ಬೆಳ್ತಂಗಡಿ: ಪರಿಶುದ್ಧರಾಗಿ ಕ್ಷೇತ್ರ ಸಂದರ್ಶನ ಮಾಡಿ ಮಂಜುನಾಥ ಸ್ವಾಮಿಯ ಅನುಗ್ರಹ ಪಡೆದ ಪಾನಮುಕ್ತರ ಬದುಕು ಪಾವನವಾಗುತ್ತದೆ. ಕುಡಿತವೆಂಬ ಮಡಿ ಮೈಲಿಗೆಯಿಂದ ಹೊರಗೆ ಬಂದ ಇವರ ವ್ಯಕ್ತಿತ್ವ ಎಲ್ಲರೂ ಮೆಚ್ಚುವಂಥದ್ದು. ವ್ಯಸನ ಬಿಡುವುದೆಂದರೆ ಬದುಕು ಸ್ವೀಕರಿಸುವುದು ಎಂದರ್ಥ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಭವನದಲ್ಲಿ ಮದ್ಯವರ್ಜನ ಶಿಬಿರಗಳಿಂದ ಪಾನಮುಕ್ತರಾಗಿ ಯಶಸ್ವಿ 100 ದಿನಗಳನ್ನು ಪೂರೈಸಿದ ನವಜೀವನ ಸದಸ್ಯರಿಗೆ ನಡೆದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೆ.ಆರ್. ಪೇಟೆ, ಮಂಡ್ಯ, ಆನೆಕಲ್, ಗದಗ, ಪಿರಿಯಾಪಟ್ಟಣ, ಹೊನ್ನಾವರ, ಚಿಂತಾಮಣಿ, ಶಿರಸಿ, ದೇವನಹಳ್ಳಿ, ಹಿರೇಕೆರೂರು, ಕಡೂರು,ಬಂಗಾರಪೇಟೆ, ಗೋಕಾಕ್, ಮಂಗಳೂರು, ವಿರಾಜಪೇಟೆ, ಕೂಡ್ಲಿಗಿ, ಕೆ.ಆರ್. ನಗರ, ಬಳ್ಳಾರಿ, ಚನ್ನರಾಯ ಪಟ್ಟಣ, ಬೆಳಗಾವಿ, ಚಿಕ್ಕನಾಯಕನಹಳ್ಳಿ, ಹರಿಹರ, ರೋಣ, ಲಿಂಗಸುಗೂರು, ಹೊನ್ನಾಳ್ಳಿ, ಶಿರಹಟ್ಟಿ, ಕುಂದಾಪುರ, ಹಗರಿಬೊಮ್ಮನಹಳ್ಳಿ, ಹುನಗುಂದ ಕಡೆಗಳಿಂದ ಪಾನಮುಕ್ತರು ಆಗಮಿಸಿದ್ದರು.
ಜಿಲ್ಲಾ ಜನಜಾಗೃತಿ ವೇದಿಕೆಗಳ ಅಧ್ಯಕ್ಷರು, ಪದಾಧಿಕಾರಿಗಳು, ವ್ಯವಸ್ಥಾಪನ ಸಮಿತಿ ಅಧ್ಯಕ್ಷರು, ಸದಸ್ಯರು, ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿ. ಪಾಯಸ್, ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಕಾರ್ಯಕ್ರಮ ಸಂಘಟಿಸಿದ್ದರು.
ಶಿಬಿರಾಧಿಕಾರಿಗಳಾದ ಗಣೇಶ್ ಆಚಾರ್ಯ, ಮನೋಹರ್, ನಂದ ಕುಮಾರ್, ದೇವಿಪ್ರಸಾದ್, ನಾಗರಾಜ್, ವಿದ್ಯಾಧರ್ ಸಹಕರಿಸಿದರು. 29 ಶಿಬಿರ ಗಳಿಂದ ಬಂದ 1,700 ಪಾನಮುಕ್ತರಿಗೆ ಬ್ಯಾಜ್ ನೀಡಿ ಗೌರವಿಸಲಾಯಿತು.
ಬದಲಾವಣೆಗೆ ಅವಕಾಶ
ಪಾನಮುಕ್ತರು ವ್ಯಸನದಿಂದ ಮುಕ್ತಿ ಹೊಂದಲು ದೇಹ, ಮನಸ್ಸು, ಬುದ್ಧಿ, ಇಂದ್ರಿಯಗಳ ಹತೋಟಿ ಬಹಳ ಮುಖ್ಯವಾಗಿದೆ. ಮದ್ಯವರ್ಜನ ಶಿಬಿರಗಳ ಮೂಲಕ ಬದುಕು ಬದಲಾವಣೆಗೆ ಅವಕಾಶ ಮಾಡಿಕೊಟ್ಟದ್ದನ್ನು ಶಾಶ್ವತವಾಗಿ ಉಳಿಸಬೇಕು.
– ಡಾ| ಡಿ. ವೀರೇಂದ್ರ ಹೆಗ್ಗಡೆ