Advertisement

ಶುರುವಾಗಿದೆ ವಾರ್ಡ್‌ ಉಪಸಮರ

11:27 AM May 10, 2019 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸದಸ್ಯರಿಬ್ಬರ ಅಕಾಲಿಕ ಮರಣದಿಂದ ತೆರವಾಗಿರುವ ಸಂಗಾಯಪುರ (ವಾರ್ಡ್‌ ಸಂಖ್ಯೆ 60) ಹಾಗೂ ಕಾವೇರಿಪುರ (ವಾರ್ಡ್‌ ಸಂಖ್ಯೆ 103)ಕ್ಕೆ ಮೇ 29ರಂದು ನಡೆಯಲಿರುವ ಉಪ ಚುನಾವಣೆಗೆ ಪೂರ್ವಸಿದ್ಧತೆಗಳು ನಡೆದಿದ್ದು, ಗುರುವಾರದಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದರು.

Advertisement

ಸಗಾಯಪುರದಲ್ಲಿ 30,184 ಹಾಗೂ ಕಾವೇರಿಪುರದಲ್ಲಿ 50,483 ಮತದಾರರಿದ್ದು, ಎರಡೂ ವಾರ್ಡ್‌ಗಳಲ್ಲಿ ಕ್ರಮವಾಗಿ 31 ಹಾಗೂ 43 ಮತಗಟ್ಟೆಗಳನ್ನು ತೆರೆಯಲಾಗಿದೆ. ಇತ್ತೀಚೆಗಷ್ಟೇ ಲೋಕಸಭಾ ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಮತದಾರರ ಎಡಗೈ ಉಂಗುರ ಬೆರಳಿಗೆ ಶಾಯಿ ಹಾಕಲಾಗುವುದು. ಎರಡು ವಾರ್ಡ್‌ಗಳ ಉಪಚುನಾವಣೆಗೆ ವಿದ್ಯುನ್ಮಾನ ಮತಯಂತ್ರ (ಇವಿಎಂ) ಬಳಕೆ ಮಾಡಲಾಗುವುದು. ವಿವಿ ಪ್ಯಾಟ್ ಇರುವುದಿಲ್ಲ. ರಾಜ್ಯ ಚುನಾವಣಾ ಆಯೋಗದ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೇ 16 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ರಾಜ್ಯ ಚುನಾವಣಾ ಆಯೋಗ ಒಬ್ಬ ಅಭ್ಯರ್ಥಿಗೆ 5 ಲಕ್ಷ ರೂ.ವರೆಗೆ ವೆಚ್ಚ ಮಾಡಲು ಅವಕಾಶ ನೀಡಿದ್ದು, ಅಕೌಂಟಿಂಗ್‌ ಟೀಂ ಶ್ಯಾಡೋ ರಿಜಿಸ್ಟರ್‌ ಮೂಲಕ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲಿದ್ದಾರೆ ಎಂದು ಹೇಳಿದರು.

ಅಭಿವೃದ್ಧಿ ಕಾಮಗಾರಿ ಮೇಲೆ ನಿಗಾ: ಉದ್ದೇಶಿತ ಎರಡೂ ವಾರ್ಡ್‌ಗಳಲ್ಲಿ ಮತದರರನ್ನು ಸೆಳೆಯುವ ಅಥವಾ ಪ್ರಭಾವ ಬೀರುವ ಯಾವುದೇ ಅಭಿವೃದ್ಧಿ ಕಾಮಗಾರಿ ಗಳನ್ನು ಕೈಗೊಳ್ಳದಂತೆ ನಿಗಾ ವಹಿಸಲಾಗಿದೆ. ಚುನಾವಣಾ ಪ್ರಕ್ರಿಯೆಗಾಗಿ ನಿಯೋಜಿಸಿರುವ 356 ಸಿಬ್ಬಂದಿಗೆ ಎರಡು ಹಂತಗಳಲ್ಲಿ ತರಬೇತಿ ನೀಡಲಾಗುತ್ತಿದೆ. 29ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಮತದಾನ ನಡೆಯಲಿದ್ದು, ಸಗಾಯಪುರಂ ವಾರ್ಡ್‌ಗೆ ಎಂ.ಪಿ. ಕೃಷ್ಣಕುಮಾರ್‌ ಹಾಗೂ ಕಾವೇರಿಪುರ ವಾರ್ಡ್‌ಗೆ ರಾಜು ಅವರನ್ನು ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಎರಡೂ ಕ್ಷೇತ್ರಗಳಿಗೆ ತಲಾ ನಾಲ್ಕು ಫ್ಲೈಯಿಂಗ್‌ ಸ್ಕ್ವೈಡ್‌, ಸ್ಟಾಟಿಕ್‌ ಸರ್ವಲನ್ಸ್‌ , 2 ವಿಡಿಯೋ ಸರ್ವೆಲನ್ಸ್‌, 7ಸೆಕ್ಟರ್‌ ಅಧಿಕಾರಿ ತಂಡಗಳು ಸೇರಿದಂತೆ ಒಟ್ಟು 19 ಮಾದರಿ ನೀತಿ ಸಂಹಿತೆ ಪಾಲನಾ ತಂಡ ರಚಿಸಲಾಗಿದೆ ಎಂದು ವಿವರಿಸಿದರು. ಮೇ 31 ರಂದು ಮತ ಎಣಿಕೆ ಎರಡು ಪ್ರತ್ಯೇಕ ಕೇಂದ್ರದಲ್ಲಿ ನಡೆಯಲಿದ್ದು, ಸಗಾಯಪುರ ವಾರ್ಡ್‌ನ ಮತ ಎಣಿಕೆ ಫ್ರೇಜರ್‌ಟೌನ್‌ ಬಿಬಿಎಂಪಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ, ಕಾವೇರಿಪುರ ವಾರ್ಡ್‌ನ ಮತ ಎಣಿಕೆ ವಿಜಯನಗರದ ಸರ್ವೋದಯ ನ್ಯಾಷನಲ್ ಪಬ್ಲಿಕ್‌ ಶಾಲೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next