ಹುಬ್ಬಳ್ಳಿ: ಪೊಲೀಸರು ಸಾಮಾಜಿಕ ಅನಿಷ್ಟಗಳಾದ ಮಟ್ಕಾ, ಜೂಜು, ವೇಶ್ಯಾವಾಟಿಕೆ, ಕಳ್ಳತನ, ಮೋಸ, ವಂಚನೆ ಸೇರಿದಂತೆ ಅಕ್ರಮ ಚಟುವಟಿಕೆಗಳ ನಿರ್ಮೂಲನೆಗೆ ಕಂಕಣಬದ್ಧರಾಗಬೇಕೆಂದು ಹು-ಧಾ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಹೇಳಿದರು.
ಕಾರವಾರ ರಸ್ತೆ ಹಳೆಯ ಸಿಎಆರ್ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹು-ಧಾ ಪೊಲೀಸ್ ಕಮೀಷನರೇಟ್‌ನ ಸಿಬ್ಬಂದಿ ಪದೋನ್ನತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಶೇ. 99ರಷ್ಟು ಜನ ಒಳ್ಳೆಯವರಾಗಿದ್ದಾರೆ.
ಆದರೆ ಶೇ. 1ರಷ್ಟು ಕೆಟ್ಟ ಅಂಶಗಳನ್ನು ಹೊಂದಿರುವ ಜನರಿಗೆ ಪೊಲೀಸರ ಭಯವಿರಬೇಕು. ಆ ನಿಟ್ಟಿನಲ್ಲಿ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆ ಜವಾಬ್ದಾರಿಯನ್ನು ಸರಕಾರ ನಮಗೆ ನೀಡಿದೆ. ಪದೋನ್ನತಿ ಪಡೆದ ಮೇಲೆ ಪೊಲೀಸರ ಜವಾಬ್ದಾರಿ ಹೆಚ್ಚುತ್ತದೆ.
ಉತ್ತಮ ಕಾರ್ಯನಿರ್ವಹಿಸುವ ಮೂಲಕ ಸಮಾಜಕ್ಕೆ ಆಸ್ತಿ ಆಗಬೇಕು ಎಂದರು. ಪೊಲೀಸರ ಯಾವುದೇ ದೂರುಗಳಿದ್ದರೂ ನೇರವಾಗಿ ಮೇಲಧಿಕಾರಿಗಳನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬೇಕು. ಅವಳಿ ನಗರದ ಪೊಲೀಸ್ ಕಮೀಷನರೇಟ್‌ನಲ್ಲಿ ಮೊದಲ ಬಾರಿ ಪದೋನ್ನತಿ ಹೊಂದಿದ ಸಿಬ್ಬಂದಿಯನ್ನು ಅವರ ಕುಟುಂಬದ ಸಮ್ಮುಖದಲ್ಲಿ ಸನ್ಮಾನಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಮುಖ್ಯಪೇದೆಯಿಂದ ಎಎಸ್‌ಐ ಆಗಿ ಹಾಗೂ ಪೇದೆಯಿಂದ ಮುಖ್ಯಪೇದೆಯಾಗಿ ಪದೋನ್ನತಿ ಪಡೆದ 66 ಸಿಬ್ಬಂದಿಯನ್ನು ಸನ್ಮಾನಿಸಿದರು. ಗೃಹರಕ್ಷಕ ದಳದ ಪ್ಲಟೂನ್ ಕಮಾಂಡರ್ ಕೃಷ್ಣಾ ಬ್ಯಾಡಗಿ ಮತ್ತು ತಂಡಕ್ಕೆ ನಗದು ಬಹುಮಾನ ನೀಡಲಾಯಿತು.
ನಂತರ ಪದೋನ್ನತಿ ಕವಾಯತು ನಡೆಯಿತು. ಡಿಸಿಪಿ ಎಸ್.ಬಿ. ನೇಮಗೌಡ, ಎಸಿಪಿಗಳಾದ ದಾವೂದಖಾನ್, ಎನ್.ಬಿ. ಸಕ್ರಿ ಹಾಗೂ ವಿವಿಧ ಠಾಣೆ ಇನ್‌ಸ್ಪೆಕ್ಟರ್, ಪಿಎಸ್‌ಐಗಳು ಇದ್ದರು. ಮಾರುತಿ ಗುಳ್ಳಾರಿ ನಿರೂಪಿಸಿದರು.