 13 ತಾಲೂಕುಗಳ ನೈಜ ಪರಿಸ್ಥಿತಿ ವರದಿ ನೀಡಲು ಸಮೀಕ್ಷೆ ಕಾರ್ಯ ಕೈಗೊಂಡಿದ್ದವು.

ಪ್ರತಿ ತಾಲೂಕಿನಲ್ಲಿ 10 ಗ್ರಾಮಗಳು ಮತ್ತು ಐದು ಬೆಳೆಗಳನ್ನು ಆಯ್ಕೆ ಮಾಡಿಕೊಂಡು ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆ ಬಿತ್ತನೆ ಪ್ರಮಾಣ, ಬಿತ್ತನೆ ಮಾಡಿದ ಬೆಳೆ, ಮಳೆ ಮತ್ತು ತೇವಾಂಶ ಕೊರತೆಯಿಂದ ಬೆಳೆಗಳ ಮೇಲೆ ಉಂಟಾಗಿರುವ
ಪರಿಣಾಮವನ್ನೊಳಗೊಂಡಿತ್ತು.

Advertisement

ಕಾಡಿದ ಮಳೆ ಕೊರತೆ
ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಂಗಾಮಿನಲ್ಲಿ (ಜೂನ್‌ 1ರಿಂದ ಇದುವರೆಗೆ )514 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ 456 ಮಿ.ಮೀ ಮಳೆಯಾಗಿದ್ದು, ಶೇ.11 ಮಳೆ ಕೊರತೆ ಉಂಟಾಗಿದೆ. ಪ್ರಸಕ್ತ ಹಂಗಾಮಿನಲ್ಲಿ 7.11 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿಯಿದ್ದು, ಇದುವರೆಗೆ 6.39 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಅಂದರೆ ಶೇ 90 ಬಿತ್ತನೆಯಾಗಿದೆ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಹೇಳಿಕೆ.

ಕೆಲ ತಾಲೂಕುಗಳಲ್ಲಿ ಪ್ರತಿಶತ 100 ಬಿತ್ತನೆಯಾಗಿದ್ದರೂ ನಂತರ ಮಳೆ ಬಾರದೆ ಇರುವುದು, ತೀವ್ರ ತೇವಾಂಶ ಕೊರತೆಯಿಂದ
ಬಿತ್ತನೆ ಮಾಡಿದ ಬೆಳೆಗಳೆಲ್ಲ ಹಾಳಾಗಿವೆ. ಕೆಲ ಕಡೆ ಬಿತ್ತನೆಯನ್ನೇ ಮಾಡಿಲ್ಲ. ಮಳೆ ಕೊರತೆ, ತೇವಾಂಶದ ಕೊರತೆಯಿಂದ ಹೆಸರು, ಉದ್ದು, ಸೋಯಾಬಿನ್‌, ಕಬ್ಬು, ಶೇಂಗಾ ಮತ್ತಿತರೆ ಬೆಳೆ ಬೆಳೆದವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

ಬೆಳಗಾವಿ, ಖಾನಾಪುರ ತಾಲೂಕುಗಳಲ್ಲಿ ಹೆಚ್ಚಾಗಿ ಭತ್ತ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಮಳೆ ಕೈಕೊಟ್ಟಿದ್ದರಿಂದ ಈಗಾಗಲೇ ಇಳುವರಿ ಕುಸಿದಿದೆ. ಇನ್ನೊಂದು ವಾರದೊಳಗೆ ಉತ್ತಮ ಮಳೆಯಾಗದಿದ್ದರೆ ಈಗ ಬೆಳೆದು ನಿಂತಿರುವ ಪೈರು ಒಣಗಿ ಹೋಗಲಿದೆ. ಈ ಹಿನ್ನೆಲೆಯಲ್ಲಿ ಸರಕಾರ ಮತ್ತೂಮ್ಮೆ ಸಮೀಕ್ಷೆ ನಡೆಸಿ ಈ ಎರಡೂ ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಬೇಕು ಎಂಬುದು ರೈತರ ಒತ್ತಾಯ.

ಬೆಳಗಾವಿ ತಾಲೂಕಿನ ರೈತರು ಮೊದಲು ಬಳ್ಳಾರಿ ನಾಲಾ ಪ್ರವಾಹದಿಂದ ತತ್ತರಿಸಿ ಹೋಗಿದ್ದರು. ನಂತರ ಮಳೆ ಕೊರತೆ ಮತ್ತಷ್ಟು
ಸಂಕಷ್ಟಕ್ಕೆ ಗುರಿ ಮಾಡಿದೆ. ಬಿತ್ತನೆ ಮಾಡಿದ ಬೆಳೆಗಳು ಒಣಗಿ ನಿಂತಿವೆ. ಈ ಕಡೆ ಸರಕಾರ ಸಹ ಬರ ಪೀಡಿತ ಪ್ರದೇಶಗಳ ಪಟ್ಟಿಯಿಂದ ಬೆಳಗಾವಿ, ಖಾನಾಪುರ ತಾಲೂಕುಗಳನ್ನು ಕೈಬಿಟ್ಟು ಮತ್ತಷ್ಟು ಅನ್ಯಾಯ ಮಾಡಿದೆ. ರೈತರ ಬಗ್ಗೆ ಸರಕಾರಕ್ಕೆ ಕಾಳಜಿ ಇದ್ದರೆ ಕೂಡಲೇ ಇನ್ನೊಂದು ಸಮೀಕ್ಷೆ ಮಾಡಿ ಎರಡೂ ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು.
ರಾಜು ಮಾರ್ವೆ,
ರೈತ ಸಂಘದ ತಾಲೂಕಾಧ್ಯಕ್ಷ

ವಾಸ್ತವ ಸ್ಥಿತಿ ಎಲ್ಲರ ಕಣ್ಮುಂದೆಯೇ ಇದೆ. ಆದರೆ ಅಧಿಕಾರಿಗಳಿಗೆ ಮಾತ್ರ ಇದು ಕಾಣದೇ ಇರುವುದು ಬಹಳ ಅಚ್ಚರಿ, ಆಘಾತ ಉಂಟು ಮಾಡಿದೆ. ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಸಾಮಾನ್ಯ ರೈತರಿಗೆ ಅನ್ಯಾಯ ಮಾಡಿದ್ದಾರೆ. ಯಾವ ರೀತಿಯ ಅಂಕಿ-ಅಂಶಗಳನ್ನು ಸರಕಾರಕ್ಕೆ ನೀಡಿದ್ದಾರೆಂಬುದು ತಿಳಿಯುತ್ತಿಲ್ಲ. ಮಳೆ ಆಧಾರಿತ ಎಲ್ಲ ಬೆಳೆಗಳು ನಾಶವಾಗಿವೆ. ಸರಕಾರ ಮರು ಸಮೀಕ್ಷೆ ನಡೆಸಿ ಸಣ್ಣ ರೈತರ ನೆರವಿಗೆ ಬರಬೇಕು.
ಅಪ್ಪಾಸಾಹೇಬ ದೇಸಾಯಿ,
ಬೆಳಗಾವಿ ತಾಲೂಕು ರೈತ ಮುಖಂಡ.

*ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next