ಫಾರ್ಮಾಸ್ಯುಟಿಕಲ್ಸ್ ಕ್ಷೇತ್ರದಲ್ಲಿ ಔಷದ ತಯಾರಿಕಾ ತಜ್ಞರ ತಂಡ ಕೂಡ ಕೊರಾನಾ ವಾರಿಯರ್. ಔಷಧ ಉತ್ಪಾದನೆ ಮತ್ತು ಪೂರೈಕೆಯಲ್ಲಿ, ಚೂರೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.
ಕೊರೊನಾದಿಂದ ಜನರ ಆರೋಗ್ಯ ಕಾಪಾಡುವ ಸದಾಶಯದಿಂದ ವೈದ್ಯಕೀಯ ಸಿಬ್ಬಂದಿ, ಪೊಲೀಸ್, ಪ್ಯಾರಾ ಮೆಡಿಕಲ್ ಹಾಗೂ ಆರೋಗ್ಯ ಕಾರ್ಯಕರ್ತರು, ಹಗಲಿರುಳು ದುಡಿಯುತ್ತಿದ್ದಾರೆ. ಈ ಎಲ್ಲರಂತೆಯೇ ಕೊರೊನಾ ವಿರುದ ಹೋರಾಟದಲ್ಲಿ ತೊಡಗಿರುವ ಮತ್ತೂಂದು ವರ್ಗವೆಂದರೆ- ಫಾರ್ಮಾಸ್ಯುಟಿಕಲ್ಸ್ಗಳಲ್ಲಿ ಕೆಲಸ ಮಾಡುವ ಔಷದ ತಯಾರಿಕಾ ತಜ್ಞರ ತಂಡ.
ಕೊರೊನಾ ತಡೆಯಲು ಅಗತ್ಯವಿರುವ ಬಗೆಬಗೆಯ ಔಷಧಗಳ ಉತ್ಪಾದನೆ ಮತ್ತು ಪೂರೈಕೆಯಲ್ಲಿ, ಚೂರೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿರುವ ಜನ ಅವರು. ಎಲೆಮರೆಯಲ್ಲೇ ಕೋವಿಡ್ ವಾರಿಯರ್ಸ್ ಆಗಿದ್ದಾರೆ. ರಕ್ತದೊತ್ತಡ, ಸಕ್ಕರೆ ಖಾಯಿಲೆಯಂತಹ ಸಮಸ್ಯೆ ಇರುವವರಿಗೆ, ದಿನನಿತ್ಯ ಔಷಧಿ ಬೇಕೇ ಬೇಕು. ಇದರ ಜೊತೆಗೆ, ಹವಾಮಾನದ ಬದಲಾವಣೆಗೆ ತಕ್ಕಂತೆ ಕಾಡುವ ಶೀತ, ಜ್ವರ, ಕೆಮ್ಮು, ನೆಗಡಿಯಂಥ ಆರೋಗ್ಯ ಸಮಸ್ಯೆಗಳಿಂದ ಬಳಲುವವರಿಗೆ ನಿರಂತರವಾಗಿ ಔಷಧ ಸರಬರಾಜು ಆಗುತ್ತಲೇ ಇರಬೇಕು.
ಲಾಕ್‌ಡೌನ್ ಇದೆಯೆಂದು ಫಾರ್ಮಾಸ್ಯುಟಿಕಲ್ಸ್ಗಳು ಬಾಗಿಲು ಹಾಕಿದರೆ, ಔಷಧಿಯ ಉತ್ಪಾದನೆ ಸ್ಥಗಿತವಾಗಿ, ಸಾವಿರಾರು ಜನರ ಆರೋಗ್ಯದಲ್ಲಿ ಏರುಪೇರಾಗುವುದು ನಿಶ್ಚಿತ. ಹಾಗಾಗಿ, ಫಾರ್ಮಾಸ್ಯುಟಿಕಲ್ಸ್ಗಳು ನಿರಂತರವಾಗಿ ಕಾರ್ಯನಿರ್ವಹಿಸುವುದು ಅನಿವಾರ್ಯವಾಗಿದೆ. ಕೆಲಸ ಮಾಡುವ ಸಿಬ್ಬಂದಿ ಹೊರಗೆ ಓಡಾಡಿದರೆ, ಸೊಂಕು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಕೆಲವು ಕಂಪನಿಗಳು, ಸಿಬ್ಬಂದಿಗೆ ಊಟ- ವಸತಿಯ ಸೌಲಭ್ಯ ಒದಗಿಸಿ, ಅವರನ್ನು ತಮ್ಮಲ್ಲಿಯೇ ಉಳಿಸಿಕೊಂಡಿವೆ.
ಔಷಧ ವಸ್ತುಗಳ ಕೊರತೆ ಕಾಡದಿರಲಿ ಎಂಬ ಉದ್ದೇಶದಿಂದ ಕೆಲಸ ಮಾಡುತ್ತಿರುವುದು ಹೆಮ್ಮೆಯೆನಿಸುತ್ತದೆ, ಎಂದು ಮೈಕ್ರೋ ಲ್ಯಾಬ್ಸ್ನ ಗುಣಮಟ್ಟ ಖಾತ್ರಿ ವಿಭಾಗದ ಮುಖ್ಯಸ್ಥೆ, ಶ್ರೀಮತಿ ವಿಜಯಾ ಭಟ್ ಹೇಳುತ್ತಾರೆ. ಬದುಕನ್ನು ಪಣಕ್ಕಿಟ್ಟು ದುಡಿಯಲು ನಿಂತಿರುವ, ಫಾರ್ಮಾಸ್ಯುಟಿಕಲ್ಸ್ ವಿಭಾಗದ ಸಿಬ್ಬಂದಿ ಕೂಡ ಕೊರೊನಾ ವಾರಿಯರ್‌ಗಳೇ. ಅವರಿಗೆ ನಾಡಿನ ಎಲ್ಲರ ಅಭಿನಂದನೆಗಳು ಸಲ್ಲಬೇಕು ಎನ್ನುತ್ತಾರೆ, ಮ್ಯಾಟ್‌ಕ್ಸಿನ್ ಲ್ಯಾಬ್ಸ್ನ ನಿರ್ದೇಶಕರಾದ ಡಾ. ಶಂಕರ್ ಕೂಮಾರ್ ಮಿತ್ರ.
* ಪ್ರಕಾಶ್.ಕೆ. ನಾಡಿಗ್, ತುಮಕೂರು