Advertisement

ಶುರುವಾಯ್ತು ನಾಗರ ಪಂಚಮಿ ಸಂಭ್ರಮ

04:41 PM Aug 13, 2018 | |

ಧಾರವಾಡ: ನಾಗರ ಪಂಚಮಿ ನಾಡಿಗೆ ದೊಡ್ಡದು ಎನ್ನುವ ಜನಪದರ ಮಾತಿನಂತೆ ಶ್ರಾವಣದ ಹೊಸ್ತಿಲಲ್ಲಿ ನಾಗರ ಪಂಚಮಿ ಹಬ್ಬದ ಆಚರಣೆ ಆರಂಭವಾಗಲಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ ಆಚರಿಸಲ್ಪಡುವ ಈ ಹಬ್ಬಕ್ಕೆ ತನ್ನದೇ ಆದ ವಿಶೇಷತೆ ಇದೆ. ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರಪಂಚಮಿ ಹಬ್ಬಗಳ ಸಾಲು ಆರಂಭವಾಗುವುದಕ್ಕೆ ನಾಂದಿ ಹಾಡುತ್ತದೆ. ನಾಗರ ಪಂಚಮಿಯ ನಂತರ ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹಬ್ಬಗಳು ಒಂದರ ಹಿಂದೊಂದರಂತೆ ಆರಂಭವಾಗುತ್ತವೆ. ಬಾಂಧವ್ಯಗಳನ್ನು ಬೆಸೆಯುವ ಹಬ್ಬವೆಂದೇ ಕರೆಯಲಾಗುವ ಪಂಚಮಿ ಹಬ್ಬದಂದು ನಾಗರ ಪ್ರತಿಮೆ ಹಾಗೂ ಹುತ್ತಕ್ಕೆ ಹಾಲೆರೆದು ಪೂಜಿಸುವ ಸಂಪ್ರದಾಯ ಹಾಗೂ ಬಗೆಬಗೆಯ ತಂಬಿಟ್ಟು, ಉಂಡೆಗಳ ನೈವೇದ್ಯ ಸಲ್ಲಿಸುವ ಮೂಲಕ ವಿಶೇಷ ಪೂಜಾ ಕಾರ್ಯಗಳೂ ನಡೆಯುತ್ತವೆ.

Advertisement

ನಾಗರ ಪಂಚಮಿ ದಿನದಂದು ಮಹಿಳೆಯರು ನಾಗರ ಪ್ರತಿಮೆಗೆ ವಿವಿಧ ರೀತಿಯಲ್ಲಿ ಪೂಜಾ ಕಾರ್ಯಗಳನ್ನು ಮಾಡುತ್ತಾರೆ. ಜೊತೆಗೆ ನೂತನವಾಗಿ ಮದುವೆಯಾಗಿರುವ ಹೆಣ್ಣು ಮಕ್ಕಳು ತವರಿಗೆ ಬಂದು ಪಂಚಮಿ ಹಬ್ಬವನ್ನು ಆಚರಿಸುವುದು ರೂಢಿ. ಈ ಹಬ್ಬವನ್ನು ಸಹೋದರ-ಸಹೋದರಿಯರ ಹಬ್ಬ ಎಂಬುದಾಗಿಯೂ ಕರೆಯಲಾಗುತ್ತದೆ. 

ಜೋಕಾಲಿ ಹಬ್ಬ: ಉತ್ತರ ಕರ್ನಾಟಕದ ಕಡೆಗೆ ಈ ಹಬ್ಬವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸುತ್ತಾರೆ. ಪಂಚಮಿ ಹಬ್ಬ ಜೋಕಾಲಿ ಹಬ್ಬವೆಂದೇ ಜನಜನಿತವಾಗಿದೆ. ಈ ಹಬ್ಬವನ್ನು 3ರಿಂದ 5 ದಿನಗಳ ವರೆಗೆ ಆಚರಿಸಲಾಗುತ್ತಿದೆ. ವಿಶೇಷ ಪೂಜಾ ಕೈಂಕರ್ಯಗಳು ಎಲ್ಲೆಡೆ ಸರ್ವೇಸಾಮಾನ್ಯ. ಇದರ ಜೊತೆಗೆ ಈ ಸಂಭ್ರಮದಲ್ಲಿ ಮನೆಯಲ್ಲಿ ಜೋಕಾಲಿ ಕಟ್ಟಿ ಜೀಕುವುದು ವಿಶಿಷ್ಟ. ಮರಕ್ಕೆ ಜೋಕಾಲಿ ಕಟ್ಟಿ ಜೀಕುವುದು, ಜೀಕುವಿಕೆಗೆ ಜೂಜು ಕಟ್ಟುವುದು, ಗುರಿ ಮುಟ್ಟುವುದು…ಹೀಗೆ ಅನೇಕ ಮನರಂಜನೆಗಳು ಹಬ್ಬದ ಪ್ರಯುಕ್ತ ನಡೆಯುತ್ತವೆ.

ಮಾರುಕಟ್ಟೆಯಲ್ಲಿ ಗರ್ದಿ: ಹಬ್ಬಕ್ಕೆ ವಿಶೇಷವಾಗಿ ವಿವಿಧ ರೀತಿಯ ಉಂಡೆಗಳನ್ನು ಮಾಡಿರುತ್ತಾರೆ. ಶೇಂಗಾ ಉಂಡೆ, ಎಳ್ಳುಂಡೆ, ಕಡ್ಲಿ ಉಂಡೆ, ತಂಬಿಟ್ಟು, ಬೇಳೆ ಕಡಬು, ಬೂಂದಿ ಉಂಡೆ, ಡಾಣಿ ಉಂಡೆ ಹೀಗೆ ಬಗೆಬಗೆಯ ರುಚಿಕರ ತಿಂಡಿ-ತಿನಿಸುಗಳನ್ನು ಮಾಡಿ ಸವಿಯಲಾಗುತ್ತದೆ. ಹೀಗಾಗಿ ಧಾರವಾಡ ಮಾರುಕಟ್ಟೆಯಲ್ಲಿ ಬೂಂದಿ, ಕಾರದಾನಿ, ಬೇಸನ್‌, ಶೇಂಗಾ, ಎಳ್ಳಿನ ಮಾರಾಟ ಜೋರಾಗಿದೆ. ಉಳಿದಂತೆ ಒಣಕೊಬ್ಬರಿ ಖರೀದಿಯೂ ಜೋರಾಗಿದೆ. ಜೊತೆಗೆ ಹೆಣ್ಣು ಮಕ್ಕಳು ಹೊಸ ಉಡುಪು, ಸೀರೆಗಳ ಖರೀದಿಯಲ್ಲಿ ತೊಡಗಿದ್ದರಿಂದ ಮಾರುಕಟ್ಟೆ ರಂಗೇರಿದೆ. ಇನ್ನು ಶ್ರಾವಣ ಆರಂಭಗೊಂಡಿದ್ದರಿಂದ ಹೂವು ಮತ್ತು ಹಣ್ಣಿನ ವ್ಯಾಪಾರವೂ ಜೋರಾಗಿದೆ. 

ಒಂದು ಮಾರು ಮಲ್ಲಿಗೆ ಹೂವಿನ ದರ 40 ರೂ.ಗೆ ಏರಿದರೆ, ಒಂದು ಸುಗಂಧಪುಷ್ಪದ ಮಾಲೆಯ ಬೆಲೆ 100 ರೂ. ತಲುಪಿದೆ. ಶುಕ್ರಗೌರಿ ಮತ್ತು ಮಂಗಳಗೌರಿ ವ್ರತ ಆಚರಿಸುವ ಮುತ್ತೆ$çದೆಯರು ಪೂಜಾ ಸಾಮಾಗ್ರಿಗಳಾದ ಬಿದರಿನ ಮರ, ಕಂಕಣ, ಕುಂಕುಮ, ಅರಿಷಿಣ, ಹಸಿರು ಬಳೆ, ಪೂಜೆಗೆ ಬಾಳೆದಿಂಡು ಖರೀದಿಸುವ ದೃಶ್ಯ ಮಾರುಕಟ್ಟೆಯಲ್ಲಿ ಕಂಡು ಬಂತು.

Advertisement

120-140 ರೂ.
ಭೀಮನ ಅಮವಾಸ್ಯೆ ಶನಿವಾರ ಮುಗಿದಿದ್ದು, ರವಿವಾರದಿಂದ ಶ್ರಾವಣ ಆರಂಭಗೊಳ್ಳುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿ ನಾಗರ ಪಂಚಮಿ ಹಬ್ಬಕ್ಕಾಗಿ ಉಂಡೆ ಕಟ್ಟುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮನೆಯಲ್ಲಿಯೇ ಉಂಡೆ ಕಟ್ಟಿದ್ದರೆ, ನಗರ ಪ್ರದೇಶದಲ್ಲಿ ಬೇಕರಿ ಸೇರಿದಂತೆ ವಿವಿಧ ಅಂಗಡಿಯಲ್ಲಿ ಹಬ್ಬಕ್ಕಾಗಿ ಸಿದ್ಧಪಡಿಸಿರುವ ಉಂಡೆಗಳ ಖರೀದಿಗೆ ಜನರು ಮುಂದಾಗಿದ್ದಾರೆ. 120ರಿಂದ 140 ರೂ. ವರೆಗೆ ಕೆಜಿ ಲೆಕ್ಕದಲ್ಲಿ ವಿವಿಧ ಬಗೆಯ ಉಂಡೆಗಳ ಮಾರಾಟ ಜೋರಾಗಿದೆ.

ಗುರುವಾರ ಕೆರೆಂಬಲಿ
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರವೇ ನಾಗಪ್ಪನಿಗೆ ಹಾಲೆರೆದು ಪೂಜೆ ಕೈಗೊಳ್ಳುವ ಮೂಲಕ ನಾಗರ ಪಂಚಮಿ ಹಬ್ಬ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರ ಪ್ರದೇಶದ ಕೆಲವಡೆ ಬುಧವಾರವೂ ಹಬ್ಬದ ಆಚರಣೆಗಳು ನಡೆಯಲಿವೆ. ಗುರುವಾರ ಕೆರೆಂಬಲಿ ನಡೆಯಲಿದ್ದು, ಮಣ್ಣಿನ ನಾಗಪ್ಪನ ಜೊತೆಗೆ ಈವರೆಗೆ ತಯಾರಿಸಿ ಪೂಜಿಸಿರುವ ಮಣ್ಣಿನ ಬಸವಣ್ಣನ ಮೂರ್ತಿಗಳನ್ನು ಹೊಲಕ್ಕೆ ಕೊಂಡೊಯ್ದು ಹೊಲದಲ್ಲಿ ಇಟ್ಟು ಪೂಜೆ ಮಾಡಲಾಗುತ್ತದೆ. ಈ ಮೂಲಕ ಮುಂಗಾರು ಬೆಳೆಯ ಫಸಲು ಹೊತ್ತಿರುವ ಭೂಮಿ ತಾಯಿಯ ಪೂಜೆ ಕಾರ್ಯ ಆಗಲಿದೆ. ಇದರೊಂದಿಗೆ ಹೊಲದಲ್ಲಿ ಕುಟುಂಬ ಸದಸ್ಯರೊಂದಿಗೆ ಹಬ್ಬದ ಅಡುಗೆ ಸವಿ ಭೋಜನವೂ ನೆರವೇರಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next