ಬಳಗಾನೂರು: ಒಂದೆಡೆ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತಕ್ಕೆ ಮಾರುಕಟ್ಟೆಯಲ್ಲಿ ದರ ಕುಸಿತ, ಇನ್ನೊಂದೆಡೆ ಎರಡನೇ ಬೆಳೆಗೆ ಭತ್ತ ನಾಟಿ ಮಾಡಲು ನೀರಿನ ಕೊರತೆ, ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅಭಾವ, ಕಾರ್ಮಿಕರ ಕೊರತೆಯಿಂದಾಗಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತ ಕಟಾವಿನ ನಂತರ ರೈತ ಗದ್ದೆಗೆ ನೀರು ಹರಿಸಿ ಟ್ರ್ಯಾಕ್ಟರ್‌ನಿಂದ ಪಟ್ಲರ್ ಹೊಡೆದು ಮತ್ತೆ ಭತ್ತ ನಾಟಿ ಮಾಡುತ್ತಿದ್ದಾರೆ. ಭತ್ತ ನಾಟಿಗೆ ಜನವರಿ ಕೊನೆವರೆಗೆ ಅವಕಾಶವಿದೆ. ಈಗಾಗಲೇ ಭತ್ತ ನಾಟಿ ಮಾಡಿದವರು ವಾರದ ನಂತರ ಕೊಡುವ ಮೊದಲ, ಎರಡನೇ ಗೊಬ್ಬರವನ್ನು ಹಾಕಿದ್ದಾರೆ.
ಇತ್ತ ಭತ್ತ, ತೊಗರಿ, ಜೋಳ, ಕಡಲೆ, ಕಟಾವಿಗೆ ಬಂದಿರುವ ಹಿನ್ನಲೆಯಲ್ಲಿ ರೈತ ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿದ್ದಾರೆ. ಕಾರ್ಮಿಕರಿಗಾಗಿ ರೈತರು 8-10 ದಿನ ಕಾಯುವ ಪರಿಸ್ಥಿತಿ ಎದುರಾಗಿದೆ. ಬೇರೆ ಊರುಗಳಿಂದ ಕೂಲಿ ಕಾರ್ಮಿಕರನ್ನು ವಾಹನದಲ್ಲಿ ಕರೆದುಕೊಂಡು ಬಂದು ಭತ್ತ ನಾಟಿ ಮಾಡಿಸಬೇಕಿದೆ.
ಕೆಲವರು ಎಕರೆಗೆ ಇಂತಿಷ್ಟು ಎಂದು ಗುತ್ತಿಗೆ ದರ ನಿಗದಿಪಡಿಸಿ ಭತ್ತ ನಾಟಿ ಮಾಡುತ್ತಿದ್ದಾರೆ. ಸರಕಾರ ಭತ್ತಕ್ಕೆ ಸಮರ್ಪಕ ಬೆಂಬಲ ಬೆಲೆ ಘೋಷಿಸದಿರುವುದು ಮತ್ತು ಸಿಂಧನೂರು ತಾಲೂಕು ಕೇಂದ್ರ ಮತ್ತು ಬಳಗಾನೂರು ಪಟ್ಟಣದಲ್ಲಿ ಭತ್ತ ಖರೀದಿ ಕೇಂದ್ರ ಈವರೆಗೆ ಆರಂಭಿಸಿಲ್ಲ. ಹೀಗಾಗಿ ಕೆಲ ರೈತರು ಭತ್ತವನ್ನು ಖಾಸಗಿ ವ್ಯಾಪಾರಸ್ಥರಿಗೆ ಮಾರುತ್ತಿದ್ದಾರೆ. ಭತ್ತ ನಾಟಿ ಮಾಡಲು ಕೂಲಿ ಕಾರ್ಮಿಕರಿಗೆ ಎಕರೆಗೆ 2,500 ರೂ.ದಿಂದ 3,500 ರೂ. ಖರ್ಚು ಮಾಡಬೇಕಿದೆ. ಈಗಾಗಲೇ ಭತ್ತ ನಾಟಿ ಮಾಡಿರುವ ರೈತರು ಕಳೆನಾಶಕ, ರಸಗೊಬ್ಬರ, ಕೂಲಿ ಆಳುಗಳಿಗೆ ಕೂಲಿ ಪಾವತಿಸಲು ನಿತ್ಯ ಸಾವಿರಾರು ರೂ. ಖರ್ಚು ಮಾಡಬೇಕಿದೆ. ಒಂದೆಡೆ ಭತ್ತಕ್ಕೆ ಕಡಿಮೆ ದರ ಇರುವುದರಿಂದ ಮತ್ತು ಭತ್ತ ಖರೀದಿ ಕೇಂದ್ರ ಆರಂಭವಾಗದ್ದರಿಂದ ರೈತರು ಅನಿವಾರ್ಯವಾಗಿ ಮತ್ತೇ ಸಾಲದ ಮೊರೆ ಹೋಗಬೇಕಿದೆ.