ಬಳಗಾನೂರು: ಸಮೀಪದ ದಿದ್ದಿಗಿ ಗ್ರಾಮದಲ್ಲಿ ಉಟಕನೂರು ಮೌನಯೋಗಿ ಶ್ರೀ ಬಸವಲಿಂಗ ತಾತನವರ 35ನೇ ಜಾತ್ರಾ ಮಹೋತ್ಸವ ಪ್ರಯುಕ್ತ ನಡೆದ ಸಾಮೂಹಿಕ ವಿವಾಹದಲ್ಲಿ 13 ಜೋಡಿಗಳು ದಾಂಪತ್ಯ ಕಾಲಿಟ್ಟರು. ಸಾನಿಧ್ಯ ವಹಿಸಿದ್ದ ಉಟಕನೂರು ಶ್ರೀ ಅಡವಿಸಿದ್ದೇಶ್ವರ ಮಠದ ಶ್ರೀ ಮರಿ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಸತಿಪತಿಗಳು ಒಂದಾಗಿ, ಪರಸ್ಪರ ಒಬ್ಬರನ್ನೊನ್ನರು ಅರಿತು ಬಾಳಬೇಕು.
ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವಿಸಬೇಕು ಎಂದು ಹಿತನುಡಿ ಹೇಳಿದರು. ಜಾತ್ರಾ ಮಹೋತ್ಸವ ಪ್ರಯುಕ್ತ ಬೆಳಗ್ಗೆ ಶ್ರೀ ಬಸವಲಿಂಗೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಿಶೇಷ ಪೂಜೆ ನೆರವೇರಿಸಲಾಯಿತು.
ಭಕ್ತರಾದ ಈರಮ್ಮ ಹನುಮಂತಪ್ಪ ಯಾದವ ಮತ್ತು ಮಕ್ಕಳು ಉಟಕನೂರು ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮಿಗಳ 39ನೇ ತುಲಾಭಾರ ನೆರವೇರಿಸಿದರು. ಅಂಕಲಿ ಮಠದ ಶ್ರೀ ಫಕೀರೇಶ್ವರ ಸ್ವಾಮೀಜಿ, ಗೌಡನಬಾವಿ ಶ್ರೀ ನಾಗಪ್ಪತಾತನವರು ನೇತೃತ್ವ ವಹಿಸಿದ್ದರು.
ರಥೋತ್ಸವ: ಸಂಜೆ ನಡೆದ ರಥೋತ್ಸವಕ್ಕೆ ಶ್ರೀ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ, ಗೌಡನಬಾವಿ ಶ್ರೀ ನಾಗಪ್ಪ ತಾತನವರು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಸಕಲ ವಾದ್ಯವೈಭವದೊಂದಿಗೆ ಅಪಾರ ಭಕ್ತರ ಮಧ್ಯೆ ರಥೋತ್ಸವ ನಡೆಯಿತು.
ನಂತರ ಸದ್ಗುರು ಶ್ರೀ ನಿರುಪಾದೀಶ್ವರ ಜೀವನ ಚರಿತಾಮೃತ ಪ್ರವಚನ ಮಹಾ ಮಂಗಲ ಕಾರ್ಯಕ್ರಮ ಜರುಗಿತು. ಪ್ರವಚನಕಾರರಾದ ಗುಡೂರು ಅನ್ನದಾನೇಶ್ವರ ಶಾಸ್ತ್ರೀ, ಗವಾಯಿಗಳಾದ ಅಂಕಲಿಮಠ ತಲೆಕಟ್ಟಿನ ಮನೋಹರ ಹಿರೇಮಠ, ತಬಲಾವಾದಕ ಮಲ್ಲಿನಾಥಸ್ವಾಮಿ ಜಾನೇಕಲ್ ಇದ್ದರು. ಹರಗುರು ಚರಮೂರ್ತಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಮುಖಂಡರಾದ ತಾಪಂ ಮಾಜಿ ಸದಸ್ಯ ರಮೇಶಪ್ಪ ಸಾಹುಕಾರ, ತಾಪಂ ಮಾಜಿ ಅಧ್ಯಕ್ಷೆ ಬಸಮ್ಮ ಬಸನಗೌಡ್ರು, ದಳಪತಿ ಆದಪ್ಪ ನಾಯಕ, ಆದಪ್ಪ ಸಾಹುಕಾರ, ಕರಿಯಪ್ಪ, ರೈತ ಮುಖಂಡ ಅಮೀನ್ ಪಾಷಾ, ಪತ್ರಕರ್ತ ಮಹಾಂತೇಶ ದಿದ್ದಿಗಿ, ಶಿವನಗೌಡ, ಜಗದೀಶ ಸೇರಿ ಸುತ್ತಲಿನ ಗ್ರಾಮಗಳ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.