Advertisement

ಶಿಕ್ಷಣದೊಂದಿಗೆ ಸಂಸ್ಕಾರವಂತರಾಗುವುದೂ ಅತಿ ಮುಖ್ಯ

04:58 PM Nov 18, 2018 | |

ಚಿತ್ರದುರ್ಗ: ಮಕ್ಕಳು ಶ್ರೇಷ್ಠ ವ್ಯಕ್ತಿಗಳ, ಮಹಾನ್‌ ಸಾಧಕರ ತತ್ವ ಆದರ್ಶಗಳನ್ನು, ಸಮಯಪಾಲನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಗ ಸಾಧಕ ವ್ಯಕ್ತಿಗಳಾಗಿ ರೂಪುಗೊಳ್ಳಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಹೇಳಿದರು.

Advertisement

ನಗರದ ತರಾಸು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ ಬೆಂಗಳೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್‌ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಚಿತ್ರದುರ್ಗ, ಮಕ್ಕಳ ಸಹಾಯವಾಣಿ, ಶ್ರೀ ಬಸವೇಶ್ವರ ವಿದ್ಯಾಸಂಸ್ಥೆ ಹಾಗೂ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಮಿ ವಿವೇಕಾನಂದರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಸಾಕಷ್ಟು ಕೊಡುಗೆ ನೀಡಬಹುದು. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಗುಣ ಅಳವಡಿಸಿಕೊಳ್ಳಬೇಕು. ಶಿಕ್ಷಣ ಪಡೆಯುವುದರ ಜೊತೆಗೆ ಸಂಸ್ಕಾರವಂತರಾಗಿಯೂ ಬಾಳಬೇಕು ಎಂದು ಕರೆ ನೀಡಿದರು.

ದೇಶದ ಮೊದಲ ಪ್ರಧಾನಿ ನೆಹರು ಅವರಿಗೆ ಮಕ್ಕಳೆಂದರೆ ಪಂಚಪ್ರಾಣ. ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತ ದೆ. ನೆಹರು ಮೂಲತಃ ಕಾಶ್ಮೀರದವರು. ಅವರ ಪೂರ್ವಜರು ದೆಹಲಿಯ ನದಿ ಸಮೀಪದ ಕಾಲುವೆಯೊಂದರ ಪಕ್ಕದಲ್ಲಿ ನೆಲೆಸಿದ್ದರು. ಆ
ಕಾಲುವೆಗೆ ನೆಹರ್‌ ಎಂಬ ಹೆಸರಿತ್ತು. ಹಾಗಾಗಿ ಅವರ ಮನೆತನಕ್ಕೆ ನೆಹರು ಎಂಬ ಹೆಸರು ಬಂತು ಎಂದರು.
 
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್‌.ಬಿ. ವಿಶ್ವನಾಥ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹಾಗಾಗಿ ಮಕ್ಕಳನ್ನು ಪೋಷಕರು ಹಾಗೂ ಶಿಕ್ಷಕರು ಉತ್ತಮ ವ್ಯಕ್ತಿಗಳನ್ನಾಗಿ ಬೆಳೆಸಬೇಕು. ಈ ಹಿಂದೆ ಮಕ್ಕಳ ಜೀವನಕ್ಕೆ ಆಸ್ತಿ ಮಾಡಲಾಗುತ್ತಿತ್ತು.

ಆದರೆ ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನೇ ಆಸ್ತಿಯನ್ನಾಗಿ ಮಾಡುತ್ತಿದ್ದಾರೆ. ಇದಕ್ಕೆ ಮಕ್ಕಳು ತಮ್ಮ ಪೋಷಕರಿಗೆ ಚಿರಋಣಿಗಳಾಗಿರಬೇಕು. ಮುಪ್ಪಿನ ಕಾಲದಲ್ಲಿ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ತಿಳಿಸಿದರು.
 
ನ್ಯಾಯಾಧೀಶರಾದ ಎಸ್‌.ಆರ್‌. ದಿಂಡಲಕೊಪ್ಪ, ಎಚ್‌.ಎಂ. ವಿರೂಪಾಕ್ಷಯ್ಯ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿವು ಯಾದವ್‌, ಜಿಪಂ ಯೋಜನಾ ನಿರ್ದೇಶಕಿ ಸುನೀತಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ| ಆರ್‌. ಪ್ರಭಾಕರ್‌, ಸದಸ್ಯೆ ಡಿ.ಕೆ. ಶೀಲಾ, ಬಾಲನ್ಯಾಯ ಮಂಡಳಿಯ ಸುಮನ ಎಸ್‌. ಅಂಗಡಿ ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಜೆ. ವೈಶಾಲಿ ಸ್ವಾಗತಿಸಿದರು. ಶಿಕ್ಷಕ ಹುರುಳಿ ಬಸವರಾಜ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next