Advertisement

ಬಣ್ಣದ ಆಚರಣೆಯ ಹಿಂದೆಯೂ ಮಾದಕದ ನಂಟು

01:01 AM Mar 07, 2023 | Team Udayavani |

ಉಡುಪಿ: ಯುವಜನರ ರಂಗಿನ ಹಬ್ಬಗಳ ಹಿಂದೆಯೂ ಇರುವ “ಹೊಸರಂಗು’ ಯಾವುದು ಗೊತ್ತೇ?
ಆ “ರಂಗ್‌’ ಡ್ರಗ್ಸ್‌ ಮಾಫಿಯಾದ್ದು. ಡ್ರಗ್ಸ್‌ ಪೆಡ್ಲರ್‌ಗಳು ಬಳಸಿಕೊಳ್ಳುತ್ತಿರುವುದು ಪಾರ್ಟಿಗಳೆಂಬ ಪರಿಕಲ್ಪನೆಯನ್ನು. ಅದು ನಡೆಯುವುದು ಮತ್ತೆ ಕೆಲವು ಪಬ್‌ಗಳ ಅಂಗಳದಲ್ಲಿ. “ಹೋಳಿ’ಯೂ ಅಂಥದೊಂದು ಉದಾಹರಣೆ ಎನ್ನುತ್ತಾರೆ ಬಲ್ಲವರು.

Advertisement

ಹೋಳಿ ಹಬ್ಬ ಭಾರತೀಯ ಸಂಸ್ಕೃತಿಯ ಅತ್ಯಂತ ವಿಶಿಷ್ಟವಾದ ಹಬ್ಬ. ಸಮುದಾಯದ ಹಬ್ಬ. ಬದುಕಿನ ಸಂಭ್ರಮವನ್ನು ಹೆಚ್ಚಿಸಿಕೊಳ್ಳಲು ಆಚರಿಸುವಂಥ ಹಬ್ಬ. ಆದರೀಗ ಅವೆಲ್ಲವೂ ಈ ಡ್ರಗ್ಸ್‌ ಮಾಫಿಯಾದ ಸರಕಾಗಿದೆ.

ಮಣಿಪಾಲ ಸೇರಿದಂತೆ ಹಲವೆಡೆ ಈ ಹಬ್ಬಕ್ಕೆಂದೇ ಕೆಲವು ಪಬ್‌ಗಳು, ಪ್ರತಿಷ್ಠಿತ ಹೋಟೆಲ್‌ಗ‌ಳು ವಿಶೇಷ ಪಾರ್ಟಿಗಳನ್ನು ಆಯೋಜಿಸುತ್ತವೆ. ಜೋರಾಗಿ ಡಿಜೆ ಹಾಕಿ ಕುಣಿಸಲಾಗುತ್ತದೆ. ರಾತ್ರಿ ಹೊತ್ತು ಡಿಜೆಗೆ ಅನುಮತಿ ಇಲ್ಲದಿದ್ದರೂ ಈ ಕೆಲವು ಪ್ರತಿಷ್ಠಿತರ ಹೋಟೆಲ್‌ಗ‌ಳಿಗೆ, ಪಬ್‌ಗಳಿಗೆ ನಿಯಮ ಅನ್ವಯವಾಗದು. ರವಿವಾರ ಹಾಗೂ ರಜಾದಿನ ಗಳಲ್ಲಿ ಇಂಥ ಕೆಲವು ಪ್ರತಿಷ್ಠಿತ ಹೊಟೇಲ್‌ಗ‌ಳಲ್ಲಿ ಹಗಲು-ರಾತ್ರಿ ಎನ್ನದೇ ಡಿಜೆ ಹಾವಳಿ ಇರುತ್ತದೆ ಎಂಬ ದೂರು ವ್ಯಾಪಕವಾಗಿದೆ.

ಹೆಸರಿಗಷ್ಟೇ ಹೋಳಿ ಆಚರಣೆ. ನಡೆಯು ವುದೆಲ್ಲಾ ಮೋಜು ಮಸ್ತಿ. ಹೆಚ್ಚಾಗಿ ಶೈಕ್ಷಣಿಕ ಸಂಸ್ಥೆಗಳ ಆಸುಪಾಸು ಇಂಥ ಚಟುವಟಿಕೆ ಹೆಚ್ಚು.

ವಿಚಿತ್ರವೆಂದರೆ ಈ “ರಂಗಿನ’ ಪಾರ್ಟಿಗಳಿಗೆ ಯುವಜನರನ್ನು ಆಕರ್ಷಿಸಲು ವಿಶೇಷ ರಿಯಾಯಿತಿ ಘೋಷಿಸಿ, ಸಾಮಾಜಿಕ ಮಾಧ್ಯ ಮಗಳ ಮೂಲಕ “ಆಸಕ್ತ’ರಿಗೆ ಮಾಹಿತಿ ರವಾನಿ ಸಲಾಗುತ್ತದೆ. ಅವರು ತಮ್ಮೊಂದಿಗೆ ಹೊಸ ಗೆಳೆಯ-ಗೆಳತಿಯರನ್ನು ಕರೆ ತರುತ್ತಾರೆ. ಪಾರ್ಟಿಯಲ್ಲಿ ಅಂತಿಮವಾಗಿ ತಮ್ಮದೇ ರಂಗಿನ ಲೋಕದಲ್ಲಿ ಮುಳುಗುತ್ತಾರೆ. ಈ ರಂಗಿನ ಹಿಂದೆಯೂ ಮಾದಕ ವ್ಯಸನದ ಅಪಾಯಕಾರಿ ಬಣ್ಣದ ಛಾಯೆಯಿದೆ.

Advertisement

ಈ ಮಾತು ಬರೀ ಹೋಳಿಗಷ್ಟೇ ಅನ್ವಯಿ ಸದು. ವ್ಯಾಲೆಂಟೈನ್ಸ್‌ ಡೇ ಸೇರಿದಂತೆ ಯುವಜನರು ಹೆಚ್ಚಾಗಿ ಬೆರೆಯಲು ಸಾಧ್ಯತೆ ಇರುವಂಥ ಹಬ್ಬಗಳಿಗೆ ಈಗ ಪಾರ್ಟಿಗಳು ತಳಕು ಹಾಕಿಕೊಂಡಿವೆ.ಉಳಿದಂತೆ ವಾರಾಂತ್ಯದಲ್ಲಿ ಮಂಗಳೂರು, ಮಣಿಪಾಲದಂಥ ಕಡೆ‌ ಕೆಲವು ನಿರ್ದಿಷ್ಟ ಪಬ್‌ಗಳು, ಪ್ರತಿಷ್ಠಿತ ಬಾರ್‌ಗಳು, ಹೋಟೆಲ್‌ಗ‌ಳ ಎದುರು ರಾತ್ರಿ 8 ರ ಮೇಲೆ ನಿಲ್ಲುವ ವಾಹನಗಳ ಸಂಖ್ಯೆ ಕಂಡರೆ ಸಾಕು. ಪಾರ್ಟಿಗಳ ಗಮ್ಮತ್ತು ತಿಳಿಯಬಲ್ಲದು. ರಾತ್ರಿ 12ರ ಮೇಲೂ ತೂರಾಡಿಕೊಂಡು ಬರುವ ಯುವಕ-ಯುವತಿಯರನ್ನು, ಅವರನ್ನು ಕರೆ ದೊಯ್ಯಲು ಕಾಯುವ ಬಾಡಿಗೆ ವಾಹನಗಳನ್ನು ಕಂಡರೆ ಪಾರ್ಟಿಯೊಳಗಿನ ಮಾದಕತೆಯ ಕರಾಮತ್ತನ್ನೂ ಅರ್ಥ ಮಾಡಿಕೊಳ್ಳಬಹುದು.

ಒಂದಲ್ಲ  , ಹತ್ತಾರು ಸಮಸ್ಯೆಗಳಿವೆ !
ಉದಯವಾಣಿಯ ಡ್ರಗ್ಸ್‌ ಹಾವಳಿಯ ಕುರಿತಾದ ಸರಣಿಗೆ ಸಾರ್ವಜನಿಕರೇ ಸಮಸ್ಯೆಗಳನ್ನು ವಿವರಿಸತೊಡಗಿದ್ದಾರೆ. ಹತ್ತಾರು ಸಂದೇಶಗಳು ಬರುತ್ತಿದ್ದು, ತಡರಾತ್ರಿಯ ಹೊತ್ತಿನಲ್ಲಿ ಕೆಲವು ರಿಕ್ಷಾ ಡ್ರೈವರ್‌ಗಳನ್ನೂ ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಕಾಲೇಜಿನ ಸುತ್ತಮುತ್ತ ಇರುವ ಕೆಲವು ಕೆಫೆಗಳಲ್ಲಿ, ಅಂಗಡಿಗಳಲ್ಲಿ ಇಂಥ ವ್ಯವಹಾರ ನಡೆಯುತ್ತಿದೆ. ಜತೆಗೆ ವಿದ್ಯಾರ್ಥಿಗಳೇ ವಾಸಿಸುವ ಹಾಸ್ಟೆಲ್‌, ನೈಟ್‌ ಕ್ಲಬ್‌ಗಳು, ಬಾರ್‌ಗಳು, ವಿದ್ಯಾರ್ಥಿಗಳು ಇರುವ ಅಪಾರ್ಟ್ ಮೆಂಟ್‌ಗಳಲ್ಲಿ ಇದರ ಹಾವಳಿ ಸಾಕಷ್ಟಿದೆ. ಮಣಿಪಾಲದಂಥ ಅಂತಾರಾಷ್ಟ್ರೀಯ ಖ್ಯಾತಿಯ ನಗರದ ರಾತ್ರಿ ಜೀವನವೇ ಅಘಾತಕಾರಿ. ಕೆಲವು ಮಾದಕ ವ್ಯಸನಿಗಳಿಂದ ನೂರಾರು ಮಂದಿ ಮುಗ್ಧ ಮಕ್ಕಳ ಬಾಳು ಹಾಳಾಗುತ್ತಿದೆ. ನನ್ನ ಕಣ್ಣೆದುರಿಗೇ ಹೀಗೆ ಬದುಕನ್ನು ಹಾಳು ಮಾಡಿಕೊಂಡವರನ್ನು ಕಂಡಿದ್ದೇವೆ. ಇನ್ನಾದರೂ ಇದಕ್ಕೆ ಪೊಲೀಸರು, ಶಿಕ್ಷಣ ಸಂಸ್ಥೆಗಳು, ನಾಗರಿಕರು ಸೇರಿ ಸರಿಪಡಿಸ ಬೇಕೆಂಬುದು ಹಲವು ನಿವಾಸಿಗಳ ಆಗ್ರಹ.

ಅನೈತಿಕ ಚಟುವಟಿಕೆಯ ಹಿಂದೆಯೂ ಅದರ ನೆರಳೇ !
ಮಣಿಪಾಲದ ಪಬ್‌ವೊಂದರ ಎದುರು ಕೆಲವು ತಿಂಗಳ ಹಿಂದೆ ನಡೆದ ವಾಹನ ಅಪಘಾತ ಹಾಗೂ ಸುರತ್ಕಲ್‌ನ ಚಿತ್ರಾಪುರದ ಬಳಿ ಮಾದಕ ವ್ಯಸನ ಸೇವಿಸಿ ತಲವಾರು ಝಳಪಿಸಿದ ಪ್ರಕರಣಗಳನ್ನು ಸಾಮಾನ್ಯವೆನ್ನುವಂತೆ ಒಂದು ದಿನದ ಬಳಿಕ ಮರೆತೇ ಹೋಯಿತು. ಆದರೆ ಇಂಥ ಕರಾವಳಿಯಲ್ಲಿ ನಡೆಯುತ್ತಿರುವ ಹಲವಾರು ಕಾನೂನು ಬಾಹಿರ ಚಟುವಟಿಕೆಗಳ ಹಿಂದೆಯೂ ಮಾದಕ ವ್ಯಸನದ ಘಮಲು ಕಂಡುಬರುತ್ತಿದೆ. ಇದರಲ್ಲಿ ತೊಡಗುವವರೇ ಕ್ರಮೇಣ ದೊಡ್ಡ ಅಪರಾಧ ಕೃತ್ಯಗಳಿಗೆ ತೊಡಗುತ್ತಾರೆ. ಕೊಲೆ-ಸುಲಿಗೆ, ದರೋಡೆ ಯಂಥ ಪ್ರಕರಣಗಳಿಗೂ ಕಾರಣವಾಗುತ್ತಾರೆ ಎಂಬುದು ಪೊಲೀಸರಿಂದ ಲಭ್ಯವಾಗುವ ಆತಂಕದ ಮಾಹಿತಿ.

ಮಾದಕ ವಸ್ತುವಿಗೂ ದಾಸರು, ಮದಿರೆಗೂ ದಾಸರು !
ಉಭಯ ಜಿಲ್ಲೆಗಳ ನಗರಗಳಲ್ಲಿನ ಬಾರ್‌ಗಳು, ಪಬ್‌ಗಳು, ಮದ್ಯದಂಗಡಿಗಳು ಹಾಗೂ ಡ್ರಗ್ಸ್‌ ಪೆಡ್ಲರ್‌ಗಳಿಗೆ ವಿದ್ಯಾರ್ಥಿಗಳು ಹಾಗೂ ಯುವಜನರೇ ಅತಿ ದೊಡ್ಡ ಗಿರಾಕಿ ಸಮೂಹ. ಇವರಲ್ಲೂ ಯುವಕರು, ಯುವತಿಯರೆಂಬ ತಾರತಮ್ಯವೇನೂ ಇಲ್ಲ. ಇಬ್ಬರೂ ತಾವು ಮುಂದು ತಾವು ಮುಂದು ಎಂಬಂತೆ ದಾಸ ರಾಗುತ್ತಿದ್ದಾರೆ.

ಇದು ಸುಳ್ಳೆನಿಸಿದರೂ ಸತ್ಯ. ವಾರಾಂತ್ಯ ಬಂದಿತೆಂದರೆ ಈ ಬಾರ್‌ಗಳು, ಮದ್ಯದಂಗಡಿ ಗಳಿಗೆ ಯುವಜನರು ಲಗ್ಗೆ ಇಡುತ್ತಾರೆ. ಇವರಲ್ಲಿ ಬಹಳಷ್ಟು ಮಂದಿ ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದವರೇ.ಇಲ್ಲಿನ ಯಾರನ್ನಾದರೂ ಒಬ್ಬರನ್ನು ಸಾಮಾಜಿಕ ಮಾಧ್ಯಮಗಳ ಮತ್ತು ಮತ್ತಿತರ ಅಕ್ರಮ ವೆಬ್‌ಸೈಟ್‌ ಇತ್ಯಾದಿ ಮೂಲಕ ಗೆಳೆತನ ಸಾಧಿಸಿ ಕೊಂಡು “ಗೆಳೆಯರನ್ನು ಭೇಟಿ ಮಾಡುವ ನೆಪ’ದಲ್ಲಿ ಕರಾವಳಿಗೆ ಬಂದು ಮೋಜಿನಲ್ಲಿ ತೊಡಗುವವರ ಸಂಖ್ಯೆಯೂ ಹೆಚ್ಚಾಗಿದೆ. ಮಲ್ಪೆ ಸುತ್ತಮುತ್ತಲ ಕೆಲವು ಬೀಚ್‌ಗಳು, ಮಂಗಳೂರಿನ ಕೆಲವು ಬೀಚ್‌ಗಳು, ಮಣಿಪಾಲದ ಎಂಡ್‌ ಪಾಯಿಂಟ್‌ ಸೇರಿದಂತೆ ಹಲವು ಸ್ಥಾನಗಳು ಇದಕ್ಕೆ ಬಳಕೆಯಾಗುತ್ತಿವೆ. ಕತ್ತಲೆ ಇರುವ ಸಣ್ಣ ಜಾಗ ಸಿಕ್ಕರೂ ಸಾಕು. ಇಂದ್ರಾಣಿ ನದಿ ಆರಂಭವಾಗಿ ಹರಿದು ಹೋಗುವುದು ಸಣ್ಣ ಕೊರಕಲಾದ ನಗರ ಕಾಡಿನ ಮಧ್ಯೆ. ಅಲ್ಲಿಯೂ ಈ ಮಾದಕ ವ್ಯಸನಿಗಳು ಹೋಗಿ ರಂಗಾಗುವುದುಂಟು.

ಹೀಗೆ ಗೆಳೆಯರಾಗಿಯೋ, ಗೆಳತಿಯರಾ ಗಿಯೋ ಸಂಪರ್ಕ ಬಿಂದುವಾಗುವ (ಕನೆಕ್ಟಿಂಗ್‌ ಪಾಯಿಂಟ್‌)ವರೇ ಏಕಕಾಲದಲ್ಲಿ ಡ್ರಗ್ಸ್‌ ಪೆಡ್ಲರ್‌ಗಳ ಗಿರಾಕಿ ಹಾಗೂ ಏಜೆಂಟರಾಗಿರುತ್ತಾರೆ. ಮಾದಕ ವಸ್ತುಗಳಿಗೆ ಗಿರಾಕಿ ಹುಡುಕಿಕೊಟ್ಟಿದ್ದಕ್ಕೆ ಕಮೀಷನ್‌ ಪಾವತಿಯಾಗುತ್ತದೆ !

– ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next