Advertisement

ಬಳಗಾನೂರು: ಸ್ವಚ್ಛತೆ ಕಾಪಾಡಲು ಆಗ್ರಹ

01:51 PM Feb 05, 2020 | Naveen |

ಬಳಗಾನೂರು: ಗ್ರಾಮ ಪಂಚಾಯ್ತಿಯಿಂದ ಪಟ್ಟಣ ಪಂಚಾಯ್ತಿಯಾಗಿ ಬಡ್ತಿ ಪಡೆದು ವರ್ಷಗಳೇ ಕಳೆದರೂ ಪಟ್ಟಣದಲ್ಲಿ ಸ್ವತ್ಛತೆಯತ್ತ ಮಾತ್ರ ಪಪಂ ಅಧಿಕಾರಿಗಳು, ಸಿಬ್ಬಂದಿ ಗಮನಹರಿಸುತ್ತಿಲ್ಲ.

Advertisement

ಕೇಂದ್ರ ಮತ್ತು ರಾಜ್ಯ ಸರಕಾರ ಸ್ವಚ್ಛತೆಗಾಗಿ, ಪರಿಸರ ಸಂರಕ್ಷಣೆಗಾಗಿ ವಿವಿಧ ಕಾರ್ಯಕ್ರಮ ರೂಪಿಸಿ ಜನರಲ್ಲಿ ಜಾಗೃತಿ ಮೂಡಿಸಲು ಸಾವಿರಾರು ಕೋಟಿ ರೂ. ವ್ಯಯಿಸುತ್ತಿದ್ದರೂ ಸುಧಾರಣೆ ಕಾಣುತ್ತಿಲ್ಲ. ಪಟ್ಟಣದಲ್ಲಿ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಮಾಡದ್ದರಿಂದ ವಿವಿಧ ವಾರ್ಡ್‌ಗಳಲ್ಲಿ ಹಲವರು ಸಾಂಕ್ರಾಮಿಕ ರೋಗ, ಜ್ವರದಿಂದ ಬಳಲಿ ಚಿಕಿತ್ಸೆ ಪಡೆದಿದ್ದು, ಇದು ಡೆಂಘೀ ಜ್ವರ ಎಂಬ ಶಂಕೆ ಮೂಡಿದೆ.

ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿನ ಚರಂಡಿಗಳು ಹೂಳು ತುಂಬಿದೆ. ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಇನ್ನು ಪಟ್ಟಣದಲ್ಲಿರುವ ಸರ್ಕಾರಿ ಹಾಗೂ ಖಾಸಗಿ ಮಾಲೀಕತ್ವದ ಖಾಲಿ ಜಾಗೆಗಳಲ್ಲಿ ತಿಪ್ಪೆಗುಂಡಿಗಳನ್ನು ಹಾಕಿದ್ದು, ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಕೆಲ ವಾರ್ಡ್‌ಗಳಲ್ಲಿ ಪಟ್ಟಣ ಪಂಚಾಯಿತಿ ಪೂರೈಸುತ್ತಿರುವ ನಲ್ಲಿಗಳ ನೀರು ಪೋಲಾಗುತ್ತಿದೆ. ಇದರಿಂದ ಎಲ್ಲೆಂದರಲ್ಲಿ ನೀರು ನಿಲ್ಲುತ್ತಿದೆ. ಹಲವೆಡೆ ಸಾರ್ವಜನಿಕ ಶೌಚಾಲಯ ಇಲ್ಲದ್ದರಿಂದ ಜನ ಶೌಚಕ್ಕೆ ಬಯಲನ್ನೇ ಆಶ್ರಯಿಸುವಂತಾಗಿದೆ. ಒಟ್ಟಾರೆ ಪಟ್ಟಣದಲ್ಲಿ ಸ್ವಚ್ಛತೆಗೆ ಕ್ರಮ ವಹಿಸದ್ದರಿಂದ ಸೊಳ್ಳೆ ಹಾವಳಿ ಹೆಚ್ಚಿದೆ.

ಸಂಜೆಯಾದರೆ ಸಾಕು ಮನೆ ಒಳಗೆ, ಹೊರಗೆ ಸೊಳ್ಳೆ ಹಾವಳಿಗೆ ಜನ
ಬೇಸತ್ತಿದ್ದಾರೆ. ಸೊಳ್ಳೆ ಕಚ್ಚಿ ಸಾಂಕ್ರಾಮಿಕ ರೋಗ ಹರಡುತ್ತಿವೆ. ತಾಲೂಕು ಕೇಂದ್ರ ಮತ್ತು ದೂರದ ನಗರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಚರಂಡಿ ಸ್ವತ್ಛತೆಗೆ, ತ್ಯಾಜ್ಯ ವಿಲೇವಾರಿಗೆ ಮತ್ತು ಸೊಳ್ಳೆ ಹಾವಳಿ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಲು ಮುಂದಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಪಟ್ಟಣದ ಐತಿಹಾಸಿಕ ಸ್ಥಳವಾದ ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವಸ್ಥಾನದ ಸುತ್ತಲಿನ ತಿಪ್ಪೆ ಗುಂಡಿಗಳನ್ನು ತೆರವು ಮಾಡಿಸಿ ಸ್ಥಳವನ್ನು ಶುಚಿಗೊಳಿಸುವಂತೆ ಹಲವಾರು ಬಾರಿ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಇನ್ನಾದರೂ ಪಪಂ ಅಧಿಕಾರಿಗಳು ಪಟ್ಟಣದಲ್ಲಿ ಸ್ವತ್ಛತೆಗೆ ಕ್ರಮ ವಹಿಸಬೇಕು ಎಂದು ಯಂಕನಗೌಡ ಗದ್ದಿಗೌಡ್ರು
ಆಗ್ರಹಿಸಿದ್ದಾರೆ.

Advertisement

ಪಟ್ಟಣದಲ್ಲಿ ಕೆಲವರಿಗೆ ಡೆಂಘೀ ಜ್ವರ ಕಾಣಿಸಿಕೊಂಡ ಶಂಕೆ ಇದ್ದು,
1, 2, 9, ಸೇರಿ ಎಲ್ಲ ವಾರ್ಡಗಳಲ್ಲಿ ಆರೋಗ್ಯ ಸಿಬ್ಬಂದಿ ಲಾರ್ವಾ ಸಮೀಕ್ಷೆ ನಡೆಸಿದ್ದಾರೆ. ಸೊಳ್ಳೆಗಳ ನಿಯಂತ್ರಣಕ್ಕಾಗಿ ಪಪಂ ಸಿಬ್ಬಂದಿ ಫಾಗಿಂಗ್‌ ಮಾಡಿಸುತ್ತಿದ್ದಾರೆ. ಚರಂಡಿ ಹೂಳು ತೆರವಿಗೆ, ಪಟ್ಟಣದಲ್ಲಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಪಪಂ ಅಧಿಕಾರಿಗಳಿಗೆ ಸೂಚಿಸಲಾಗುವುದು.
ಡಾ| ಮೌನೇಶ ಪೂಜಾರಿ,
ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ
ಕೇಂದ್ರ ಬಳಗಾನೂರ.

ಶೀಘ್ರದಲ್ಲಿ ಚರಂಡಿ ಹೂಳು ತೆರವುಗೊಳಿಸಲಾಗುವುದು. ಖಾಲಿ ಇರುವ ಸರ್ಕಾರಿ ಜಾಗೆಗಳಲ್ಲಿನ ತಿಪ್ಪೆಗುಂಡಿಗಳಲ್ಲಿನ ತ್ಯಾಜ್ಯ
ವಿಲೇವಾರಿ ಮಾಡಲಾಗುವುದು. ಖಾಸಗಿ ಜಾಗೆಯಲ್ಲಿನ ತಿಪ್ಪೆಗುಂಡಿ ಸ್ವಚ್ಛತೆಗೆ ಮಾಲೀಕರಿಗೆ ನೋಟೀಸ್‌ ನೀಡಲಾಗುವುದು.
ರಡ್ಡಿ ರಾಯನಗೌಡ,
ಪಪಂ ಪ್ರಭಾರಿ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next