Advertisement

ಬಸ್ಸಿನಲ್ಲಿ ವಿಷ ಸೇವಿಸಿದವರ ಪ್ರಾಣ ಕಾಪಾಡಿದ ಚಾಲಕ, ನಿರ್ವಾಹಕರಿಗೆ ಬಸ್ಸಿನಲ್ಲೇ ಸಮ್ಮಾನ!

09:58 AM Jan 13, 2020 | Hari Prasad |

ಉಡುಪಿ: ತಮಿಳುನಾಡು ಮೂಲದ ಪುರುಷ ಮತ್ತು ಮಹಿಳೆ ಒಂದೂವರೆ ವರ್ಷದ ಮಗುವಿನೊಂದಿಗೆ ಖಾಸಗಿ ಎಕ್ಸ್ ಪ್ರೆಸ್ ಬಸ್ಸಿನಲ್ಲಿ ಕೊಲ್ಲೂರಿನಿಂದ ಮಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಕುಂದಾಪುರ ಸಮೀಪದ ಬೆಲ್ತೂರು ಎಂಬಲ್ಲಿ ಬಸ್ಸಿನಲ್ಲೇ ವಿಷ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಕಾಲದಲ್ಲಿ ಸಮಯಪ್ರಜ್ಞೆ ಮೆರೆದು ಮಗು ಸಹಿತ ಮೂವರನ್ನೂ ಆಸ್ಪತ್ರೆಗೆ ಸೇರಿಸಿದ ಬಸ್ಸಿನ ಚಾಲಕ ಹಾಗೂ ನಿರ್ವಾಹಕರನ್ನು  ಬೀಯಿಂಗ್ ಸೋಷಿಯಲ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಇದರ ಸದಸ್ಯರು ರವಿವಾರದಂದು ಅವರ ಬಸ್ಸಿನಲ್ಲೇ ಸಮ್ಮಾನಿಸಿ ಗೌರವಿಸಿದರು.

Advertisement

ಕೊಲ್ಲೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಎ.ಕೆ.ಎಂ.ಎಸ್. ಹೆಸರಿನ ಎಕ್ಸ್ ಪ್ರೆಸ್ ಬಸ್ಸಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಈ ಪುರುಷ ಮತ್ತು ಮಹಿಳೆ ಬಸ್ಸಿನಲ್ಲೇ ವಿಷ ಸೇವಿಸಿ ಮಗುವಿಗೂ ಅಲ್ಪ ಪ್ರಮಾಣದ ವಿಷ ನೀಡಿದ್ದರು. ವಿಷ ಸೇವಿಸಿದ ಬಳಿಕ ಅವರಿಬ್ಬರೂ ಸೀಟಿನಿಂದ ಕೆಳಗೆ ಬಿದ್ದು ಒದ್ದಾಡುತ್ತಿರುವುದನ್ನು ಕಂಡ ಬಸ್ಸಿನ ನಿರ್ವಾಹಕ ಸತೀಶ್ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಚಾಲಕ ಇಕ್ಬಾಲ್ ಅವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಇಕ್ಬಾಲ್ ಅವರು ಬಸ್ಸಿನ ಹೆಡ್ ಲೈಟ್ ಆನ್ ಮಾಡಿ ಸುಮಾರು 15 ಕಿಲೋಮೀಟರ್ ದೂರ ಎಲ್ಲಿಯೂ ಬಸ್ಸನ್ನು ನಿಲ್ಲಿಸದೇ ನೇರವಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಸ್ಸನ್ನು ತಂದು ನಿಲ್ಲಿಸಿ ಮೂವರಿಗೂ ಪ್ರಥಮ ಚಿಕಿತ್ಸೆಯನ್ನು ಕೊಡಿಸಿದ್ದಾರೆ.

ಬಳಿಕ ಅವರಿಬ್ಬರು ಸೇರಿಕೊಂಡು ಅಲ್ಲಿಂದ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಉಡುಪಿಗೆ ಕರೆತಂದು ಜಿಲ್ಲಾಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಚಾಲಕ ಮತ್ತು ನಿರ್ಹಾಹಕರ ಈ ಕೆಲಸ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ವಿಷ ಸೇವಿಸಿದ ಮೂವರಲ್ಲಿ ಒಬ್ಬರು ಚಿಕಿತ್ಸೆ ಫಲಿಸದೇ ತೀರಿಕೊಂಡರೆ ಮಗು ಮತ್ತು ಮಹಿಳೆ ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ರವಿವಾರದಂದು ಪ್ರಯಾಣಿಕರ ಸಮ್ಮುಖದಲ್ಲಿ ಬಸ್ಸಿನಲ್ಲೇ ನಡೆದ ಈ ಸರಳ ಸಮ್ಮಾನ ಕಾರ್ಯಕ್ರಮದಲ್ಲಿ ಅವಿನಾಶ್ ಕಾಮತ್, ರವಿರಾಜ್ ಹೆಚ್.ಪಿ. ಸಹಿತ ಬೀಯಿಂಗ್ ಸೋಷಿಯಲ್ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ನೇಹಿತರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆಪತ್ಕಾಲದಲ್ಲಿ ಸಮಯಪ್ರಜ್ಞೆ ಮೆರೆದ ಸತೀಶ್ ಮತ್ತು ಇಕ್ಬಾಲ್ ಅವರ ಕೆಲಸವನ್ನು ಪ್ರಶಂಸಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next