ಧಾರವಾಡ: ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಗುರುವಾರ ಚಾಲನೆ ದೊರೆತಿದೆ.
ಜಿಲ್ಲೆಯ 1957 ಶಿಕ್ಷಕರಿಂದ ಕೋರಿಕೆಯ ವರ್ಗಾವಣೆಗೆ ಅರ್ಜಿ ಬಂದಿದ್ದು, ಈ ಪೈಕಿ 20 ಶಿಕ್ಷಕರು ವೈದ್ಯಕೀಯ ಆಧಾರದ ಮೇಲೆ ಹಾಗೂ 50 ವಿಕಲಚೇತನ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದಾರೆ. ಉಳಿದವರು ಸಾಮಾನ್ಯ ವರ್ಗಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಮೂರು ದಿನಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ಆ. 12 ಹಾಗೂ 13ರಂದು ಕಡ್ಡಾಯ ವರ್ಗಾವಣೆ ನಡೆಯಲಿದೆ. ವರ್ಗಾವಣೆ ಮಾಹಿತಿಯನ್ನು ಶಿಕ್ಷಕರಿಗೆ ವೈಯಕ್ತಿಕವಾಗಿ ಮೊಬೈಲ್ಗೆ ನೀಡಲಾಗಿದೆ. ಜೊತೆಗೆ ವರ್ಗಾವಣೆ ಕೇಂದ್ರ ಹೊರಗಡೆಯೂ ಪ್ರದರ್ಶಿಸಲಾಗಿದೆ. ವರ್ಗಾವಣೆ ಪ್ರಕ್ರಿಯೆಯಲ್ಲಿ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ, ಎಸ್.ಎಂ. ಹುಡೇದಮನಿ, ಎಸ್.ಸಿ. ಕರಿಕಟ್ಟಿ, ವಿದ್ಯಾ ನಾಡಿಗೇರ, ಎ.ಎ. ಖಾಜಿ, ಯು.ಬಿ. ಬಸಾಪುರ ಹಾಗೂ ಜಿ.ಎನ್. ಮಠಪತಿ ಇದ್ದರು.
Advertisement
ಟಿಸಿಡಬ್ಲೂ ಶಾಲೆಯಲ್ಲಿ ಜಿಲ್ಲೆಯ ಒಳಗಿನ ವರ್ಗಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಡಿಡಿಪಿಐ ಗಜಾನನ ಮನ್ನಿಕೇರಿ ನೇತೃತ್ವದಲ್ಲಿ ಬೆಳಗ್ಗೆಯಿಂದ ಸಂಜೆ 8 ಗಂಟೆವರೆಗೆ ಪ್ರಕ್ರಿಯೆ ಕೈಗೊಂಡು 300 ಜನ ಶಿಕ್ಷಕರಿಗೆ ವರ್ಗಾವಣೆ ಆದೇಶಗಳನ್ನು ನೀಡಲಾಯಿತು.
10 ವರ್ಷ ಮೇಲ್ಪಟ್ಟು ನಗರ ಪ್ರದೇಶದಲ್ಲಿ ಕೆಲಸ ಮಾಡಿದ ಶಿಕ್ಷಕರನ್ನು ಕಡ್ಡಾಯವಾಗಿ ಈ ಪ್ರಕ್ರಿಯೆಯಲ್ಲಿ ವರ್ಗ ಮಾಡಲಾಗುವುದು. ಎಲ್ಲವೂ ಪಾರದರ್ಶಕತೆಯಿಂದ ನಡೆಯುತ್ತಿದ್ದು, ವರ್ಗಾವಣೆ ಸ್ಥಳ ಪಡೆದ ಕೂಡಲೇ ಆದೇಶ ಪ್ರತಿ ನೀಡಲಾಗುವುದು. ಆದೇಶ ಪಡೆದು ಮೂರು ದಿನಗಳಲ್ಲಿ ಹಾಜರಾಗಲು ಸೂಚನೆ ನೀಡಲಾಗಿದೆ. • ಗಜಾನನ ಮನ್ನಿಕೇರಿ, ಡಿಡಿಪಿಐ