Advertisement

ನೊಂದವರಿಗೆ ಮಿಡಿದ ಹೃದಯ

12:51 PM Aug 12, 2019 | Naveen |

ಬೆಳಗಾವಿ: ಹಸಿದವರಿಗೆ ಹೊಟ್ಟೆ ತುಂಬಿಸುವುದು, ಮನೆ ಬಿಟ್ಟು ಹೊರ ಬಂದವರಿಗೆ ಸಹಾಯ ಮಾಡುವುದು, ನೋವಿನಿಂದ ನರಳುತ್ತಿರುವವರಿಗೆ ಸಂತೈಸುವ ಅನೇಕ ಹಸ್ತಗಳು ಮುಂದೆ ಬಂದಿವೆ. ಐಟಿ ಬಿಟಿ ನೌಕರಸ್ಥರು, ಬಿಇ, ಬಿಎಸ್‌ಸಿ ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳು ಬೇಡಿ ಬಂದವರಿಗೆ ನೆರವಿನ ಹಸ್ತ ನೀಡುತ್ತಿದ್ದು, ಇವರ ಕಾರ್ಯ ನೊಂದವರಿಗೆ ಆಶಾಕಿರಣವಾಗಿದೆ.

Advertisement

ಭಾರೀ ಮಳೆಯ ಪ್ರವಾಹದಲ್ಲಿ ಜೀವನವೇ ಕೊಚ್ಚಿಕೊಂಡು ಹೋಗಿರುವವರ ಸಂಖ್ಯೆ ಬಹಳಷ್ಟಿದೆ. ಇಂಥವರ ಕಣ್ಣೀರು ಒರೆಸಲು ಸಾಮಾಜಿಕ ಜಾಲತಾಣಗಳ ಮೂಲಕ ನೆರವು ನೀಡಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ ಅನೇಕ ಸಂಘ, ಸಂಸ್ಥೆಗಳು, ಸಾಮಾಜಿಕ ಜಾಲತಾಣಗಳು ಗುಂಪುಗಳು ನಿಸ್ವಾರ್ಥ ಸೇವೆ ಸಲ್ಲಿಸುತ್ತಿವೆ. ಸರ್ಕಾರದ ಸಹಾಯಕ್ಕಾಗಿ ಕಾಯದೇ ಕೈಲಾದ ಮಟ್ಟಿಗೆ ಸಹಾಯಕ್ಕೆ ನಿಂತಿವೆ.

ಬೆಳಗಾವಿ ನಗರ ಸೇರಿದಂತೆ, ಚಿಕ್ಕೋಡಿ, ಹುಕ್ಕೇರಿ, ಗೋಕಾಕ, ರಾಯಬಾಗ, ಅಥಣಿ, ಖಾನಾಪುರ, ಸವದತ್ತಿ, ರಾಮದುರ್ಗ, ಬೈಲಹೊಂಗಲ, ಕಾಗವಾಡ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಪ್ರವಾಹಕ್ಕೆ ಸಿಲುಕಿವೆ. ಅನೇಕರು ನಿರ್ಗತಿಕರಾಗಿದ್ದು, ಮನೆ ಕಳೆದುಕೊಂಡು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಇವರ ನೆರವಿಗೆ ಅನೇಕ ಮಾನವೀಯ ಹೃದಯಗಳು ಮುಂದೆ ಬಂದಿವೆ. ಎಲ್ಲ ಕಡೆಯಿಂದಲೂ ಆಹಾರ ಪದಾರ್ಥ, ದಿನನಿತ್ಯ ಬಳಕೆಯ ವಸ್ತುಗಳು, ನೀರು, ಬಟ್ಟೆ, ಹೊದಿಕೆಗಳನ್ನು ಸಂಗ್ರಹಿಸಿ ಸಂತ್ರಸ್ತರ ನೆರವಿಗೆ ಧಾವಿಸುತ್ತಿವೆ.

ಸೇವ್‌ ಬೆಳಗಾವಿಯ ಮಾದರಿ ಕಾರ್ಯ: ಬೆಳಗಾವಿ ಫೇಸ್‌ಬುಕ್‌ ಪೇಜ್‌ನ ಸದಸ್ಯರು ಪ್ರವಾಹ ಪೀಡಿತರಿಗೆ ನೆರವಾಗಲು ಮುಂದೆ ಬಂದಿದೆ. ಸೇವ್‌ ಬೆಳಗಾವಿ ಫ್ಲಡ್‌ ಅಲರ್ಟ್ಸ್ ಎಂಬ ವಾಟ್ಸಪ್‌ ಗ್ರುಪ್‌ ಮೂಲಕ ಸಂತ್ರಸ್ತರ ನೆರವಿಗೆ ನಿಂತಿದೆ. 100ಕ್ಕೂ ಹೆಚ್ಚು ಯುವಕ-ಯುವತಿಯರು ಕ್ರೀಯಾಶೀಲರಾಗಿದ್ದಾರೆ. ಬಹುತೇಕ ಇದರಲ್ಲಿ ಐಟಿ ಬಿಟಿಯವರೇ ಹೆಚ್ಚಿನರಾಗಿದ್ದು, ಇನ್ನುಳಿದ ವಿದ್ಯಾರ್ಥಿಗಳೂ ಸೇರಿದ್ದಾರೆ. ಎಲ್ಲಿ ಸಹಾಯ ಬೇಕಾಗಿದೆ, ಎಷ್ಟು, ಏನು ಅಗತ್ಯವಿದೆ ಎಂಬ ಮಾಹಿತಿ ಪಡೆದು ಕೆಲವೇ ಗಂಟೆಗಳಲ್ಲಿ ವಾಹನದಲ್ಲಿ ಸಹಾಯ ಮಾಡುತ್ತಿದ್ದಾರೆ. ಈ ಹಿಂದೆ ಮಡಿಕೇರಿಯಲ್ಲಿ ಆದ ಪ್ರವಾಹದ ವೇಳೆಯೂ ಸಹಾಯ ಮಾಡಿರುವ ಅನುಭವ ಈ ಗುಂಪಿಗಿದೆ.

ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲೆಯಲ್ಲಿ ಐದಾರು ತಂಡಗಳನ್ನು ಮಾಡಿ ವಾಹನದ ಮೂಲಕ ಸಾಮಾನುಗಳು ನೀಡುತ್ತಿರುವ ಈ ತಂಡದಲ್ಲಿ ಚನ್ನಮ್ಮಾ ಎಂಬ ಯುವತಿಯರು ಗುಂಪೂ ಇದೆ. 8-10 ಜನರು ಸೇರಿ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಸಹಾಯ ಮಾಡುತ್ತಿದ್ದಾರೆ.

Advertisement

ಈ ಕಾರ್ಯಕ್ಕೆ ಬೆಳಗಾವಿ ಕುಂದಾನಗರಿ, ಟ್ರೋಲ್ ಅಣ್ತಮ್ಮಾಸ್‌, ಬೆಳಗಾವಿ ಸ್ಪೇಷಲ್ ಎಂಬ ಸಾಮಾಜಿಕ ಜಾಲತಾಣಗಳು ಸಾಥ್‌ ನೀಡಿವೆ. ಬೆಂಗಳೂರಿನ ಗುರು ಟ್ರಾನ್ಸಪೋರ್ಟೆಷನ್‌ ಉಚಿತ ವಾಹನಗಳನ್ನು ನೀಡುತ್ತಿದೆ. ಸದ್ಯ ಬೆಂಗಳೂರಿನಿಂದ ಮೂರು ಲಾರಿಗಳು ಬಂದಿದ್ದು, ಜಿಲ್ಲೆಯಲ್ಲಿ ಟಾಟಾ ಏಸ್‌, ಕ್ರೂಸರ್‌, ಸುಮೋ ವಾಹನಗಳೂ ಸಹಾಯಕ್ಕೆ ನಿಂತಿವೆ. ಕೆಲವು ದಾನಿಗಳು ನೀಡುತ್ತಿರುವ ಧನಸಹಾಯವನ್ನೂ ಸಂಗ್ರಹಿಸಿ ನಿತ್ಯ ಖರ್ಚಾಗುವ ಲೆಕ್ಕ ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತಾರೆ.

ಸಂತ್ರಸ್ತರ ನೆರವಿಗೆ ಧಾವಿಸಿದ ವೇದಿಕೆ: ಜಿಲ್ಲೆಯ ಹತ್ತೂ ತಾಲೂಕಿನ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ಪ್ರವಾಹ ಪೀಡಿತ ಸಂತ್ರಸ್ತರ ಪುನರ್ವಸತಿ ಕೇಂದ್ರಗಳಲ್ಲಿ ಅಗತ್ಯ ಇರುವ ಆಹಾರ ಸಾಮಗ್ರಿ, ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದಾರೆ. ಕಳೆದ ಏಳೆಂಟು ದಿನಗಳಿಂದ ಜಿಲ್ಲೆಯ ವಿವಿಧ ಕೇಂದ್ರಗಳಿಗೆ ತಂಡಗಳನ್ನು ಮಾಡಿ ಬೆಳಗಾವಿಯಿಂದ ಅಗತ್ಯ ವಸ್ತುಗಳನ್ನು ಕಳುಹಿಸಿ ಕೊಡಲಾಗುತ್ತಿದೆ. ನೀರಿನ ಬಾಟಲಿಗಳು, ಬಟ್ಟೆ, ಸೀರೆ, ಸ್ಯಾನಿಟರಿ ಪ್ಯಾಡ್‌, ಔಷಧ, ಬ್ಲ್ಯಾಂಕೇಟ್, ಕ್ಯಂಡಲ್, ಸೊಳ್ಳೆ ಬತ್ತಿ ಸೇರಿದಂತೆ ದಿನಬಳಕೆಯ ವಸ್ತುಗಳನ್ನು ಸೇರಿಸಿ ಕಳುಹಿಸುತ್ತಿದ್ದಾರೆ.

ಸಂತ್ರಸ್ತರ ಸಹಾಯಕ್ಕಾಗಿಯೇ ನಿತ್ಯ ನೂರಾರು ಜನ ಹಗಲಿರುಳು ಶ್ರಮಿಸುತ್ತಿದ್ದಾರೆ. ಶಾಸಕ ಸತೀಶ ಜಾರಕಿಹೊಳಿ ಅವರು ವಿಶೇಷ ಕಾಳಜಿ ವಹಿಸಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ. ವೇದಿಕೆಯ ಕಾರ್ಯಕರ್ತರು ಪ್ರವಾಹ ಪೀಡಿತರನ್ನು ರಕ್ಷಣೆ ಮಾಡುವ ಕಾರ್ಯದಲ್ಲೂ ತೊಡಗಿಕೊಂಡಿದ್ದಾರೆ.

ಗೆಳೆಯರ ತಂಡದ ಸಹಾಯಹಸ್ತ: ನಗರದಲ್ಲಿ ಜಿತೋ ಯುಥ್‌ ವಿಂಗ್‌ ಹಾಗೂ ನರ್ವ್‌ ಟು ಸರ್ವ್‌ ಎಂಬ ಸಂಘಟನೆಗಳೂ ನಾಲ್ಕೈದು ದಿನಗಳಿಂದ ಸಂತ್ರಸ್ತರ ಸಹಾಯಕ್ಕಾಗಿ ನಿಂತಿವೆ. ಆಹಾರದ ಪಟ್ಟಣಗಳನ್ನು ತಯಾರಿಸಿ ಅಗತ್ಯ ಇರುವ ಕಡೆಗೆ ನೇರವಾಗಿ ತಲುಪಿಸುತ್ತಿದ್ದಾರೆ. ಮೊದಲೆರಡು ದಿನ ಆಹಾರ ವಿತರಿಸಿ, ಬಳಿಕ ಬೇರೆ ಬೇರೆ ಕಡೆಗಳಿಂದ ಬಟ್ಟೆ, ದಿನ ಬಳಕೆ ವಸ್ತುಗಳು, ಬಸ್ಕೀಟ್, ಬಟ್ಟೆ, ಹೊದಿಕೆಗಳನ್ನು ನೀಡುತ್ತಿದ್ದಾರೆ.

ಇಸ್ಕಾನ್‌ ಮಂದಿರದಲ್ಲಿ ನಿತ್ಯ 7-8 ಸಾವಿರ ಜನರಿಗೆ ಆಗುವಷ್ಟು ಆಹಾರ ತಯಾರಿಸುತ್ತಿದ್ದು, ಜಿತೋ ಹಾಗೂ ನರ್ವ್‌ ಟು ಸರ್ವ್‌ ಸಂಘಟನೆಯ ಸದಸ್ಯರು ಪಾಕೆಟ್‌ಗಳನ್ನು ಮಾಡಿ ಕೊಡುತ್ತಿದ್ದಾರೆ. ಅಗತ್ಯ ಸಾಮಾನುಗಳನ್ನು ಸಂಗ್ರಹಿಸಿ ಬೇರೆ ಬೇರೆ ಸಂಘಟನೆಗಳ ಮೂಲಕವೂ ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ನಗರದ ಕಾಂಗಲಿ ಗಲ್ಲಿಯಲ್ಲಿ ಬಾಳಕೃಷ್ಣ ತೋಪಿನಕಟ್ಟಿ ಎಂಬವರು ತಮ್ಮ ಗಲ್ಲಿಯ ಜನರನ್ನು ಸೇರಿಸಿಕೊಂಡು ನಿತ್ಯ 3-4 ಸಾವಿರ ಜನರಿಗೆ ಬೇಕಾಗುವಷ್ಟು ಆಹಾರ ತಯಾರಿಸಿ ವಿತರಿಸುತ್ತಿದ್ದಾರೆ. ಹಳ್ಳಿ ಹಳ್ಳಿಗಳಲ್ಲಿ ವಿವಿಧ ಸಂಘಟನೆಯವರು ತಮಗೆ ಕೈಲಾದಷ್ಟು ಮಟ್ಟಿಗೆ ಜನರ ಸೇವೆಗೆ ನಿಂತಿದ್ದಾರೆ. ಎಲ್ಲ ಕಡೆಯಿಂದಲೂ ಸಹಾಯ ಹರಿದು ಬರುತ್ತಿದೆ. ನಗರ ಸೇರಿದಂತೆ ಜಿಲ್ಲೆಯ ಅನೇಕ ಸಂಘ-ಸಂಸ್ಥೆಗಳು ಸಂತ್ರಸ್ತರಿಗೆ ಅಗತ್ಯ ಇರುವ ಬಟ್ಟೆ, ಸೀರೆ, ಆಹಾರ ಪದಾರ್ಥಗಳು, ತರಕಾರಿ, ಅನೇಕ ವಸ್ತುಗಳನ್ನು ನೀಡಿ ನೋವಿಗೆ ಸ್ಪಂದಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next