ಧಾರವಾಡ: ಕೃಷಿ ವಿಶ್ವವಿದ್ಯಾಲಯವು ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಎಲ್ಲ ಬೋಧನಾ ಆವರಣಗಳಲ್ಲಿ ಆನ್‌ಲೈನ್ ತರಗತಿ ಆರಂಭಿಸಲಾಗಿದೆ.
(ಧಾರವಾಡ, ವಿಜಯಪುರ, ಶಿರಸಿ ಮತ್ತು ಹನುಮನಮಟ್ಟಿ ಆವರಣಗಳಲ್ಲಿ) ವಿಶ್ವವಿದ್ಯಾಲಯವು ತನ್ನ ಅಧೀನದಲ್ಲಿ ಬರುವ 4 ಆವರಣಗಳಲ್ಲಿ 5 ಪದವಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಸುಮಾರು 3,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೋವಿಡ್ 19 ಲಾಕಡೌನ್ ಹಿನ್ನೆಲೆಯಲ್ಲಿ ಮಾ.14ರಿಂದಲೇ ಎಲ್ಲ ತರಗತಿ ರದ್ದುಗೊಳಿಸಿ, ವಿದ್ಯಾರ್ಥಿಗಳಿಗೆ ವಸತಿಗೃಹ ಖಾಲಿ ಮಾಡಿ ತಮ್ಮ ತಮ್ಮ ಊರುಗಳಿಗೆ ತೆರಳಲು ಸೂಚಿಸಲಾಗಿತ್ತು. ಆದರೀಗ ವಿದ್ಯಾರ್ಥಿಗಳು ಈಗ ಪ್ರಸ್ತುತ ಬೋಧನಾ ವರ್ಷದ 2ನೇ ಸೆಮಿಸ್ಟರ್‌ನ ಮಧ್ಯದಲ್ಲಿದ್ದು, ಸುಮಾರು ಶೇ.50 ಬೋಧನಾ ಅವಧಿ ಮುಕ್ತಾಯಗೊಂಡಿದೆ. ಆದರೆ ಲಾಕ್‌ಡೌನ್ ವಿಸ್ತರಿಸಿರುವ ಕಾರಣ ಸೆಮಿಸ್ಟರ್‌ನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಆನ್‌ಲೈನ್ ತರಗತಿ ಆರಂಭಿಸಲಾಗಿದೆ.
2019-20ನೇ ಸಾಲಿನ 2ನೇ ಸೆಮಿಸ್ಟರ್ ನಲ್ಲಿ 117 ಸ್ನಾತಕ ಮತ್ತು 123 ಸ್ನಾತಕೋತ್ತರ ಕೋರ್ಸಗಳು ನಡೆದಿರುತ್ತವೆ. ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿಧ ಕೋರ್ಸಗಳ ವಿಷಯವನ್ನು ಕೃಷಿ ವಿಶ್ವವಿದ್ಯಾಲಯದ ವೆಬ್ ಸೈಟ್‌ನಲ್ಲಿ ದಾಖಲಿಸಲಾಗಿದೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಬೋಧನೆಯಲ್ಲಿ ತೊಡಗಿರುವ ಬೋಧಕರಿಗೆ ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ನಿರ್ದೇಶನದಂತೆ ಝೂಮ್ ಕ್ಲೌಡ್ ಆ್ಯಪ್‌ನಲ್ಲಿ ಆನ್‌ಲೈನ್ ತರಗತಿಗಳನ್ನು ನಡೆಸಲು ತರಬೇತಿ ನೀಡಲಾಗಿದೆ. ಇದರಿಂದ ನಿಗದಿತ ಅವಧಿಯಲ್ಲಿ ಪಠ್ಯಕ್ರಮ ಪೂರ್ಣಗೊಳಿಸಲು, ವಿದ್ಯಾರ್ಥಿಗಳ ಸಮಯ ಉಳಿಸಲು ಸಹಾಯವಾಗುತ್ತದೆ. ತರಗತಿಗಳು ಆರಂಭವಾದ ನಂತರ ಹಾಗೂ ವಿದ್ಯಾರ್ಥಿಗಳು ಆವರಣಗಳಿಗೆ ಮರಳಿದ ಕೂಡಲೇ ನೇರವಾಗಿ ಪರೀಕ್ಷೆಗಳನ್ನು ನಡೆಸಬಹುದು.
ವಿವಿಧ ತರಗತಿಯ ಪಠ್ಯಕ್ರಮದ ಟಿಪ್ಪಣಿಗಳನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ ನಲ್ಲಿ ದಾಖಲಿಸಲು ನಿರ್ಧರಿಸಲಾಗಿದೆ. ಮತ್ತು ಈ ಟಿಪ್ಪಣಿಗಳನ್ನು ವಾಟ್ಸ್‌ಆ್ಯಪ್ ಮುಖಾಂತರ ಎಲ್ಲ ವಿದ್ಯಾರ್ಥಿಗಳಿಗೆ ಕಳುಹಿಸಿ ಕಳಪೆ ಇಂಟರ್‌ನೆಟ್ ಸಂಪರ್ಕದಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುವುದನ್ನು ತಪ್ಪಿಸಲು ನಿರ್ಧರಿಸಲಾಗಿದೆ.
ಒಂದು ವೇಳೆ ಲಾಕ್‌ಡೌನ್ ಅವಧಿ ಮೇ 3 ನಂತರವೂ ವಿಸ್ತರಣೆಯಾದರೆ ವಿವಿವು ಆನ್‌ಲೈನ್ ಪರೀಕ್ಷೆಗಳನ್ನು ಕೂಡಾ ಕೈಗೊಳ್ಳಲು ಗಂಭೀರ ಚಿಂತನೆ ನಡೆಸಿದೆ. ಇದರಿಂದ ವಿದ್ಯಾರ್ಥಿಗಳ ಸಮಯದ ಉಳಿತಾಯವಾಗಿ ಪ್ರಮುಖವಾಗಿ ಅಂತಿಮ ವರ್ಷದ ಪದವಿ ಕಾರ್ಯಕ್ರಮ, ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕಾಗಿ ವಿವಿಧ ವಿಶ್ವವಿದ್ಯಾಲಯಗಳಿಗೆ ತೆರಳಬಹುದು.
-ಡಾ|ಮಹಾದೇವ ಚೆಟ್ಟಿ, ಕುಲಪತಿ, ಕೃಷಿ ವಿವಿ, ಧಾರವಾಡ