ಬಾಗಲಕೋಟೆ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಕೃಷ್ಣೆಗೆ ಅಪಾರ ನೀರು ಹರಿದು ಬರುತ್ತಿದ್ದು, ಆಲಮಟ್ಟಿ ಜಲಾಶಯದ ಹಿನ್ನೀರು ಏರುತ್ತಿದೆ. ಹಿನ್ನೀರನ್ನು ಕೆರೆಗಳಿಗೆ ತುಂಬಿಸಲು ಸಣ್ಣ ನೀರಾವರಿ ಇಲಾಖೆ ಮಂಗಳವಾರದಿಂದ ಆರಂಭಿಸಿದೆ.
ನಗರ ಹೊರವಲಯದ ಐತಿಹಾಸಿಕ ಮುಚಖಂಡಿ ಕೆರೆಗೆ ನಿತ್ಯ 250 ಎಚ್ಪಿ ಸಾಮರ್ಥ್ಯದ 2 ಪಂಪಸೆಟ್‌ಗಳಿಂದ ಹಿನ್ನೀರು ಪಂಪಿಂಗ್ ಮಾಡಿ, 4.5 ಕಿ.ಮೀ ದೂರದ ಮುಚಖಂಡಿ ಕೆರೆಗೆ ತುಂಬಿಸಲಾಗುತ್ತಿದೆ. ಕಾರ್ಯಕ್ಕೆ ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ ಜಾಕ್‌ವೆಲ್ನಲ್ಲಿ ವಿದ್ಯುತ್ ಪಂಪಸೆಟ್‌ಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಒಟ್ಟು 721 ಎಕರೆ ವಿಸ್ತಾರ ಹೊಂದಿರುವ, 480 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುವ ಮುಚಖಂಡಿ ಕೆರೆ, 1882ರಲ್ಲಿ ಬ್ರಿಟಿರು ನಿರ್ಮಿಸಿದ್ದಾರೆ. ಈ ಕೆರೆ ತುಂಬಿಸಲು 2015-16ನೇ ಸಾಲಿನಲ್ಲಿ 12.40 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿತ್ತು. ಕಾಮಗಾರಿ ಪೂರ್ಣಗೊಂಡು, ಕೆರೆ ತುಂಬಿಸಲು 2017ರಲ್ಲಿ ಆರಂಭಿಸಲಾಗಿತ್ತು.
ಎರಡು ವರ್ಷಗಳಿಂದ ಕೆರೆ ತುಂಬಿಸಲು ಆರಂಭಿಸಿದರೂ ಕೆರೆಯಲ್ಲಿನ ಅತಿಯಾದ ಹೂಳು, ಸಮರ್ಪಕ ನಿರ್ವಹಣೆಯ ಕೊರತೆಯಿಂದ ಒಂದು ಬಾರಿಯೂ ಕೆರೆ ಪೂರ್ಣ ತುಂಬಿಸಲು ಆಗಿಲ್ಲ. 58 ಎಂಸಿಎಫ್‌ಟಿ (ಅರ್ಧ ಟಿಎಂಸಿ ಅಡಿ) ನೀರು ಸಂಗ್ರಹ ಸಾಮರ್ಥ್ಯ ಮುಚಖಂಡಿ ಕೆರೆ ಹೊಂದಿದ್ದು, ಕೃತಕವಾಗಿ ನೀರು ತುಂಬಿಸುವ ಪ್ರಯತ್ನ ಅಷ್ಟು ಸುಲಭವಾಗಿ ಫಲಿಸಲ್ಲ ಎಂಬ ಮಾತು ಹಲವರಿಂದ ಕೇಳಿ ಬಂದಿದೆ. ಆದರೆ, ಕನಿಷ್ಠ ಪಕ್ಷ 12.40 ಕೋಟಿ ಖರ್ಚು ಮಾಡಿ, ಅರ್ಧ ಮಟ್ಟಿಗಾದರೂ ಕೆರೆ ತುಂಬಿಸಿದರೆ, ನವನಗರ ಹಾಗೂ ಸುತ್ತಲಿನ 9ರಿಂದ 11 ಹಳ್ಳಿಗಳಲ್ಲಿ ಅಂತರ್‌ಜಲ ಮಟ್ಟ ಹೆಚ್ಚುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಸದ್ಯಕ್ಕೆ ಮುಚಖಂಡಿ ಕೆರೆಗೆ ಅಳವಡಿಸಿರುವ ಪೈಪ್‌ಲೈನ್‌ಗಳನ್ನು ಬೃಹತ್ ಗಾತ್ರದ ಪೈಪ್ ಅಳವಡಿಸಿ, ಕೆರೆ ತುಂಬಿಸಬೇಕು. ಇದೊಂದು ದೊಡ್ಡ ಕೆರೆಯಾಗಿದ್ದು, ಈಗ ಅಳವಡಿಸಿರುವ ಪೈಪ್ ಚಿಕ್ಕದಾಗಿವೆ. ಹೀಗಾಗಿ ದೊಡ್ಡ ಪೈಪ್ ಅಳವಡಿಸಲು ಬಾಗಲಕೋಟೆ ಶಾಸಕ ಡಾ|ವೀರಣ್ಣ ಚರಂತಿಮಠ, ಸಣ್ಣ ನೀರಾವರಿ ಇಲಾಖೆ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ, ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ ಸಧ್ಯ ಈಗಿರುವ ವ್ಯವಸ್ಥೆಯಲ್ಲೇ ಕೆರೆ ತುಂಬಿಸಲು ಸಣ್ಣ ನೀರಾವರಿ ಇಲಾಖೆ ಆರಂಭಿಸಿದೆ.
ಶಿರೂರ ಜೋಡಿ ಕೆರೆ ತುಂಬಿಸಲೂ ಆರಂಭ: ತಾಲೂಕಿನ ಶಿರೂರ ಗ್ರಾಮದ ಜೋಡಿ ಕೆರೆ ತುಂಬಿಸಲು 2017ರಲ್ಲಿ 2.50 ಕೋಟಿ ವೆಚ್ಚದಲ್ಲಿ ಕೈಗೊಂಡ ಕೆರೆ ತುಂಬುವ ಯೋಜನೆಗೆ ಪ್ರಸಕ್ತ ವರ್ಷ ಹಿನ್ನೀರು ತುಂಬಿಸಲು ಮಂಗಳವಾರ ಚಾಲನೆ ನೀಡಲಾಯಿತು. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೋಮಶೇಖರ ಸಾವನ್, ಜೆಇ ಲಮಾಣಿ ಮುಂತಾದವರು ಶಿರೂರ ಕೆರೆ ತುಂಬಿಸುವ ಯೋಜನೆ ನಿರ್ವಹಣೆ ಪರಿಶೀಲಿಸಿದರು. ಐತಿಹಾಸಿಕ ಮುಚಖಂಡಿ ಕೆರೆ ಹಾಗೂ ಶಿರೂರ ಜೋಡಿ ಕೆರೆ ತುಂಬಿಸಲು ಕಳೆದ ವರ್ಷ ವಿಳಂಬ ಮಾಡಿರುವ ಕುರಿತು ಹಾಗೂ ಈ ಬಾರಿ ನಿಗದಿತ ಸಮಯಕ್ಕೆ ಆರಂಭಿಸುತ್ತಾರಾ? ಎಂಬ ವಿಷಯದ ಕುರಿತು ಉದಯವಾಣಿ ಕಳೆದ ಜು.12ರಂದು ಏರಿದ ಹಿನ್ನೀರು; ಕೆರೆ ತುಂಬಿಸೋದು ಯಾವಾಗ? ಎಂಬ ವಿಶೇಷ ವರದಿ ಪ್ರಕಟಿಸಿತ್ತು.