ಮಗನಿಗೆ ಹನ್ನೊಂದು ವರ್ಷ ಆಗುತ್ತಿದೆ ಅಂದಾಕ್ಷಣ ನನಗೆ ಯೋಚನೆ ಕಾಡಲಾರಂಭಿಸಿದೆ. ಮಗ ಇನ್ನು ಮುಂದೆ ಕೇವಲ ಮಗುವಲ್ಲ , ಅವನಿಗೆ ಸಮಾಜದಲ್ಲಿ ನಡೆದುಕೊಳ್ಳುವ ಬಗ್ಗೆ ತಿಳುವಳಿಕೆ ನೀಡಬೇಕು ಎಂಬ ಹೊಣೆಗಾರಿಕೆಯ ಬಗ್ಗೆ ಯೋಚಿಸಲಾರಂಭಿಸಿದೆ. ಇವೇನೂ ಪುಸ್ತಕದಲ್ಲಿ ಸಿಗುವ ಸಾಮಗ್ರಿಗಳಲ್ಲ. ಹೆಚ್ಚೆಂದರೆ, ಬಾಹ್ಯ ವರ್ತನೆಗಳ ಬಗ್ಗೆ ಪುಸ್ತಕಗಳು ಸಿಕ್ಕಾವು. ಟೇಬಲ್ ಮ್ಯಾನರ್ಸ್ ಮುಂತಾದ ಇಂಗ್ಲಿಶ್ ವರ್ತನೆಗಳ ಬಗ್ಗೆ ಲಿಖೀತ ಸರಂಜಾಮುಗಳು ಇದ್ದೇ ಇವೆ. ಆದರೆ, ಗಂಡುಮಗ ಗಂಡಸಾಗುವ ಸಮಯದಲ್ಲಿ ಸಮಾಜದಲ್ಲಿ ಆತನ ವರ್ತನೆ ಹೇಗಿರಬೇಕು ಎಂಬ ಬಗ್ಗೆ ವಾಸ್ತವಿಕ ನೆಲೆಯ ಮಾರ್ಗದರ್ಶಿ ದಾಖಲೆಗಳು ಸಿಗುವುದಿಲ್ಲ.
ಸಮಾಜದಲ್ಲಿ ಹೇಗೆ ಹಿರಿಯರನ್ನು ಗೌರವಿಸಬೇಕು, ಹೇಗೆ ಮಾತನಾಡಬೇಕು ಎಂಬ ಬಗ್ಗೆ ಹುಡುಗರಿಗೆ ಹತ್ತುಹಲವು ಸೂಚನೆಗಳಿರಬಹುದು. ಅವೆಲ್ಲ ಮೇಲಿಂದ ಮೇಲೆ ನೀಡುವಂಥ ಸೂಚನೆಗಳು. ಹೇಗೆ ನಿಲ್ಲ ಬೇಕು, ಹೇಗೆ ಕುಳಿತುಕೊಳ್ಳಬೇಕು, ಎಷ್ಟು ಗಟ್ಟಿಯಾಗಿ ಮಾತನಾಡಬೇಕು ಎಂಬ ಬಗ್ಗೆ ಯಾರಾದರೂ ಗಂಡುಮಗನಿಗೆ ಹೇಳಿದ್ದಿದೆಯೆ? ನನ್ನ ಸೋದರ ಸೊಸೆಗೆ ಏಳು ವರ್ಷ. ಈಗಾಗಲೇ ಅವಳಿಗೆ ವರ್ತನೆಗಳ ರೀತಿ-ನೀತಿಗಳ ದೊಡ್ಡ ಪಟ್ಟಿಯೇ ಇದೆ. ನೂರಾರು “ಬೇಡ’ಗಳು ಸಿದ್ಧವಾಗಿವೆ. ಅಷ್ಟೊಂದು ಬಗೆಯ “ಬೇಡ’ಗಳು ನನ್ನ ಮಗನಿಗಿಲ್ಲ. ಆತ ಗಂಡೆಂಬುದೇ ಇದಕ್ಕೆ ಕಾರಣ. ಇವೆಲ್ಲದರ ಅರ್ಥ ಏನು? ವರ್ತನೆಯ ಬೇಲಿ ಹೆಣ್ಣುಮಗುವಿಗೆ ಹುಟ್ಟುತ್ತಲೇ ಇದ್ದರೆ, ಗಂಡಿಗೆ ಅದು ಆಯ್ಕೆಯ ಸಂಗತಿ ಮಾತ್ರ. ಆ ಅರ್ಥದಲ್ಲಿ ಹೆಣ್ಣು ಹುಟ್ಟುತ್ತಲೇ ಎರಡನೆಯ ದರ್ಜೆಯ ಪ್ರಜೆಯಾಗಿ ಉಳಿಯುತ್ತಾಳೆ.
ನೀವು ಸೂಕ್ಷ್ಮವಾಗಿ ಕೆಲವು ಸಂಗತಿಗಳನ್ನು ಗಮನಿಸಿ. ನಾವು ನಮಗರಿವಿಲ್ಲದಂತೆಯೇ ಹೆಣ್ಣುಮಗಳಿಗೆ ಕೆಲವು ಸೂಚನೆಗಳನ್ನು ಕೊಡುತ್ತಿರುತ್ತೇವೆ. ಕಾಲು ಅಗಲಿಸಿ ಕುಳಿತುಕೊಳ್ಳಬಾರದು, ಎದೆ ಸೆಟೆಸಿ ನಡೆಯಬಾರದು, ಕೈ-ಕಾಲುಗಳನ್ನು ಬೀಸಿ ನಡೆಯಬಾರದು, ನೇರವಾಗಿ ನೋಡಬಾರದು… ಇಂಥ ಯಾವ ನಿಬಂಧನೆಯೂ ಹುಡುಗನಿಗಿಲ್ಲ. ಒಂದು ರೀತಿಯಲ್ಲಿ ಹೆಣ್ಣೆಂಬ ಹಕ್ಕಿಯ ರೆಕ್ಕೆ ಮುರಿಯುವ ಕೆಲಸ ಬಾಲ್ಯದಲ್ಲಿಯೇ ಆರಂಭವಾಗಿರುತ್ತದೆ. ನಮ್ಮ ಸೌಂದರ್ಯ ಪ್ರಜ್ಞೆಯೂ ಪರ್ಯಾಯವಾಗಿ ಹೆಣ್ಣಿನ ಶೋಷಣೆಯೇ ಆಗಿದೆ. ಹೆಣ್ಣು ಹೇಗೆ ನಡೆಯಬೇಕೆಂದರೆ ಅದು ಇತರರನ್ನು ಆಕರ್ಷಿಸಬೇಕು. ನಮ್ಮ ಆಧುನಿಕ ಸೌಂದರ್ಯ ಲಹರಿಯಲ್ಲಿ ಹೆಣ್ಣು ತನ್ನ ಪೃಷ್ಠವನ್ನು ಅಲುಗಾಡಿಸಿ ಹೇಗೆ ನಡೆಯಬೇಕು ಎಂಬುದರ ಬಗ್ಗೆಯೇ ಸಲಹೆಗಳಿವೆ !
ಇವೆಲ್ಲದರ ಪ್ರಧಾನ ಉದ್ದೇಶ ಏನೆಂದರೆ, ಪುರುಷನನ್ನು ಓಲೈಸುವುದು. ಹೆಣ್ಣಿನ ಜೀವನ ಮುಖ್ಯ ಆಶಯವೇ ಗಂಡಿಗೆ ಸಂತೋಷ ಉಂಟುಮಾಡುವಂತೆ ಮಾಡುವುದು! ಪಿತೃಪ್ರಧಾನ ಸಮಾಜದ ನಿಯಮಕ್ಕೆ ಅನುಗುಣವಾಗಿ ಜೀವನ ನಡೆಸಬೇಕು ಎಂಬ ಅಲಿಖೀತ ಕಟ್ಟಳೆ ಅವಳ ಹಿಂದೆ ಸದಾ ಇರುತ್ತದೆ. ತಂದೆ, ಅಣ್ಣ, ಗಂಡ, ಮಗ ಯಾರೇ ಆಗಿರಲಿ- ಇವರೆಲ್ಲರ ಸಂತೋಷಕ್ಕೆ ಜೀವನ ನಡೆಸುವುದರಲ್ಲಿ ತನ್ನ ಸ್ವಂತ ಜೀವಿತವನ್ನು ಅವಳು ಮರೆತಿರುತ್ತಾಳೆ. ತನ್ನ ಬದುಕು ತನಗೆ ಸರಿಯಾಗಿ ರೂಪಿಸಿಕೊಳ್ಳೋಣವೆಂದರೆ ಹತ್ತಾರು ಬೇಲಿಗಳು ಅವಳನ್ನು ಸುತ್ತುವರಿದಿರುತ್ತವೆ. ಏನು ಮಾಡಬೇಕಾದರೂ ಗಂಡಿನ ಅನುಮತಿ ಬೇಕಾಗುತ್ತದೆ. ಇಂಥ ಕಷ್ಟ ಗಂಡಿಗೆ ಇರುವುದಿಲ್ಲ.
ಸಮಾಜ ಕಾಲಾನುಕಾಲಕ್ಕೆ ಬದಲಾವಣೆ ಆಗುತ್ತಲೇ ಇರುತ್ತದೆ. ಆದರೆ, ಗಂಡು-ಹೆಣ್ಣಿನ ಸಾಮಾಜಿಕ ಸ್ಥಾನಮಾನದ ದೃಷ್ಟಿಯಲ್ಲಿ ಹೊರಗೆ ಬದಲಾವಣೆ ಕಂಡರೂ ಒಳಗೊಳಗೆ ಸ್ಥಿತಿ ಹಾಗೆಯೇ ಇದೆ. ಗಂಡು-ಹೆಣ್ಣಿನ ತಾರತಮ್ಯವನ್ನು ಬದಲಾಯಿಸಲು ಸಮಾಜದ ಸಾಂಪ್ರದಾಯಿಕ ಮನಸ್ಸುಗಳು ಒಪ್ಪುತ್ತಿಲ್ಲ. ಹೆಣ್ಣಿನ ವರ್ತನೆಯಲ್ಲಿ ಸಾಕಷ್ಟು ಪರಿವರ್ತನೆಗಳಾಗಿವೆ. ಆದರೆ, ಈ ಬದಲಾವಣೆಯನ್ನು ಒಪ್ಪಿಕೊಳ್ಳುವ ಮನೋಸ್ಥಿತಿ ಗಂಡಿಗಿಲ್ಲ. ಗಂಡು ಹುಡುಗರನ್ನು ಆ ನೆಲೆಯಲ್ಲಿ ಬೆಳೆಸುವ ಯೋಚನೆಯೂ ಸಮಾಜದಲ್ಲಿಲ್ಲ. ಹುಟ್ಟುವಾಗಲೇ ಯಾರಿಗೂ ಜ್ಞಾನವಿರುವುದಿಲ್ಲ. ಲಿಂಗಬೇಧದ ಅರಿವೂ ಇರುವುದಿಲ್ಲ. ಲಿಂಗದ ಕಾರಣಕ್ಕಾಗಿ ಜ್ಞಾನವೂ ಬದಲಾಗುವುದಿಲ್ಲ. ಅದು ಬರುವುದು ಸಮಾಜದಲ್ಲಿ ಬೆಳೆಯುವ, ಬೆಳೆಸುವ ರೀತಿಯಲ್ಲಿ. ಇಂದಿನ ಹೆಣ್ಣುಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ಗಂಡುಮಕ್ಕಳಿಗೆ ವರ್ತನೆಯ ಪಾಠ ಹೇಳುವ ಅಗತ್ಯವನ್ನು ಎತ್ತಿಹಿಡಿಯುತ್ತದೆ.
ನನಗೋ ನನ್ನ ಮಗನ ಮೇಲೆ ಪ್ರೀತಿ, ಜವಾಬ್ದಾರಿ ಇದೆ. ಹಾಗಾಗಿ ನಾನಾಗಿಯೇ ಆತನಿಗೆ ವರ್ತನೆಗಳ ಸೂಕ್ಷ್ಮಗಳನ್ನು ತಿಳಿಸಲು ಕುಳಿತಿರುವೆ. ಮುಂದೆ ಬರುವ ಸ್ವಾಭಿಮಾನಿ, ಸ್ವಾವಲಂಬಿ ಹೆಣ್ಣುಮಕ್ಕಳ ಜೊತೆ ವ್ಯವಹರಿಸಲು ಆತನಿಗೆ ಸೌಜನ್ಯದ ಶಿಕ್ಷಣ ಅಗತ್ಯ. ಇಲ್ಲವಾದರೆ ಎಲ್ಲಾ ಶಿಕ್ಷಣ ಪಡೆದ ಶಿಸ್ತಿನ ಸಿಪಾಯಿಯಾಗುವ ನನ್ನ ಸೋದರ ಸೊಸೆಗಿಂತ ಕಡಿಮೆ ಎನಿಸಿ ಆತನಿಗೆ ಕೀಳರಿಮೆ ಕಾಡಲಾರದೆ? ಪ್ರತಿಯೊಬ್ಬ ಗಂಡು, ಸಮಾಜದಲ್ಲಿ ಹೆಣ್ಣು ಕೂಡ ತನ್ನಷ್ಟೇ ಪ್ರಾಮುಖ್ಯ ಉಳ್ಳವಳು, ಅವಳಿಗೂ ತನ್ನಂತೆ ತನ್ನಷ್ಟೇ ಬದುಕುವ ಹಕ್ಕು ಇದೆ ಎಂದು ತಿಳಿದುಕೊಳ್ಳುವಂತೆ ಆತನಿಗೆ ಬಾಲ್ಯದಲ್ಲಿ ನಡವಳಿಕೆಯ ಶಿಕ್ಷಣ ನೀಡಬೇಕಾಗಿದೆ.
(ಲೇಖಕಿ ಎಂ. ಡಿ. ಪದವೀಧರೆ. ಮಂಗಳೂರಿನ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಪ್ರೊಫೆಸರ್)
– ರಶ್ಮಿ ಕುಂದಾಪುರ