ಸಮಾಜದ ಚೌಕಟ್ಟಿನಲ್ಲಿ ಬಂಧಿಯಾದ ಎಷ್ಟೋ ಅಜೀವ ವಸ್ತುಗಳಿಗೆ ಸ್ವಾತಂತ್ರ್ಯವಿದೆ. ಆದರೆ ದುರದೃಷ್ಟ ಸಂಗತಿ ಎಂದರೆ ಸಮಾಜವನ್ನು ಕಟ್ಟಿದ, ಸಮಾಜದಲ್ಲಿ ಬದುಕಬೇಕಾದ ನಾವೇ ನಮ್ಮಿಷ್ಟದಂತೆ ಬದುಕುವ ಸ್ವಾತಂತ್ರ್ಯವನ್ನು ಮಾನಸಿಕವಾಗಿ ಕಳೆದುಕೊಂಡಿದ್ದೇವೆ. ಅನುಭವಿಸಬೇಕಾದ, ಆಸ್ವಾದಿಸಬೇಕಾದ ಎಷ್ಟೋ ವಿಷಯಗಳಿಂದ ನಾವೆಲ್ಲ ವಂಚಿತವಾಗಿರುವುದು ಸುಳ್ಳಲ್ಲ.
ಹೌದು, ಮಾನವ ತನ್ನ ಏಳ್ಗೆಯಾಗುತ್ತಿದ್ದಂತೆ ತನ್ನಲ್ಲಿಯೇ ಹಲವಾರು ಪಂಗಡಗಳನ್ನು ಸೃಷ್ಟಿಸಿಕೊಂಡು ತನ್ನಿಚ್ಛೆಯಂತೆ ಬದುಕ ತೊಡಗಿದ. ತಾನು ನೈಪುಣ್ಯ ಹೊಂದಿದ ಕೆಲಸ ಮಾಡುತ್ತ ತನ್ನ ಸಂಸಾರ, ಕುಟುಂಬವನ್ನು ಸೃಷ್ಟಿಸಿಕೊಂಡ. ಹೀಗೆ ಆತನ ಕೆಲಸದಿಂದ ಆತನಿಗೆ ಹೆಸರು, ಧರ್ಮ, ಜಾತಿ ಸೃಷ್ಟಿಯಾಗಿದ್ದು ಎಲ್ಲರಿಗೂ ತಿಳಿದ ಸಾಮಾನ್ಯ ಸಂಗತಿ. ಆದರೇ ಇದನ್ನೆಲ್ಲ ಅರಿತ ನಾವೇಕೆ ಜಾತಿ, ಧರ್ಮ ಎಂದು ನಮ್ಮ ನಮ್ಮಲ್ಲಿಯೇ ಗೋಡೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ? ಇದಕ್ಕೆ ನಮ್ಮಲ್ಲಿ ಉತ್ತರವಿಲ್ಲ. ನಾವು ಬುದ್ಧಿವಂತರಾದರೂ ಸಹ ನಮ್ಮಲ್ಲಿನ ಕೊಳಕು ಮನಃಸ್ಥಿತಿಯನ್ನು ಜಾತಿ ಎತ್ತಿ ಹಿಡಿಯುವ ಮುಖಾಂತರ ತೋರಿಸುತ್ತಿದ್ದೇವೆ. “ಸರ್ವರಿಗೂ ಸಮಪಾಲು, ಸಮಬಾಳು” ಎಂಬ ವಾಕ್ಯವನ್ನು ಮರೆತು “ಸರ್ವರಿಗೂ ಸವಾಲು, ಸಿಡಿದೇಳು” ಎಂಬ ಮಾನಸಿಕತೆಯನ್ನು ರೂಢಿಸಿಕೊಳ್ಳುತ್ತಿದ್ದೇವೆ.
ಎಲ್ಲರ ತಟ್ಟೆಯ ಅನ್ನ ಒಂದೇ ಆಗಿದ್ದರೂ ಅನ್ನ ತಿನ್ನುವ ದೇಹಕ್ಕೆ ಮಾತ್ರ ಜಾತಿ ಬೇರೆ, ಬೇರೆ ಎಂಬ ಹುಚ್ಚು ಕಲ್ಪನೆಯನ್ನು ನಾವೇ ನೀಡಿದ್ದೇವೆ. ನನ್ನದು ದೊಡ್ಡಜಾತಿ, ನಿನ್ನದು ಸಣ್ಣ ಜಾತಿ, ನಾ ಮೇಲು,ನೀ ಕೀಳು ಎಂಬ ಅಹಂಕಾರದ ಬಲೆಗೆ ಸಿಕ್ಕಿಕೊಂಡು ನಮ್ಮೆಲ್ಲರ ಅಂತ್ಯಕ್ಕೆ ನಾವೇ ಮುನ್ನುಡಿ ಬರೆಯುತ್ತಿದ್ದೇವೆ. ವಿಜ್ಞಾನ ಮುಂದುವರಿಯುತ್ತಿದ್ದರೂ ನಮ್ಮಲ್ಲಿನ ಅಜ್ಞಾನದ ಬೇರನ್ನು ಕಿತ್ತೆಸೆಯಲು ನಮಗ್ಯಾರಿಗೂ ಸಾಧ್ಯವಾಗುತ್ತಿಲ್ಲ. ಹೀಗೆ ಕಲ್ಪಿತ ಮೌಡ್ಯಕ್ಕೆ ನಮ್ಮನ್ನು ನಾವೇ ಬಲಿ ಕೊಡುತ್ತಿರುವುದು ವಿಷಾದದ ಸಂಗತಿ.
ಈ ತಳಹದಿ ಇರದ ಜಾತಿಯಿಂದ ನಮ್ಮಲ್ಲಿರುವ ಮನುಷ್ಯತ್ವವನ್ನೇ ಮರೆತಿದ್ದೇವೆ. ನಾವೆಲ್ಲ ಒಂದೇ ಎಂದು ಭಾಷಣ ಬಿಗಿದು, ಮನೆಯಲ್ಲಿ ಜಾತಿವಾದವನ್ನು ಅನುಸರಿಸುತ್ತೇವೆ.”ಹುಟ್ಟು ಉಚಿತ ಸಾವು ಖಚಿತ” ಎಂಬ ವಾಕ್ಯ ಅರಿತಿದ್ದರೂ ಸಹ ಕೂಡಿ ಬದುಕುವ ಗೋಜಿಗೆ ಯಾರೂ ಹೋಗುವುದಿಲ್ಲ. ನಾವೇ ಶ್ರೇಷ್ಠ, ನಾವೇ ಮೇಧಾವಿ ಎಂದು ಉದ್ಧಟತನದ ಮಾತುಗಳನಾಡಿ ಜಾತಿ, ಪ್ರೀತಿಯನ್ನ ಪ್ರದರ್ಶಿಸುತ್ತೇವೆ. ಹೀಗೆ ನಾನು ಆ ಜಾತಿ, ನೀನು ಈ ಜಾತಿ ಎಂದು ಭೇದ- ಭಾವ ಸೃಷ್ಟಿಸುತ್ತಿರುವ ನಾವೆಲ್ಲ ಕೊನೆಗೆ ಮಣ್ಣಲ್ಲಿ ಮಣ್ಣಾಗುವವರೇ ಎಂಬ ಸತ್ಯವನ್ನ ಎಲ್ಲರೂ ಮರೆತಿದ್ದೇವೆ. ಹಾಗಾಗಿ ಇನ್ನಾದರೂ ಎಲ್ಲರೂ ಎಚ್ಚೆತ್ತುಕೊಳ್ಳೋಣ. ನಾವೆಲ್ಲರೂ ಬೇರೆ ಬೇರೆ ಜಾತಿ ಎನ್ನುವುದಕ್ಕಿಂತ ನಾವೆಲ್ಲರೂ ಮನುಷ್ಯ ಜಾತಿ ಎಂದು ಜತೆಗೂಡಿ ಬದುಕೋಣ.
ಫಕ್ಕೀರೇಶ ಜಾಡರ
ಜಿಎಫ್ ಜೆ ಕಾಲೇಜು ಹಾವೇರಿ