Advertisement

ಪ್ರಜಾತಂತ್ರದ ನರ್ತನದ ಹಿಂದೆ ಮುಂದೆ

12:30 AM Mar 13, 2019 | |

ನಮ್ಮ ಸಂಸದರು ಸಂಸತ್ತಿನಲ್ಲಿ ಎಂಥ ಕಾರ್ಯನಿರ್ವಹಣೆ ತೋರಿದ್ದಾರೆ ಎಂಬುದನ್ನು ಹೇಳಲು ಕಷ್ಟ, ಯಾಕೆಂದರೆ ಸಂಸತ್ತಿನ ಸಮಯವು ವಿವಿಧ ಕಾರಣಗಳ ಗಲಾಟೆಯಿಂದಾಗಿ ಪೋಲಾಗುತ್ತಿದೆ. ಎರಡೂ ಸದನಗಳ ಅಮೂಲ್ಯ ಸಮಯವು ರಾಜಕೀಯ ಆರೋಪ – ಪ್ರತ್ಯಾರೋಪಗಳಿಗೆ ಬಳಕೆಯಾಗುವಷ್ಟು ನಿಜವಾದ ವಿಷಯಗಳ ಚರ್ಚೆಗೆ ವಿನಿಯೋಗವಾಗುವುದಿಲ್ಲ. 

Advertisement

ಏಪ್ರಿಲ್‌ 11ರಿಂದ ಸುಮಾರು 38 ದಿನಗಳ ಕಾಲ ದೇಶದ ಮತದಾರರು ಪ್ರಜಾಪ್ರಭುತ್ವದ ನಿರಂಕುಶತೆಯನ್ನು ಅಸಹಾಯಕರಾಗಿ ನೋಡಬೇಕು. ಮತದಾರ ಪಟ್ಟಿಯಲ್ಲಿ ಹೆಸರಿದ್ದರೆ ಮತ ಚಲಾಯಿಸಿ ದೇಶದ 17ನೇ ಲೋಕಸಭೆಯನ್ನು ಚುನಾಯಿಸುವುದಷ್ಟೇ ಅವರಿಗಿರುವ ಸ್ವಾತಂತ್ರ್ಯ. 

ದೇಶದ ಸರಾಸರಿ ಮತದಾರರ ಪಾತ್ರವು “ತಮ್ಮ ಹಕ್ಕು ಚಲಾಯಿಸುವುದು’, ಚುನಾವಣ ವಿಷಯಗಳಿಗೆ ಸಂಬಂಧಿಸಿದ ಚರ್ಚೆ ಅಥವಾ ಟೀವಿ ಚಾನೆಲ್‌ಗ‌ಳಲ್ಲಿ ಪ್ರಸಾರವಾಗುವ ಕೆಲವು ಸ್ವಯಂ ಘೋಷಿತ ಚುನಾವಣಾ ತಜ್ಞರ ಕಾರ್ಯಕ್ರಮ ವೀಕ್ಷಿಸುವುದು ಅಥವಾ ರಾಜಕೀಯ ಪಕ್ಷಗಳು ನಡೆಸುವ ಸಭೆಗಳಲ್ಲಿ ಭಾಗವಹಿಸುವುದಕ್ಕೆ ಮಾತ್ರ ಸೀಮಿತವಾಗಿರುತ್ತದೆ. ರಾಜಕೀಯ ಪಕ್ಷಗಳ ಸಭೆಗಳಲ್ಲಿ ಭಾಗವಹಿಸುವ ಮತದಾರರ ಸಮೂಹವು ರಾಜಕಾರಣಿಗಳ ಮಾತುಗಳನ್ನು ಆಲಿಸಬೇಕೇ ಹೊರತು ಭಾಷಣ ಮಾಡುವ ವ್ಯಕ್ತಿಯನ್ನು ಪ್ರಶ್ನಿಸುವ ಅವಕಾಶ ಹೊಂದಿರುವುದಿಲ್ಲ. 

ಅಪಾರ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿರುವ ಹಾಗೂ ವಿಸ್ತಾರವಾದ ಲೋಕಸಭಾ ಕ್ಷೇತ್ರವನ್ನು ಹೊಂದಿರುವ ನಮ್ಮಲ್ಲಿ ಜನರು ಯಾವುದೇ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ತಮ್ಮ ಅಭಿಪ್ರಾಯ ತಿಳಿಸುವ ಹಕ್ಕು ಹೊಂದಿಲ್ಲ. ಪಕ್ಷೇತರರಿಗೆ ಸ್ಪರ್ಧಿಸುವ ಅವಕಾಶ ಜನಸಾಮಾನ್ಯರಿಗೆ ಇದ್ದರೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಅಬ್ಬರದ ಎದುರು ಅವರು ಗೆದ್ದು ಬರುವ ಸಾಧ್ಯತೆ ಬಹಳ ಕಡಿಮೆ. ನಮ್ಮಲ್ಲಿ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ನಮ್ಮ ಮೇಲೆ ಹೇರುತ್ತವೆ ಎಂದರೂ ತಪ್ಪಾಗಲಾರದು. 

ಜೆಡಿಎಸ್‌ ಕುಟುಂಬ ರಾಜಕೀಯ
ಮಂಡ್ಯ ಮತ್ತು ಹಾಸನದಿಂದ ಜೆಡಿಎಸ್‌ ಮುಖ್ಯಸ್ಥರ ಕುಟುಂಬ ಸದಸ್ಯರು (ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖೀಲ್‌ ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್‌. ಡಿ. ರೇವಣ್ಣ ಪುತ್ರ ಪ್ರಜ್ವಲ್‌ ರೇವಣ್ಣ) ಕಣಕ್ಕಿಳಿಯುವುದು ಖಚಿತವಾಗಿರುವುದರಿಂದ ಕುಟುಂಬ ರಾಜಕೀಯ ವಿಷಯವು ಈಗ ರಾಜ್ಯದಲ್ಲಿ ಹೆಚ್ಚು ಪ್ರಸ್ತುತವಾದಂತಿದೆ. ಇವರಿಬ್ಬರು ಆಡಳಿತ ಪ್ರಮುಖರ ಪುತ್ರರು ಹಾಗೂ ದೇವೇಗೌಡರ ಮೊಮ್ಮಕ್ಕಳು ಎಂಬುದು ಬಿಟ್ಟರೆ ಇವರ ಯೋಗ್ಯತೆ, ನಾಯಕತ್ವದ ಗುಣಗಳು, ರಾಜ್ಯಕ್ಕೆ ಸಲ್ಲಿಸಿದ ಸೇವೆ ಮತ್ತು ತ್ಯಾಗಗಳೇನು ಎಂಬ ಪ್ರಶ್ನೆ ಮೂಡದಿರುವುದಿಲ್ಲ. ಭಾರತದ ಮಾತ್ರವೇಕೆ ಅಮೆರಿಕ ದಲ್ಲೂ ವಂಶ ಪಾರಂಪರ್ಯ ರಾಜಕೀಯ ಪದ್ಧತಿ ಇದೆ ಎಂದೇನೂ ವಾದಿಸಬಹುದು. ನಮ್ಮ ವಿಧಾನಸಭೆಯಲ್ಲಿ ದೇವೇಗೌಡ ಕುಟುಂಬದ ಕೆಲವು ಸದಸ್ಯರಿದ್ದು, ಲೋಕಸಭೆಯಲ್ಲಿ ಯಾಕಿರಬಾರದು ಎಂದೂ ಕೇಳಬಹುದು. ಆದರೆ ಯುವಕರಾಗಿರುವ ನಿಖೀಲ್‌ ಮತ್ತು ಪ್ರಜ್ವಲ್‌ ಅವರು ಸಂಸತ್ತು ಪ್ರವೇಶಿಸಲು ಇನ್ನೂ ಸ್ವಲ್ಪ ಸಮಯ ಕಾಯಬಹುದಿತ್ತು. 

Advertisement

ನಿಖೀಲ್‌ ಕುಮಾರಸ್ವಾಮಿ ಅವರು ಮಂಡ್ಯದಿಂದ ಕಣಕ್ಕಿಳಿ ಯಲು ನಿರ್ಧರಿಸಿದ್ದು, ಇಲ್ಲಿನ ಮತದಾರರು ಈಗ ಈ ನಿರ್ಧಾರದ ಪರ ಮತ್ತು ವಿರುದ್ಧ ಗುಂಪುಗಳಲ್ಲಿ ಹಂಚಿ ಹೋಗಿದ್ದಾರೆ. ಇದೇ ರೀತಿ ಕಾಂಗ್ರೆಸ್‌ ಪಕ್ಷದ ಸಂಭವನೀಯ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರ ಯೋಗ್ಯತೆ, ಮಂಡ್ಯ ಮತ್ತು ಕರ್ನಾಟಕಕ್ಕೆ ಅವರ ಸೇವೆ ಮತ್ತು ತ್ಯಾಗದ ಬಗ್ಗೆಯೂ ಪ್ರಶ್ನೆಗಳನ್ನೆತ್ತಬಹುದು. ಕಾಂಗ್ರೆಸ್‌ ಟಿಕೆಟ್‌ ನೀಡದೆ ಇದ್ದರೆ ಪಕ್ಷೇತರಳಾಗಿ ಕಣಕ್ಕಿಳಿಯುವ ಬೆದರಿಕೆಯನ್ನೂ ಅವರು ಒಡ್ಡಿದ್ದಾರೆ. ಸುಮಲತಾ ಸ್ವತಂತ್ರ ಅಭ್ಯರ್ಥಿಯಾದರೆ ಬಿಜೆಪಿಯೂ ಅವರಿಗೆ ಬೆಂಬಲ ಘೋಷಿಸುವ ಸಾಧ್ಯತೆಯಿದೆ. ಜತೆಗೆ ಬಿಜೆಪಿಯು ಈ ಪ್ರತಿಷ್ಠಿತ ಕ್ಷೇತ್ರದಲ್ಲಿರುವ ತನ್ನ ಸಾಂಪ್ರದಾಯಿಕ ಮತ್ತು ಜಾತಿ ಕೇಂದ್ರಿತ ಮತಗಳನ್ನು ಸೆಳೆಯಲು ಸಿದ್ಧತೆ ಮಾಡುತ್ತಿದೆ. ಸುಮಲತಾ ಅವರ ಪತಿ ಅಂಬರೀಷ್‌ ಜನಪ್ರಿಯತೆಗೆ ಅವರ ಸಿನಿಮಾ ಕ್ಷೇತ್ರದ ಸಾಧನೆಯೇ ಕಾರಣ. ಅಲ್ಲದೆ ಅವರೊಬ್ಬ ವಿಭಿನ್ನ ರಾಜಕಾರಣಿ ಹಾಗೂ ಸಚಿವರಾಗಿದ್ದರು. ಹಾಗಿದ್ದರೂ ಸುಮಲತಾರಿಗೆ ಒಳಿತೇ ಆಗಬೇಕೆಂದೇನಿಲ್ಲ. ಸುಮಲತಾ ಅವರು ಮಂಡ್ಯದ ಒಕ್ಕಲಿಗರಲ್ಲ, ಅವರು ಹೇಗೆ ಕಣಕ್ಕಿಳಿಯಬಹುದು ಎಂದು ಸ್ಥಳೀಯ ರಾಜಕಾರಣಿಯೊಬ್ಬರು ಪ್ರಶ್ನಿಸಿದ್ದಾರೆ ಎಂಬುದನ್ನು ನಾನು ಕೂಡ ಕೇಳಿದ್ದೆ. ಮಂಡ್ಯದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಕೂಟದ ಅಭ್ಯರ್ಥಿಯು ಬಿಜೆಪಿ ಅಥವಾ ಎನ್‌ಡಿಎ ಅಭ್ಯರ್ಥಿ ಎದುರು ಸೋತರೆ ಅದು ರಾಜ್ಯದ ಮೈತ್ರಿ ಸರಕಾರವನ್ನು ಉರುಳಿಸುವ ಅಪಾಯವೂ ಇದೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯು ಪ್ರತ್ಯೇಕ ವಿಷಯಗಳನ್ನು ಆಧರಿಸಿಕೊಂಡಿರುತ್ತದೆ ಮತ್ತು ಅಭ್ಯರ್ಥಿಗಳ ಆಯ್ಕೆಯು ಅದೇ ರೀತಿಯಲ್ಲಿರುತ್ತದೆ. ಪ್ರತಿಷ್ಠೆ, ಬುದ್ಧಿವಂತಿಕೆ ಅಥವಾ ಶೈಕ್ಷಣಿಕ ಸಾಧನೆ, ಸಂಸದೀಯ ಮತ್ತು ಆಡಳಿತ ಕೌಶಲ ಮತ್ತು ಸಾಮರ್ಥ್ಯ, ಸಾರ್ವಜನಿಕ ಸೇವೆ ಅಥವಾ ಜನಪ್ರಿಯ ಚಳವಳಿಗಳಲ್ಲಿ ಭಾಗಿಯಾಗಿರುವುದು ಮುಂತಾದವು ಅಭ್ಯರ್ಥಿ ಗಳ ಆಯ್ಕೆಯಲ್ಲಿ ಅಪ್ರಸ್ತುತ ಎಂದು ಹೇಳಬಹುದು. ಜಾತಿ, ಸಮು ದಾಯ, ಹಣ ಅಥವಾ ತೋಳ್ಬಲ ಮುಂತಾದವುಗಳನ್ನು ಗಮನಿಸಿ “ಗೆಲ್ಲುವ ಸಾಮರ್ಥ್ಯ’ದ ಮಾನದಂಡವನ್ನೇ ಮುಖ್ಯವಾಗಿರಿಸಿಕೊಂಡು ಲೋಕಸಭೆಗೂ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ. ಈ ರೀತಿಯ ಕೆಲವು ಸದಸ್ಯರು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ನಮಗೆ ಕಾಣಸಿಗುತ್ತಾರೆ. ಮುಂದಿನ ಸರಕಾರ ರಚನೆ ಸ್ಪರ್ಧೆಯಲ್ಲಿ ಸದಸ್ಯರ ಸಂಖ್ಯೆಗಷ್ಟೆ ಪಕ್ಷಗಳು ಗಮನ ಹರಿಸುತ್ತಿವೆಯೇ ಹೊರತು ಸದಸ್ಯರ ಯೋಗ್ಯತೆಗಲ್ಲ.

ನಮ್ಮ ಸಂಸದರು, ಮುಖ್ಯವಾಗಿ ಕರ್ನಾಟಕದವರು ಸಂಸತ್ತಿನಲ್ಲಿ ಎಂಥ ಕಾರ್ಯನಿರ್ವಹಣೆ ತೋರಿದ್ದಾರೆ ಎಂಬು ದನ್ನು ಹೇಳಲು ಕಷ್ಟ, ಯಾಕೆಂದರೆ ಸಂಸತ್ತಿನ ಸಮಯವು ವಿವಿಧ ಕಾರಣಗಳ ಗಲಾಟೆಯಿಂದಾಗಿ ಪೋಲಾಗುತ್ತಿದೆ. ಎರಡೂ ಸದನಗಳ ಅಮೂಲ್ಯ ಸಮಯವು ರಾಜಕೀಯ ಆರೋಪ – ಪ್ರತ್ಯಾರೋಪಗಳಿಗೆ ಬಳಕೆಯಾಗುವಷ್ಟು ನಿಜವಾದ ವಿಷಯಗಳ ಚರ್ಚೆಗೆ ವಿನಿಯೋಗವಾಗುವುದಿಲ್ಲ. ಆದ್ದರಿಂದ 17ನೇ ಲೋಕ ಸಭೆಯಲ್ಲಿ ಮತ್ತು ಮುಂದಿನ ದಿನಗಳಲ್ಲಿ ಗಲಾಟೆ ಕಡಿಮೆ ಮಾಡಿ ದೇಶದ ಸಮಸ್ಯೆ ಹಾಗೂ ಹಿತಕ್ಕಾಗಿ ಗಂಭೀರ ಚರ್ಚೆಯಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳುವ ಬದ್ಧತೆಗೆ ನಮ್ಮ ರಾಜಕೀಯ ಪಕ್ಷಗಳು ಬರಬೇಕಾಗಿವೆ. 

ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿಯಲ್ಲಿ ಕಾಂಗ್ರೆಸ್‌ ಸದಸ್ಯರು ಆಗಿನ ರಕ್ಷಣಾ ಸಚಿವ ಜಾರ್ಜ್‌ ಫೆರ್ನಾಂಡಿಸ್‌ರನ್ನು ಬಹಿಷ್ಕರಿಸುವ ಒಂದು ಹೊಸ ರೀತಿಯ ಪ್ರತಿಭಟನೆಯ ಮೂಲಕ ಸಂಸತ್ತಿನಲ್ಲಿ ನಡೆಯುವ ಪ್ರತಿಭಟನೆಗಳ ಗುಣಮಟ್ಟವನ್ನು ಇನ್ನಷ್ಟು ಕೆಳಗಿಳಿಸಿದ್ದರು. ದೂರದರ್ಶನದಲ್ಲಿ ಪ್ರಸಾರವಾಗುವ ಸಂಸತ್ತಿನ ಪ್ರಶ್ನೋತ್ತರ ಅವಧಿಯ ನೇರ ಪ್ರಸಾರವನ್ನು ವೀಕ್ಷಿಸದೆ ಜನರೂ ತಪ್ಪು ಮಾಡುತ್ತಿದ್ದಾರೆ. ವೀಕ್ಷಿಸಿದರೆ ನಾವು ಎಂಥ ಸಂಸದರನ್ನು ಆರಿಸಿ ಕಳುಹಿಸಿದ್ದೇವೆ ಎಂಬ ಸತ್ಯದರ್ಶನವಾಗುತ್ತದೆ. ಜತೆಗೆ ಇಂಗ್ಲಿಷ್‌ ಪತ್ರಿಕೆಗಳು ಕೂಡ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ನಡೆಯುವ ಪ್ರಮುಖ ವಿಷಯಗಳ ಚರ್ಚೆಗೆ ಕಡಿಮೆ ಆದ್ಯತೆ ನೀಡುವ ಮೂಲಕ ತಪ್ಪು ಮಾಡುತ್ತಿವೆ.

ತುಂಬಾ ದೀರ್ಘ‌ವಾದ ಚುನಾವಣಾ ಅವಧಿ ಈ ಬಾರಿಯ ಚುನಾವಣಾ ಅವಧಿಯನ್ನು ತುಂಬಾ ಉದ್ದ ಮಾಡಿರುವ ಚುನಾವಣಾ ಆಯುಕ್ತರ ಬುದ್ಧಿವಂತಿಕೆಯನ್ನು ಕೆಲವರು ಪ್ರಶ್ನಿಸಲೂಬಹುದು. 2014ರಲ್ಲಿ 9 ಹಂತದಲ್ಲಿ ನಡೆದಿದ್ದ ಮತದಾನಕ್ಕೆ ಹೋಲಿಸಿದರೆ ಈ ಬಾರಿ 2 ಹಂತ ಕಡಿಮೆಯಾಗಿದೆ. ಅದೃಷ್ಟವಶಾತ್‌ ಕರ್ನಾಟಕದಲ್ಲಿ ಕೇವಲ ಎರಡು ಹಂತಗಳ ಮತದಾನ ಮಾತ್ರವಿದ್ದು, ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಉತ್ತಮ ಕಾನೂನು ಸುವ್ಯವಸ್ಥೆ ಹೊಂದಿರುವುದಕ್ಕೆ ಇದು ಸಾಕ್ಷಿಯಾಗಿದೆ. 

ಚುನಾವಣೆ ಸಂದರ್ಭದಲ್ಲಿ ನಡೆಯುವ ಕೆಲವು ದುರದೃಷ್ಟಕರ ಘಟನೆಗಳೂ ಮತದಾನದ ಮೇಲೆ ಪ್ರಭಾವ ಬೀರುತ್ತವೆ. 1991ರಲ್ಲಿ ನಡೆದಿದ್ದ ರಾಜೀವ ಗಾಂಧಿ ಅವರ ಹತ್ಯೆ ಇದಕ್ಕೆ ಒಂದು ಉತ್ತಮ ದೃಷ್ಟಾಂತವಾಗಿದೆ. ಒಂದನೇ ಹಂತದ ಮತದಾನ ನಡೆದ ಬಳಿಕ ರಾಜೀವ ಗಾಂಧಿ ಹತ್ಯೆಯಾಗಿತ್ತು. ಮಾಜಿ ಪ್ರಧಾನಿಯ ದುರಂತ ಸಂಭವಿಸುವ ಮೊದಲು 211 ಕ್ಷೇತ್ರಗಳಲ್ಲಿ ಮತದಾನವಾಗಿತ್ತು. ಆ ಬಾರಿ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಜೆಪಿಯು ಈ ಘಟನೆಯಿಂದ ಕಾಂಗ್ರೆಸ್‌ ಮುಂದೆ ಸೋಲಬೇಕಾಯಿತು. ಆದರೆ ಕಾಂಗ್ರೆಸ್‌ ಕೂಡ ಸ್ಪಷ್ಟ ಬಹುಮತ ಪಡೆಯುವಲ್ಲಿ ವಿಫ‌ಲವಾಗಿತ್ತು. ಈ ಬಾರಿ ಪಾಕಿಸ್ತಾನದ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯು ಚುನಾವಣೆಗೆ ತುಂಬಾ ಮೊದಲೇ ನಡೆದಿದೆ. ಆದರೆ ಪಾಕಿಸ್ತಾನದ ಕಡೆಯಿಂದ ಆಗಬಹುದಾದಂಥ ಮಿಲಿಟರಿ ಕಾರ್ಯಾಚರಣೆ ಹಾಗೂ ಉಗ್ರಗಾಮಿ ಚಟುವಟಿಕೆಗಳನ್ನು ನಿರ್ಲಕ್ಷಿಸಿ ಚುನಾವಣೆಗೆ ಮಾತ್ರ ಗಮನ ಕೇಂದ್ರೀಕರಿಸುವ ಸ್ಥಿತಿ ಭಾರತ ಸರಕಾರದಲ್ಲ. ರಾಜಕಾರಣಿ ಪರಿವರ್ತಿತ ಮಾಜಿ ಕ್ರಿಕೆಟಿಗ, ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ಗೆ “ಭೋಜನ ವಿರಾಮದ ಬಳಿಕ ನೋಡೋಣ’ ಎಂದು ಹೇಳುವ ಸ್ಥಿತಿಯಲ್ಲಿ ನಾವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next