Advertisement

ಬೀಜಾಡಿ ಕಡಲ ತೀರ: ಮದ್ಯದ ಬಾಟಲಿಗಳ ಆಗರ

11:29 PM Jun 05, 2019 | sudhir |

ಕುಂದಾಪುರ: ಸಮುದ್ರ ತಟಗಳನ್ನ ರಕ್ಷಿಸಿ! ಹೀಗೊಂದು ಕೂಗು ಎದ್ದಿದೆ. ಕಾರ್ಖಾನೆಗಳ ತ್ಯಾಜ್ಯ ನೀರು ಜಲಚರಗಳಿಗೆ ಆಪತ್ತು ತಂದೊಡ್ಡುತ್ತಿರುವಂತೆಯೇ ಸಮುದ್ರ ಕಲ್ಮಶದ ಜತೆಗೆ ಮನುಷ್ಯ ಕುಡಿದು ಎಸೆಯುವ ಬಾಟಲಿಗಳೂ ಇನ್ನೊಂದು ದೊಡ್ಡ ಅಪಾಯ ತಂದೊಡ್ಡುತ್ತಿವೆ.

Advertisement

ಮೋಜು ಮಸ್ತಿಗೆಂದೇ ಸಮುದ್ರ ತೀರಕ್ಕೆ ಬರುವ ಕೆಲವರು ಕುಡಿದು ಎಸೆದು ಹೋಗುವ ಮದ್ಯದ ಬಾಟಲಿಗಳ ರಾಶಿಯನ್ನು ಶುಚಿಗೊಳಿಸುವುದೇ ಸ್ವಯಂಸೇವಕರಿಗೆ ದೊಡ್ಡ ತಲೆ ನೋವಾಗಿದೆ. ಪ್ರತೀ ವಾರ ಮದ್ಯದ ಬಾಟಲಿಗಳ ಪ್ರಮಾಣ ಹೆಚ್ಚುತ್ತಲೇ ಹೋಗುತ್ತಿದೆ. ಈ ವಿಚಾರದಲ್ಲಿ ಪ್ರವಾಸಿಗರೂ ಸ್ವಯಂ ಜಾಗೃತರಾಗುತ್ತಿಲ್ಲ.

ಹಲವು ಅಭಿಯಾನ
ಸುತ್ತಮುತ್ತಲಿನ ಪರಿಸರ ಸುಂದರ ವಾಗಿರಬೇಕೆಂದು ಹೊರಟವರು ಕರಾವಳಿ ಫ್ರೆಂಡ್ಸ್‌ ಬೀಜಾಡಿ. ಬೀಜಾಡಿ, ಗೋಪಾಡಿ ಗ್ರಾ.ಪಂ., ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಜತೆ ಸೇರಿ ಬೀಜಾಡಿ ಬೀಚ್‌ ಅನ್ನು ಚೊಕ್ಕಟಗೊಳಿಸಿದ ಶ್ರೇಯ ಇವರಿಗಿದೆ. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಸತತ 15 ವಾರಗಳಿಂದ ಸ್ವತ್ಛತಾ ಕಾರ್ಯ ನಡೆಸುತ್ತಿದೆ. ಇದರ ಪ್ರೇರಣೆಯಿಂದ ಸಂಘಟನೆಗಳು ಸ್ವತ್ಛತೆಯೆಡೆಗೆ ಮನ ಮಾಡುತ್ತಿವೆ.

ಶ್ರಮದ ಫ‌ಲ
ಕರಾವಳಿ ಫ್ರೆಂಡ್ಸ್‌ ಸ್ವತ್ಛತೆಗಾಗಿ ಒಂದರ್ಥದಲ್ಲಿ ರಕ್ತವನ್ನೇ ಹರಿಸಿದ್ದಾರೆ. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ನ ಹಲವರು 7-8 ಬ್ಯಾಗ್‌ ಆಗುವಷ್ಟು ಮದ್ಯದ ಬಾಟಲಿಗಳನ್ನು 200 ಮೀಟರ್‌ ಅಡಿಯಲ್ಲಿ ಸಂಗ್ರಹಿಸಿದ್ದಾರೆ. ಈ ವೇಳೆ ಸ್ವಯಂಸೇವಕರಿಗೆ ಒಡೆದು ಹೋದ ಬಾಟಲಿಯಿಂದ ಗಾಯಗಳಾಗಿವೆ. ಹೀಗೆ ರಾಶಿ ರಾಶಿ ಬಾಟಲುಗಳಿಂದ ನಮ್ಮ ಸಮುದ್ರ ತಟವನ್ನು ನಡೆಯಲಾಗದ ಜಾಗವಾಗಿಸುತ್ತಿರುವುದರ ಬಗ್ಗೆ ಜನತೆ ಗಮನಹರಿಸಬೇಕು. ಈ ಪರಿಸರ ಕೆಟ್ಟ ಕೆಲಸಗಳಿಂದ ಮುಕ್ತವಾಗಿರಬೇಕೆನ್ನುವ ಆಗ್ರಹ ಸ್ಥಳೀಯರದ್ದು.

ನಡೆಯಲು ಅಸಾಧ್ಯ
ಗಾಜಿನ ಬಾಟಲಿಗಳು, ಪ್ಲಾಸ್ಟಿಕ್‌ ಲೋಟಗಳು, ಪ್ಲಾಸ್ಟಿಕ್‌ ಬಾಟಲಿಗಳಲ್ಲಿ ಬರುವ ಪಾನೀಯಗಳ ಹಾವಳಿಯಿಂದಾಗಿ ಸಮುದ್ರ ತಟದಲ್ಲಿ ತ್ಯಾಜ್ಯದ ರಾಶಿಯಾಗಿದೆ. ಜತೆಗೆ ಕುಡಿತದ ಮಜಾ ತೆಗೆದುಕೊಳ್ಳುವ ಕೆಲವರಿಂದ ಇತರ ಪ್ರವಾಸಿಗರಿಗೆ ತೊಂದರೆ ಎದುರಾಗುತ್ತಿದೆ. ಇದು ಪ್ರವಾಸೋದ್ಯಮದ ಮೇಲೂ ಹೊಡೆತ ನೀಡುತ್ತದೆ.

Advertisement

ಎಲ್ಲೆಂದರಲ್ಲಿ ಬಾಟಲಿಗಳು, ಒಡೆದ ಗಾಜಿನ ತುಂಡುಗಳು, ಚೂರಾಗುವ ಪ್ಲಾಸ್ಟಿಕ್‌ ಲೋಟಗಳು, ಟೆಟ್ರಾಪ್ಯಾಕ್‌ನಲ್ಲಿ ಬರುವ ಪಾನೀಯಗಳ ತ್ಯಾಜ್ಯ ಎಸೆಯಲು ಸಮುದ್ರ ತಟವೇ ಬೇಕೇ? ಮಕ್ಕಳ ಆಟಕ್ಕೆ, ಮನೆಯವರ ವಾಯು ವಿಹಾರಕ್ಕೆ ಸಮುದ್ರತಟದ ಅವಶ್ಯಕತೆ ಇಲ್ಲವೇ? ಎಂದು ಪ್ರಶ್ನಿಸುತ್ತಾರೆ ಸ್ಥಳೀಯರು.

ಕಸದ ಬುಟ್ಟಿ ಇಡಲಿ
ಬೀಜಾಡಿ ಬೀಚ್‌ ತಟದಲ್ಲಿ ಕಂಡ ಹೇವರಿಕೆ ಆಗುವಂತಹ ಬಾಟಲಿಗಳ ರಾಶಿಗಳು, ಪ್ಲಾಸ್ಟಿಕ್‌ ಲೋಟದ ಚೂರುಗಳು ನಿಲ್ಲಬೇಕು. ಇದಕ್ಕಾಗಿ ಕಾನೂನು ಪಾಲನೆ ಅವಶ್ಯಕ. ಸಮುದ್ರತಟಗಳು ಕಸದ ತೊಟ್ಟಿ ಆಗದೆ, ಬಾರ್‌ ಆಗದೆ, ಎಲ್ಲರ ಪ್ರೀತಿಯ ಕಡಲಾಗಲಿ. ಮಕ್ಕಳ ಆಡದ ಮನೆಗಳಾಗಲಿ. ಇದಾಗಲು ಬಾಟಲಿಗಳು, ಪ್ಲಾಸ್ಟಿಕ್‌ ಲೋಟಗಳು ಎಲ್ಲೆಂದರಲ್ಲಿ ಬಿಸಾಡಬಾರದೆಂಬ ಕಾನೂನು ಪಾಲನೆ ಹೆಚ್ಚಾಗಬೇಕು. ಸ್ಥಳೀಯಾಡಳಿತಗಳು ಕಸದ ಬುಟ್ಟಿ ಇಡಬೇಕು.
-ಭರತ್‌ ಬಂಗೇರ, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಸದಸ್ಯ

ಜೀವಜಂತುಗಳಿಗೆ ತೊಂದರೆ
ಸಮುದ್ರದ ಜೀವರಾಶಿಗಳು ಮೈಕ್ರೋ ಪ್ಲಾಸ್ಟಿಕ್‌ನಿಂದ ಘಾಸಿಗೊಳ್ಳುತ್ತಿವೆ. ಸಮುದ್ರ ತಟದಲ್ಲಿ ಎತ್ತಲೂ ಆಗದೆ ಅಲ್ಲೇ ಪುಡಿ ಪುಡಿ ಆಗುವ ತೆಳು ಪ್ಲಾಸ್ಟಿಕ್‌ ಲೋಟಗಳು ಸಮುದ್ರ ತಟವನ್ನು ಕಸದ ರಾಶಿಯಷ್ಟೇ ಆಗಿಸದೆ, ಸಮುದ್ರವನ್ನ ಅದರ ಜೀವರಾಶಿಯನ್ನ ಮುಗಿಸುವ ಹಂತದಲ್ಲಿದ್ದಾವೆ. ಮೀನುಗಳ ಹೊಟ್ಟೆಯಿಂದ ಮನುಷ್ಯನ ಹೊಟ್ಟೆಗೆ ರವಾನೆ ಆಗುತ್ತದೆ ಇಂತಹ ಮೈಕ್ರೋ ಪ್ಲಾಸ್ಟಿಕ್‌ ಗಳು.
-ಡಾ| ರಶ್ಮಿ ಕುಂದಾಪುರ, ವೈದ್ಯಕೀಯ ಕಾಲೇಜಿನ ಉಪನ್ಯಾಸಕರು

Advertisement

Udayavani is now on Telegram. Click here to join our channel and stay updated with the latest news.

Next