Advertisement
ಪೇಟೆಯಲ್ಲಿ ಗೃಹಿಣಿಯಾಗಿ ಜೀವನ ನಿರ್ವಹಿಸುವ ಗೆಳತಿಯೊಬ್ಬಳಿಗೆ ಯಾವೊತ್ತೂ ತಲೆನೋವು ಅಂತ ಗೋಗೆರೆಯುತ್ತಲೇ ಇರುತ್ತಾಳೆ. ನನಗೆ ಗೊತ್ತಿರುವ ಮನೆಮದ್ದಿನ ಪಟ್ಟಿಯನ್ನೆಲ್ಲ ಅವಳ ಮುಂದೆ ಬಿಚ್ಚಿಡುತ್ತ ಸಣ್ಣ ಮಟ್ಟಿನ ವೈದ್ಯೆಯೇ ಆಗಿದ್ದೆ. ಕೊನೆಗೊಮ್ಮೆ ಅವಳ ಒಡಲೊಳಗಿನ ಸಂಕಟಗಳನ್ನೆಲ್ಲ ಕಕ್ಕಿಕೊಂಡಾಗ ತಲೆನೋವಿನ ಅಸಲಿ ಕಾರಣ ತೆರೆದುಕೊಂಡದ್ದು. ಎಳವೆಯಲ್ಲಿ ಪ್ರಾಥಮಿಕ ಶಾಲೆಯ ವಿಜ್ಞಾನ ಟೀಚರು ನಮ್ಮೊಂದಿಗೆ ನೀರು ತರಲು ಹೇಳಿ ತಲೆನೋವೆಂದು ಮಾತ್ರೆ ನುಂಗಿ ಪಾಠ ಶುರು ಮಾಡುತ್ತಿದ್ದರು. ಈ ಘಟನೆಯ ಹಿಂದಿನ ಕತೆಯಲ್ಲಿ ಇಂತಹುದೇ ಕಾರಣ ಇದ್ದಿರಬೇಕು ಅಂತ ಈಗ ನನಗೆ ಅನ್ನಿಸುತ್ತಿದೆ.
Related Articles
Advertisement
ನಡುರಾತ್ರಿಯಲ್ಲಿ ಇವತ್ತಿಗೂ ನಮ್ಮ ಹೆಣ್ಮಕ್ಕಳನ್ನು ಮನೆಯಿಂದ ಹೊರಗೆ ದಬ್ಬಿ ಬಿಡುವ ಪ್ರಸಂಗಗಳು ಬರುತ್ತವೆ ಎಂದಾದರೆ ಸಮಾನತೆ ಅಂತ ಕೂಗುವ ಘೋಷಣೆಗೂ, ಮಹಿಳಾ ದಿನಾಚರಣೆಯೆಂಬ ಒಂದು ದಿನದ ಪ್ರಹಸನಕ್ಕೂ ಎಷ್ಟು ಅರ್ಥ ಒದಗಿ ಬರಬಲ್ಲದು ಅಂತ ವಿಷಾದವೆನ್ನಿಸುತ್ತದೆ. ಈ ಘಟನೆಗಳ ಹಿಂದಿನ ಕಾರಣದ “ಸರಿ-ತಪ್ಪು’ಗಳ ತುಲನೆ ನಂತರದ್ದು. ಆದರೆ, ಮನೆಯೊಳಗೆ ಸಮಸ್ಯೆಗಳು, ಬಿನ್ನಾಭಿಪ್ರಾಯಗಳು ಎದುರಾದಾಗ ಬೀದಿಗೆ ಬೀಳುವ ಸರದಿ ಹೆಣ್ಣು ಮಕ್ಕಳದ್ದೇ ಆಗುತ್ತದೆ ಅಂತಾದರೆ ಇದು ಹೆಣ್ಣು ಜೀವಗಳ ಅಸಹಾಯಕ ಸ್ಥಿತಿ ಆಗಿರಬಹುದು, ಆಕೆಯ ಕುರಿತು ಅವರಿವರು ನಡೆದುಕೊಳ್ಳುವ ರೀತಿಯಾಗಿರಬಹುದು, ಎಲ್ಲವೂ ಭಯ ಹುಟ್ಟಿಸುವಂಥದ್ದು. ಇದು ಒಂದು ಉದಾಹರಣೆಯಷ್ಟೆ. ಇಂತಹ ಹಲವು ಕತೆಗಳು ಹಲವು ಬಗೆಯಲ್ಲಿ ಇರಬಹುದು. ಹೇಗೆ ಹೆಣ್ಣುಮಕ್ಕಳನ್ನು ಸುಲಭವಾಗಿ ಬೀದಿ ಪಾಲು ಮಾಡಿ ಬಿಡುತ್ತಾರೆ ಅಥವಾ ನಾವುಗಳು ಎಲ್ಲಿ ಬೀದಿ ಪಾಲಾಗಿ ಬಿಡಬಹುದೋ ಅನ್ನೋ ಆತಂಕದಲ್ಲಿಯೇ ಜೀವ ಸವೆಸಬೇಕಾದ ಅನಿವಾರ್ಯತೆ ಇರುವುದು ನಿಜಕ್ಕೂ ದಿಗಿಲು ಹುಟ್ಟಿಸುವ ಸಂಗತಿ.
ಈಗ ಜಗತ್ತು ಮುಂದುವರೆದಿದೆ. ಹೆಣ್ಣಿನ ಸ್ಥಾನಮಾನಗಳು ಬದಲಾಗಿವೆ. ಆದರೆ ಅವಳ ಸಾಧನೆಯ ಹಿಂದೆ ನೋವು, ಸಂಘರ್ಷ, ಅಪಮಾನಗಳಿವೆ. ಇವುಗಳನ್ನು ಎದುರಿಸಿದ ಮೇಲಷ್ಟೇ ಆಕೆಗೆ ದಿಟ್ಟೆಯ ಪಟ್ಟ. ತನ್ನ ಆಸಕ್ತಿಯ ಕ್ಷೇತ್ರಗಳಲ್ಲಿ ಮುಂದುವರಿಯಲು ಆಕೆಗೆ ಅನುಮತಿ ಸಿಗದೇ ಇರುವ ಸಂದರ್ಭದಲ್ಲಿ ಉದ್ಯೋಗದಲ್ಲಿರುವ ಹೆಣ್ಣೊಬ್ಬಳು ತನ್ನ ಮಗಳನ್ನು ತನ್ನ ಆಸಕ್ತಿಯ ತರಗತಿಗಳಿಗೆ ಕಳುಹಿಸುತ್ತ ಅವಳೊಂದಿಗೆ ತಾನೂ ಕದ್ದು ಮುಚ್ಚಿ ಅಭ್ಯಾಸ ಮಾಡಿ ಪರೀಕ್ಷೆ ಬರೆದು ತನ್ನ ಕನಸನ್ನು ಈಡೇರಿಸಿಕೊಂಡೆ ಅಂತ ಆತ್ಮವಿಶ್ವಾಸದಿಂದ ಹೇಳುವಾಗ ಆಕೆಯ ಕಣ್ಣಿನ ಆಳದಲ್ಲಿ ನೋವು ಕೆನೆಗಟ್ಟಿ ನಿಂತಂತಿತ್ತು.
ಹೆಚ್ಚಿನ ರೈತಾಪಿ ಹೆಣ್ಮಕ್ಕಳು ಬೆವರಿಳಿಸಿ ದುಡಿಯುವ ವರ್ಗವೇ. ಅತಂತ್ರ ಸ್ಥಿತಿಯಲ್ಲಿರುವ ಕೃಷಿಯಲ್ಲಿ ಲಾಭಾಂಶ ಕಡಿಮೆ ಆಗಿರುವ ಕಾರಣ ಮನೆ ಕೆಲಸಗಳನ್ನೆಲ್ಲ ಪೂರೈಸಿ ಕೃಷಿ ಕೆಲಸಗಳಲ್ಲೂ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಆಕೆಗೆ ಇದೆ. ಹಳ್ಳಿ ವಾತಾವರಣದಲ್ಲಿ ಹೀಗೆ ತಮ್ಮ ಆಸಕ್ತಿಗಳಲ್ಲಿ ತೊಡಗಿಸಿಕೊಂಡರೆ ಅವರನ್ನು ಮೂರ್ಖರೆಂದೇ ಪರಿಗಣಿಸಿ ಬಿಡುತ್ತಾರೆ. ಮಾಡಲು ಕೈತುಂಬಾ ಕೆಲಸ ಇರುವಾಗ ಇವುಗಳೆಲ್ಲ ಕೆಲಸವಿಲ್ಲದವರ ಕಾಯಕ ಅಂಥ ಹೆಚ್ಚಿನವರ ಅಂಬೋಣ. ಇಂತಹ ಹೊತ್ತಿನಲ್ಲಿ ನಿರಂತರ ಕೆಲಸದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಅದನ್ನು ಪೂರ್ತಿ ಮುಗಿಸಿದ ಮೇಲೆಯೇ ಅವರಿಗದು ಬಿಡುಗಡೆ. ಒಂದಷ್ಟು ಹೊತ್ತು ಕಾಲು ಚಾಚಿ ಕುಳಿತ ಸಮಯದಲ್ಲಿ ಆಚೆ ಕಡೆಯಿಂದ ಫೋನು ಬಂದರೆ ಒಂದಷ್ಟು ಲಗುಬಗೆಯಲ್ಲಿ ಮಾತು ಮುಗಿಸಿದರೆ ಉಳಿದಂತೆ ಟಿ. ವಿ. ಸೀರಿಯಲ್ ನೋಡುವಾಗಲೂ, ಬೀನ್ಸ್ ಮುರಿಯುತ್ತಲೋ, ಕಾಳುಮೆಣಸು ಬಿಡಿಸುತ್ತಲೋ ಯಾವುದೋ ಕೆಲಸವನ್ನು ಹಚ್ಚಿಕೊಂಡಿರುತ್ತದೆ.
ಸ್ಮಿತಾ ಅಮೃತರಾಜ್