Advertisement

ಎಚ್‌ಐವಿ ಸೋಂಕಿತರಿಗೆ 2ನೇ ಕಾನೂನು ಸಲಹಾ ಕೇಂದ್ರ ಆರಂಭ

02:20 AM Jul 19, 2017 | Harsha Rao |

ಮಹಾನಗರ: ಎಚ್‌ಐವಿ ಸೋಂಕಿತರಿಗೆ ಕಾನೂನು ರಕ್ಷಣೆ ನೀಡುವಲ್ಲಿ ಮಂಗಳೂರಿನ 2ನೇ ಕಾನೂನು ಸಲಹಾ ಕೇಂದ್ರ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಯ ಆ್ಯಂಟಿ ರಿಟ್ರೋವೈರಲ್‌ ಥೆರಪಿ (ಎಆರ್‌ಟಿ) ಕೇಂದ್ರದಲ್ಲಿ ಆರಂಭಗೊಂಡಿದೆ. ಸಂಬಂಧಪಟ್ಟ ರೋಗಿಗಳು ಪ್ರತಿ ಶನಿವಾರ ಕಾನೂನು ತಜ್ಞರಿಂದ ಮಾಹಿತಿ ಪಡೆಯಬಹುದು.

Advertisement

ನಗರದ ವೆನಾÉಕ್‌ ಆಸ್ಪತ್ರೆಯಲ್ಲಿ ಈಗಾಗಲೇ ಒಂದು ಕೇಂದ್ರ ಕಾರ್ಯಾಚರಿಸುತ್ತಿದೆ. ಕೆಎಂಸಿ ಆಸ್ಪತ್ರೆಯಲ್ಲಿ ರಾಜ್ಯ ಏಡ್ಸ್‌ ಪ್ರಿವೆನ್ಶನ್‌ ಸೊಸೈಟಿ (ಕೆಎಸ್‌ಎಪಿಎಸ್‌) ವತಿಯಿಂದ ಕಾರ್ಯಾಚರಿಸುತ್ತಿರುವ ಸಾರ್ವಜನಿಕ- ಖಾಸಗಿ ಸಹಭಾಗಿತ್ವ (ಪಿಪಿಪಿ)ದ ಏಕೈಕ ಎಆರ್‌ಟಿ ಕೇಂದ್ರದಲ್ಲಿ  ಸುಮಾರು ಒಂದು ಸಾವಿರ ರೋಗಿಗಳು ಔಷಧೋಪಚಾರ ಪಡೆಯುತ್ತಿದ್ದಾರೆ. ಆದರೆ ಇಲ್ಲಿ ಕಾನೂನು ಸಲಹೆ ಲಭ್ಯವಿರಲಿಲ್ಲ. ಈ ನಿಟ್ಟಿನಲ್ಲಿ ಕೆಎಂಸಿ ಆಸ್ಪತ್ರೆಯು ಕಾನೂನು ಸೇವಾ ಕೇಂದ್ರಕ್ಕಾಗಿ ಬೇಡಿಕೆ ಇಟ್ಟಿತ್ತು. 

ಪ್ರಸ್ತುತ ಬೇಡಿಕೆಗೆ ಸ್ಪಂದನೆ ಎಂಬಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ವಕೀಲರ ಸಂಘ, ಜಿಲ್ಲಾ ಏಡ್ಸ್‌ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ (ಡ್ಯಾಪ್ಕೋ) ಸಹಯೋಗದೊಂದಿಗೆ ಆಸ್ಪತ್ರೆಯ 2ನೇ ಮಹಡಿಯಲ್ಲಿ ಕೇಂದ್ರ ಕಾರ್ಯಾಚರಿಸಲಿದೆ. 

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಆನಂದ್‌ ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಹಿರಿಯ ಸಿವಿಲ್‌ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಅವರು ಕೇಂದ್ರವನ್ನು ಉದ್ಘಾಟಿಸಿದ್ದಾರೆ. 

ಬೆಳಗ್ಗೆ 10 ರಿಂದ 2ರ ವರೆಗೆ ಕೇಂದ್ರದಲ್ಲಿ  ಪ್ರತಿ ಶನಿವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಎಚ್‌ಐವಿ ರೋಗಿಗಳು ಕಾನೂನು ಸಲಹೆ ಪಡೆಯಬಹುದು. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಈಗಾಗಲೇ ತರಬೇತಿ ಪಡೆದ ಪ್ಯಾನಲ್‌ ನ್ಯಾಯವಾದಿ ಎಚ್‌.ವಿ. ರಾಘವೇಂದ್ರ ಅವರು ಸಲಹೆ ನೀಡುವರು.

Advertisement

ಕಾನೂನಿನ ರಕ್ಷಣೆ
ಎಚ್‌ಐವಿ ರೋಗಿಗಳೆಂದರೆ ಅವರಿಗೆ ಹೆಚ್ಚಿನ ಸಂದರ್ಭಗಳಲ್ಲಿ ಮಾನಸಿಕ, ದೈಹಿಕ ಕಿರುಕುಳ ಸಿಗುವ ಸಾಧ್ಯತೆ ಇರುತ್ತದೆ. ತಾವು ಕೆಲಸ ಮಾಡುವ ಸ್ಥಳ, ಸಾಮಾಜಿಕ ಬದುಕು ಸೇರಿದಂತೆ ತಮ್ಮ ಕುಟುಂಬದಿಂದಲೂ ತಾತ್ಸಾರಕ್ಕೆ ಗುರಿಯಾಗಿರಬಹುದು. ಎಷ್ಟೋ ಸಂದರ್ಭಗಳಲ್ಲಿ ಮನೆಯಿಂದ ಹೊರ ಹಾಕುವ ಘಟನೆಗಳೂ ನಡೆಯುತ್ತವೆ. ಈ ಸಂದರ್ಭದಲ್ಲಿ ರೋಗಿಗಳು ತಮಗೆ ಯಾರೂ ಇಲ್ಲ ಎಂದು ಖನ್ನತೆಗೆ ಒಳಗಾಗುತ್ತಾರೆ. ಜತೆಗೆ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಅಂಥವರಿಗೆ ಕಾನೂನಿನ ರಕ್ಷಣೆ ನೀಡಿ ಅವರ ಹಕ್ಕನ್ನು ಪಡೆದುಕೊಳ್ಳುವಲ್ಲಿ ಈ ಕೇಂದ್ರ ನೆರವಾಗಲಿದೆ.

ಜತೆಗೆ ಎಚ್‌ಐವಿ ತಪಾಸಣೆ, ಆಪ್ತ ಸಮಾಲೋಚನೆ, ಔಷಧ ಮೊದಲಾದ ಸೌಲಭ್ಯಗಳನ್ನು ಕೆಎಸ್‌ಎಪಿಎಸ್‌ ಉಚಿತವಾಗಿ ಒದಗಿಸಲಿದೆ. ಆಸ್ಪತ್ರೆಯ ಎಆರ್‌ಟಿ ಕೇಂದ್ರದ ನೋಡೆಲ್‌ ಅಧಿಕಾರಿ ಡಾ| ಜಾನ್‌ ರಾಂಪುರಂ ಅವರ ವಿಶೇಷ ಮುತುವರ್ಜಿಯಿಂದ ಈ ಕೇಂದ್ರ ಆಸ್ಪತ್ರೆಗೆ ಲಭಿಸಿದೆ. ಸಂಬಂಧಪಟ್ಟವರ ಇದರ ಪ್ರಯೋಜನ ಪಡೆಯಬಹುದು ಎನ್ನುತ್ತವೆ ಆಸ್ಪತ್ರೆಯ ಮೂಲಗಳು.

ಉಚಿತ ಕಾನೂನು ಸಲಹೆ 
ಆಸ್ಪತ್ರೆಯಲ್ಲಿ ಎಆರ್‌ಟಿ-ಐಸಿಟಿಸಿ ಕೇಂದ್ರಗಳು ಕಾರ್ಯಾಚರಿಸುತ್ತಿದ್ದರೂ, ರೋಗಿಗಳಿಗೆ ಕಾನೂನು ರಕ್ಷಣೆ ಒದಗಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕಾನೂನು ಸಲಹಾ ಕೇಂದ್ರವನ್ನು ಒದಗಿಸುವಂತೆ ನಾವು ಸಂಬಂಧಪಟ್ಟರಿಗೆ ಮನವಿ ಮಾಡಿದ್ದೆವು. ಇದೀಗ ಕೇಂದ್ರ ಉದ್ಘಾಟನೆಗೊಂಡಿದ್ದು, ಆಸಕ್ತರು ಉಚಿತ ಕಾನೂನು ಸಲಹೆ ಪಡೆಯಬಹುದು. 
– ಡಾ| ರಾಜಾರಾಮ್‌ ರೈ, ಸೀನಿಯರ್‌ ಮೆಡಿಕಲ್‌ ಆಫೀಸರ್‌ ಎಆರ್‌ಟಿ ಸೆಂಟರ್‌, ಕೆಎಂಸಿ ಅತ್ತಾವರ

Advertisement

Udayavani is now on Telegram. Click here to join our channel and stay updated with the latest news.

Next