ಪಿಯುಸಿ ನಂತರ ರಜೆಯಲ್ಲಿ ಅಜ್ಜಿಯ ಮನೆಗೆ ಹೋಗಿದ್ದೆ. ಪ್ರತಿವರ್ಷವೂ ರಜೆ ಕಳೆಯುವುದೇ ಅಜ್ಜಿ ಮನೆಯಲ್ಲಿ. ಅದು ಚಿಕ್ಕಮ್ಮ, ಚಿಕ್ಕಪ್ಪಂದಿರು, ಅವರ ಮಕ್ಕಳು ಇರುವ ಕೂಡು ಕುಟುಂಬ. ರಜೆಯಲ್ಲಿ ತಿಂಗಳಾನುಗಟ್ಟಲೆ ಕಬ್ಬಿನ ಗಾಣ ನಡೆಯುತ್ತಿತ್ತು. ಆಲೆಮನೆಯ ಸೊಬಗು, ಬೆಲ್ಲ ಕುದಿಯುವಾಗಿನ ಪರಿಮಳದ ಜೊತೆಗೆ ಬಿಸಿಬೆಲ್ಲ ತಿನ್ನುವ ಹಾಗೂ ಕಬ್ಬಿನ ತೋಟ ಸುತ್ತು ಹಾಕುವ ಖುಷಿ ನನ್ನನ್ನು ಮತ್ತೆ ಮತ್ತೆ ಅಜ್ಜಿ ಮನೆಗೆ ಸೆಳೆಯುತ್ತಿತ್ತು.
ಚಿಕ್ಕಮ್ಮಂದಿರು ಬೆಳಗ್ಗೆ ಬೇಗ ಎದ್ದು, ಬೆಲ್ಲ ಮಾಡುವ ಆಳುಕಾಳುಗಳಿಗೆ ಅಡಿಗೆ ಮಾಡುತ್ತಿದ್ದರು. ನಾನೂ ಅವರ ಜೊತೆ ಕೈ ಜೋಡಿಸುತ್ತಿದ್ದೆ. ಅವತ್ತೂಂದು ದಿನ ಬೆಳಗ್ಗೆ ಬೆಳಗ್ಗೆಯೇ ಬೆಂಗಳೂರಿಂದ ವರನ ಕಡೆಯವರು ನೋಡ್ಲಿಕ್ಕೆ ಬರ್ತಾರೆ ಅನ್ನೋ ನ್ಯೂಸ್ ಸಿಕ್ಕಿತು. ಆಗ ನನ್ನ ಚಿಕ್ಕಮ್ಮ, “ಅಯ್ಯೋ ಜಯಾ, ಅಡಿಗೆ ಬಿಡು. ಬೇಗ ರೆಡಿಯಾಗು’ ಅಂತ ಅವಸರಿಸಿದರು. ನನಗೆ ಮುಂದೆ ಓದುವ ಮನಸ್ಸಿದ್ದುದರಿಂದ ವಧು ಪರೀಕ್ಷೆ ಬೇಡವಾಗಿತ್ತು.
ಆದರೂ, ಮನೆಯವರೆಲ್ಲರ ಕೋರಿಕೆಯಂತೆ ರೆಡಿಯಾದೆ. ಒಬ್ಬರು ಚಿಕ್ಕಮ್ಮ ತಮ್ಮ ಸೀರೆ ಕೊಟ್ಟರೆ, ಇನ್ನೊಬ್ಬರು ತಮ್ಮ ರವಿಕೆ ಕೊಟ್ಟರು. ಏನೇನೂ ಸರಿ ಹೊಂದದಿದ್ದರೂ ನಾನು ಅದನ್ನೇ ಉಡಬೇಕಿತ್ತು. ನನಗೆ ಸೀರೆ ಉಡಲು ಬರುತ್ತಿರಲಿಲ್ಲ. ಉಟ್ಟರೂ ನಡೆಯಲು ಆಗುತ್ತಿರಲಿಲ್ಲ. ಅವರ ಒತ್ತಾಸೆಯಂತೆ ವಧುಪರೀಕ್ಷೆಗೆ ಕೂತೆ. ಹುಡುಗನ ತಂದೆ ಸಿಕ್ಕಾಪಟ್ಟೆ ದೈವಭಕ್ತರು. ಹಾಗಾಗಿ ಪೂಜೆಯ ವಿಧಿವಿಧಾನಗಳ ಬಗ್ಗೆ ಪ್ರಶ್ನೆ ಮಾಡಿದರು.
ನನಗೆ ಸರಿಯಾಗಿ ಉತ್ತರಿಸಲಾಗಲಿಲ್ಲ. ಆಗ ಅವರು, “ಏನ್ರೀ, ನಿಮ್ಮ ಮಗಳಿಗೆ ಏನು ಸಂಸ್ಕಾರ ಕೊಟ್ಟಿದ್ದೀರ? ಏನೂ ಗೊತ್ತೇ ಇಲ್ಲ ಅಂತಾಳೆ’ ಅಂದರು. ನನಗೂ ಸಿಟ್ಟು ತಡೆಯಲಾಗಲಿಲ್ಲ. “ನಿಮ್ಮ ಮಗನಿಗೆ ಹೆಂಡ್ತಿಗಿಂತ, ಮನೆಗೆ ಒಬ್ಬ ಪೂಜಾರಿಯ ಅವಶ್ಯಕತೆ ಇದೆ ಅನ್ನಿಸುತ್ತೆ. ಬೇಕಾದ್ರೆ ದುಡ್ಡು ಕೊಟ್ಟು ಇಟ್ಟುಕೊಳ್ಳಿ’ ಅಂದೆ. ಮೊದಲೇ ಒಲ್ಲದ ವಧುಪರೀಕ್ಷೆ ಹೀಗೆ ಮುರಿದು ಬಿತ್ತು. ಹುಡುಗ ಮಾತ್ರ ಹರಳೆಣ್ಣೆ ಕುಡಿದವನಂತೆ ಅಪ್ಪನ ಮುಖ ನೋಡ್ತಿದ್ದ.
ಹುಡುಗನ ತಂದೆಗೆ ಅವಮಾನವಾದಂತಾಗಿ ಸಿಡಿಮಿಡಿ ಮಾಡ್ತಾ ಎದ್ದೇ ಬಿಟ್ಟರು. ವಧುಪರೀಕ್ಷೆಗೆ ಬಂದಾಗ ಪೂಜೆ ಮಾಡಲು ತಂದಿದ್ದ ಎಲ್ಲ ಸಾಮಾನುಗಳನ್ನು ಮಗ ಕಾರಲ್ಲಿ ಇಟ್ಟ. ಬಂದದಾರಿಗೆ ಸುಂಕವಿಲ್ಲವೆಂಬಂತೆ ಹೊರಟು ಹೋದರು. “ಅಯ್ಯೋ, ಮೂರು ಹೊತ್ತು ಪೂಜೆ ಮಾಡೋ ಮಾವನ ಯೋಗ ತಪ್ಪಿತಲ್ಲೇ’ ಅಂತ ಗೆಳತಿಯರು ಕಿಚಾಯಿಸಿದರು. “ಸುಮ್ಮನೆ ಇವತ್ತು ನನ್ನ ಮೂಡ್ ಹಾಳಾಯಿತು. ಎಂಥ ಚಂದ ಬಿಸಿಬೆಲ್ಲ ತಿನ್ನೋಕೆ ಹೊರಟಿದ್ದೆ ನಾನು’ ಅಂದಾಗ ಎಲ್ಲರೂ “ನಾಳೆ ಹೋಗುವಿಯಂತೆ ಈಗ ಮುಖ ಸಡಿಲಿಸು’ ಅಂತ ನಕ್ಕರು.
* ಜಯಶ್ರೀ ಬಿ. ಭಂಡಾರಿ, ಬಾದಾಮಿ