Advertisement

ಅನಾರೋಗ್ಯದಿಂದ ಬಳಲುತ್ತಿದೆ ಕುಕ್ಕೆ ದೇಗುಲದ ‘ಯಶಸ್ವಿ’ಆನೆ

11:20 PM Aug 14, 2019 | mahesh |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಭಕ್ತರ ಆಕರ್ಷಣೆಯಾಗಿರುವ ದೇಗುಲದ ಯಶಸ್ವಿ ಆನೆ ಅನಾರೋಗ್ಯಕ್ಕೆ ಒಳಗಾಗಿದೆ. ಶೆಡ್‌ನ‌ಲ್ಲಿ ವಿಶ್ರಾಂತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದೆ.

Advertisement

ಲವಲವಿಕೆಯಿಂದಿದ್ದ ಆನೆಯು ನಾಲ್ಕು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದೆ. ಬಳಲಿರುವ ಆನೆ ಶೆಡ್‌ನ‌ಲ್ಲಿ ವಿಶ್ರಾಂತಿಯಲ್ಲಿದೆ. 16 ವಯಸ್ಸಿನ ಆನೆಯ ಆರೋಗ್ಯದಲ್ಲಿ ಏರುಪೇರಾಗಿದೆ. ಅಜೀರ್ಣ ಸಮಸ್ಯೆಗೆ ಒಳಗಾಗಿ ಭೇದಿ ಮಾಡುತ್ತಿದೆ. ನಾಲ್ಕು ದಿನಗಳಿಂದ ಮೆದು ಆಹಾರ ಮತ್ತು ನೀರು ನೀಡಲಾಗುತ್ತಿದ್ದು, ಅದೂ ಭೇದಿಯಾಗುತ್ತಿದೆ. ಗುತ್ತಿಗಾರು ಪಶುವೈದ್ಯ ಕೇಂದ್ರದ ನುರಿತ ವೈದ್ಯ ಡಾ| ವೆಂಕಟಾಚಲಪತಿ ಅವರನ್ನು ಕರೆಯಿಸಿ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಲಾಗಿದೆ.

ದೇಗುಲದಿಂದ ಸುಮಾರು 1. ಕಿ.ಮೀ. ದೂರದ ಇಂಜಾಡಿ ಬಳಿ ಆನೆ ಶೆಡ್‌ ಇದೆ. ಅರಣ್ಯದಂಚಿನ ಪ್ರಕೃತಿ ವಾತಾವರಣವಿರುವಲ್ಲಿ ಆನೆಗೆ ಸುಸಜ್ಜಿತ ಶೆಡ್‌ ಇತ್ತೀಚೆಗೆ ನಿರ್ಮಿಸಲಾಗಿತ್ತು. 2,500 ಚದರ ಅಡಿ ಜಾಗದ ಇದೇ ಶೆಡ್‌ನ‌ಲ್ಲಿ ಆನೆ ಈಗ ವಿಶ್ರಾಂತಿ ಪಡೆಯುತ್ತಿದೆ. ಸುಳ್ಯ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆ ಬದಿಯಲ್ಲೇ ಈ ಸ್ಥಳವಿದೆ. ಅನೇಕ ಮಂದಿ ಆನೆಯ ಶೆಡ್‌ಗೆ ತೆರಳಿ ಆನೆಯ ಆರೋಗ್ಯ ವಿಚಾರಿಸುತ್ತಿದ್ದಾರೆ.

ಆನಂದ್‌ ಸಿಂಗ್‌ ಕೊಡುಗೆ
ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಈ ಹಿಂದೆ ಇದ್ದ ಇಂದುಮತಿ ಆನೆ ಅನಾರೋಗ್ಯದಿಂದ ತೀರಿಕೊಂಡ ಬಳಿಕ ಕ್ಷೇತ್ರಕ್ಕೆ ಆನೆಯ ಕೊರತೆ ಇತ್ತು. ದೇಗುಲದ ಭಕ್ತ ಹೊಸಕೋಟೆಯ ಹಿಂದಿನ ಶಾಸಕ ಆನಂದ್‌ ಸಿಂಗ್‌ ಅವರು ಆನೆ ಮರಿ ಖರೀದಿಸಿ ಕೆಲ ವರ್ಷದ ಹಿಂದೆ ಸುಬ್ರಹ್ಮಣ್ಯ ದೇಗುಲಕ್ಕೆ ಕೊಡುಗೆಯಾಗಿ ನೀಡಿದ್ದರು. ಅದಕ್ಕೆ ಯಶಸ್ವಿ ಎಂದು ಹೆಸರಿಡಲಾಗಿತ್ತು.

ದೇವಸ್ಥಾನದ ಅಧೀನದ ಯಶಸ್ವಿ ಆನೆ ಹಿಂದೆ ಬೆಳಗ್ಗೆ 10ರ ವೇಳೆಗೆ ಆಗಮಿಸಿ ದೇಗುಲದ‌ ಹೊರಾಂಗಣದಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರೆಲ್ಲರಿಂದ ಕಾಣಿಕೆ ಹಣ್ಣುಹಂಪಲು ಸ್ವೀಕರಿಸಿ ಸೊಂಡಿಲಿನಿಂದ ಆಶೀರ್ವದಿಸುತ್ತಿತ್ತು. ಮಧ್ಯಾಹ್ನದ ಮಹಾಪೂಜೆ ವೇಳೆ ದೇಗುಲದ ಮುಂಭಾಗದ ಬಾಗಿಲಿನ ಎದುರಿನ ಗಂಟೆ ಬಾರಿಸುತ್ತಿತ್ತು. ಕೆಲ ಪ್ರಾಣಿ ಪ್ರಿಯರ ವಿರೋಧ ವ್ಯಕ್ತಗೊಂಡ ಬಳಿಕ ಬದಲಾವಣೆ ತಂದು ಆನೆಯ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿತ್ತು. ಈಗ ಪ್ರತಿದಿನ ಒಂದು ಬಾರಿ ದೇಗುಲಕ್ಕೆ ಆಗಮಿಸಿ ಹೊರಾಂಗಣದಲ್ಲಿ ಒಂದು ಸುತ್ತು ಬಂದ ಬಳಿಕ ಕೆಲ ಹೊತ್ತಷ್ಟೆ ದೇಗುಲದ ಹೊರಾಂಗಣದಲ್ಲಿ ಭಕ್ತರ ದರ್ಶನಕ್ಕೆ ಲಭಿಸುತ್ತಿದೆ. ಸದ್ಯ ಆನೆ ಬಹುತೇಕ ಸಮಯ ಶೆಡ್‌ನ‌ಲ್ಲೇ ಕಾಲ ಕಳೆಯುತ್ತಿದೆ.

Advertisement

ವಿಶೇಷ ಆಕರ್ಷಣೆ
ದೇಗುಲದ ಚಂಪಾಷಷ್ಠಿ ಜಾತ್ರಾ ಮಹೋತ್ಸವ, ಮಹಾರಥೊತ್ಸವ, ಪಂಚಮಿ ರಥೋತ್ಸವ ಹಾಗೂ ವಿಶೇಷ ಉತ್ಸವಗಳ ಸಂದರ್ಭ ನಡೆಯುವ ರಥೋತ್ಸವದ ವೇಳೆ ಆನೆ ಮೆರವಣಿಗೆಯಲ್ಲಿ ಭಾಗವಹಿಸಿ ಗಮನ ಸೆಳೆಯುತ್ತದೆ. ನೀರು ಬಂಡಿ ಉತ್ಸವ ಹಾಗೂ ಕುಮಾರಧಾರಾ ನದಿ ಯಲ್ಲಿ ಜಳಕದ ದಿನ ನಡೆಯುವ ಆವಭೃ ಥೋತ್ಸವ, ನೌಕಾವಿಹಾರ ವೇಳೆ ಕೂಡ ಯಶಸ್ವಿ ನದಿಗಿಳಿದು ನೀರಾಟದಲ್ಲಿ ತೊಡಗಿ ಭಕ್ತರಿಗೆ ಮನೋರಂಜನೆ ನೀಡುತ್ತದೆ.

ತೀವ್ರ ನಿಗಾ ಇರಿಸಿ ಕೊಂಡಿದ್ದೇವೆ

ಆನೆಗೆ ಸೂಕ್ತ ಚಿಕಿತ್ಸೆ ಜತೆಗೆ ಉತ್ತಮ ಆಹಾರ ಪೂರೈಕೆ ಮಾಡಲಾಗುತ್ತಿದೆ. ಆನೆ ಅನಾರೋಗ್ಯಕ್ಕೆ ತುತ್ತಾದ ಆರಂಭದ ದಿನಗಳಿಗಿಂತ ಈಗ ತುಸು ಚೇತರಿಸಿಕೊಂಡಿದೆ. ಆನೆ ಬಗ್ಗೆ ತೀವ್ರ ನಿಗಾ ಇರಿಸಿಕೊಂಡಿದ್ದೇವೆ.
– ನಿತ್ಯಾನಂದ ಮುಂಡೋಡಿ ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಕುಕ್ಕೆ ಸುಬ್ರಹ್ಮಣ್ಯ ದೇಗುಲ

ಚಿಕಿತ್ಸೆಗೆ ಸ್ಪಂದಿಸುತ್ತಿದೆ

ದೇಗುಲದ ಆನೆಯು ಅಜೀರ್ಣದಿಂದ ಬಳಲುತ್ತಿದೆ. ಹಿಂದೆ ಈ ರೀತಿ ಆದಾಗ ಬೇಗನೆ ಚೇತರಿಸಿಕೊಳ್ಳುತ್ತಿತ್ತು. ಈ ಬಾರಿ ನಿಧಾನವಾಗಿದೆ. ನೈಸರ್ಗಿಕವಾದ ಪ್ರಕ್ರಿಯೆಗಳಿಂದ ಇದಾಗಿರುವ ಸಾಧ್ಯತೆಯಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದೆ. ನಿಗಾ ವಹಿಸಿದ್ದೇವೆ.
-ಡಾ| ವೆಂಕಟಾಚಲಪತಿ ಪಶುವೈದ್ಯ ಗುತ್ತಿಗಾರು
Advertisement

Udayavani is now on Telegram. Click here to join our channel and stay updated with the latest news.

Next