Advertisement

ಕುಮಾರಧಾರಾ ನದಿಗೆ ಇಳಿಯುವಾಗ ಇರಲಿ ಮುಂಜಾಗ್ರತೆ

12:26 AM Apr 18, 2019 | mahesh |

ನರಿಮೊಗರು: ಪುತ್ತೂರು ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಅವಭೃಥ ಸ್ನಾನಕ್ಕಾಗಿ ಪೇಟೆ ಸವಾರಿಯ ಮೂಲಕ ವೀರಮಂಗಲ ಕುಮಾರಧಾರಾ ನದಿ ತಟಕ್ಕೆ ಸಂಭ್ರಮದಿಂದ ತೆರಳುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಎ. 18ರ ಸಂಜೆ ಪುತ್ತೂರು ದೇವಸ್ಥಾನದಿಂದ ಹೊರಟು
ದರ್ಬೆ-ಕೂರ್ನಡ್ಕ-ಮರೀಲು-ಮುಕ್ವೆ- ಪುರುಷರಕಟ್ಟೆ-ನರಿಮೊಗರು-ಕರೆಮನೆ- ಕೊಡಿನೀರು ಮೂಲಕ ಕುಕ್ಕತ್ತಡಿ ಅರಿಪೆಕಟ್ಟ ದಾರಿಯಾಗಿ ಸಾಗಿ ಎ. 19ಕ್ಕೆ ಮುಂಜಾನೆ ವೀರಮಂಗಲಕ್ಕೆ ತಲುಪಿ ಅಲ್ಲಿ ಅವಭೃಥ ಸ್ನಾನ ನೆರವೇರುತ್ತದೆ.

Advertisement

ಹಿಂದೆ ದೇವರ ಅವಭೃಥ ಸ್ನಾನ, ನದಿ ನೀರಿನ ಅಭಿಷೇಕ ಹೀಗೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯದೆ ಭಕ್ತರು ನದಿಗೆ ಇಳಿಯುವಂತಿರಲಿಲ್ಲ. ಸ್ನಾನ ಮಾಡುವುದು ಕೂಡ ಸರಿಯಲ್ಲ. ಇದು ಹಿಂದೆ ಕಡ್ಡಾಯವಾಗಿ ಪಾಲನೆಯಾದರೂ, ಇತ್ತೀಚಿನ ದಿನಗಳಲ್ಲಿ ಅವಭೃಥ ಸವಾರಿಯ ಜತೆ ಬಂದ ಭಕ್ತರಲ್ಲಿ ಕೆಲವು ಮಂದಿ ದೇವರ ಅವಭೃಥ ಸ್ನಾನಕ್ಕೆ ಮೊದಲೇ ನದಿಯಲ್ಲಿ ಸ್ನಾನ ಮಾಡುತ್ತಾರೆ. ಕೆಲವು ವರ್ಷಗಳ ಹಿಂದೆ ಹೀಗೆ ಸ್ನಾನ ಮಾಡಿದ ಇಬ್ಬರು ವಿದ್ಯಾರ್ಥಿಗಳು ನೀರಿನ ಕಯದಲ್ಲಿ ಸಿಲುಕಿ ಮೃತಪಟ್ಟಿದ್ದರು. ಇದಕ್ಕಾಗಿ ಸ್ನಾನಕ್ಕೆ ತೆರಳುವವರು ಸೂಚನೆಗಳನ್ನು ಪಾಲಿಸಿಕೊಂಡು ಎಚ್ಚರವಾಗಿರಬೇಕು.

ದೇವರ ಅವಭೃಥ ಸ್ನಾನದ ಬಳಿಕವೇ ನದಿ ನೀರು ತೀರ್ಥವಾಗುತ್ತದೆ. ಆ ಬಳಿಕ ಮಾಡಿದ ಸ್ನಾನ ಪವಿತ್ರ ತೀರ್ಥ ಸ್ನಾನವಾಗುತ್ತದೆ. ಈ ಪವಿತ್ರ ಸ್ನಾನ ಫಲಪ್ರದಾಯಕ. ಪಾಪನಾಶಕ ಎಂಬುದು ಹಿಂದಿನಿಂದ ಹರಿದು ಬಂದ ಸಂಪ್ರದಾಯವಾಗಿದೆ. ದೇವರಿಗಿಂತ ಮೊದಲು ಇಳಿಯಬಾರದು. ಮಹಾಲಿಂಗೇಶ್ವರ ದೇವರ ಜಳಕಕ್ಕೆ ವಿಶೇಷ ಪ್ರಾಧಾನ್ಯ ಇದೆ. ಅವಭೃಥಕ್ಕೆಂದೇ ಪುತ್ತೂರಿನಿಂದ ವೀರಮಂಗಲಕ್ಕೆ ಬರುವ ದೇವರು ನದಿ ತಟದ ಕಟ್ಟೆಯಲ್ಲಿ ಪೂಜೆ ಪಡೆದು ಅಲ್ಲಿಂದ ಜಳಕ ಸೇವೆಗೆ ಬರುತ್ತಾರೆ. ಅನಂತರ ಪೂಜಾ ವಿಧಿ ಮುಗಿಸಿ ಪುತ್ತೂರಿಗೆ ನಿರ್ಗಮನವಾಗುತ್ತದೆ.

ಅಪಾಯ ಸಾಧ್ಯತೆ
ದೇವರ ಸ್ನಾನವಾದ ಬಳಿಕ ಅದೇ ನೀರಿನಲ್ಲಿ ಪುಣ್ಯಸ್ನಾನ ಮಾಡಲು ಸಾವಿ ರಾರು ಸಂಖ್ಯೆಯ ಜನ ಕಾಯುತ್ತಿರುತ್ತಾರೆ. ಇಲ್ಲಿನ ನಂಬಿಕೆ ಪ್ರಕಾರ ಎ. 18ರ ರಾತ್ರಿಯಾದ ಅನಂತರ ಮರುದಿನ ಬೆಳಗ್ಗೆ ದೇವರ ಜಳಕ ಆಗುವ ಮೊದಲು ಜಳಕದ ಗುಂಡಿಗಿಂತ ಮೇಲ್ಭಾಗದಲ್ಲಿ ಯಾರೂ ಸ್ನಾನ ಮಾಡಬಾರದು. ನೀರಿಗಿಳಿಯಬಾರದು. ಹಾಗೇನಾದರೂ ಆದರೆ ಅಪಾಯ
ಕಟ್ಟಿಟ್ಟ ಬುತ್ತಿ.

ಅಪಾಯಕಾರಿ ನೀರಿನ ಸುಳಿಗಳು
ಎಪ್ರಿಲ್‌ ಹೊತ್ತಲ್ಲಿ ಇಲ್ಲಿನ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಕೆಲವು ಕಡೆಯ ಹೊಂಡಗಳಲ್ಲಿ ಮಾತ್ರ ನೀರಿರುತ್ತದೆ. ದೇವರ ಜಳಕದ ಗುಂಡಿಯಲ್ಲೂ ತಾತ್ಕಾಲಿಕವಾಗಿ ನೀರು ಸಂಗ್ರಹಿಸಲಾಗುತ್ತದೆ. ಆದರೆ ಇದಕ್ಕಿಂತ ಮೇಲ್ಭಾಗಕ್ಕೆ ಬಂದರೆ ಅಪಾಯಕಾರಿ ಮೂರ್ನಾಲ್ಕು ಕಯ (ಸುಳಿ ಇರುವ ನೀರಿನ ಹೊಂಡ) ಇದ್ದು, ಇದರಲ್ಲಿ ಹೇರಳ ನೀರಿದೆ. ಕಯಕ್ಕೆ ಇಳಿದರೆ ನುರಿತ ಈಜುಪಟುಗಳಿಗೂ ನಿಯಂತ್ರಣ ತಪ್ಪುತ್ತದೆ ಎನ್ನುತ್ತಾರೆ ಅಲ್ಲಿಯವರು. ಈ ಕಾರಣಕ್ಕಾಗಿಯೇ ಇಲ್ಲಿ ಎಚ್ಚರಿಕೆ ನೀಡುವ ಕೆಲಸ ಮಾಡಲಾಗುತ್ತದೆ.

Advertisement

 ಎಚ್ಚರಿಕೆ ಅಗತ್ಯ
ಇಲ್ಲಿ ಕಟ್ಟೆ ಸಮಿತಿಯವರು ಒಂದು ವಾರದಿಂದ ಸಿದ್ಧತೆ ಹಾಗೂ ಮುಂಜಾಗ್ರತಾ ಕ್ರಮಗಳಿಗೆ ಶ್ರಮಿಸುತ್ತಿದ್ದಾರೆ. ಧ್ವನಿವರ್ಧಕಗಳಲ್ಲಿ ಸೂಚನೆ ನೀಡುತ್ತಾರೆ. ಆದರೂ ಕೆಲವೊಮ್ಮೆ ದುರ್ಘ‌ಟನೆಗಳು ನಡೆದಿವೆ. ದೇವರ ಅವಭೃಥವಾದ ಬಳಿಕ ಸ್ನಾನ ಮಾಡಿ ತೆರಳಬಹುದು. ಎಚ್ಚರಿಕೆ ಅಗತ್ಯ. ಜಳಕದ ಸ್ಥಳ ಹೊರತಾಗಿ ನದಿಯ ಇತರ ಕಡೆಗಳಲ್ಲಿ ಸುಳಿ ಗಳಿರುವುದರಿಂದ ಇಳಿಬಾರದು.
ರವೀಂದ್ರ ಗೌಡ ಕೈಲಾಜೆ, ಸ್ಥಳೀಯರು ವೀರಮಂಗಲ

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next