Advertisement

ವಲಸೆ ಜನರ ನೋಂದಣಿ-ತಪಾಸಣೆ ಶುರು

01:04 PM May 05, 2020 | Suhan S |

ಧಾರವಾಡ: ಜಿಲ್ಲೆಯಿಂದ ರಾಜ್ಯದ ಇತರೆ ಸ್ಥಳಗಳಿಗೆ ತೆರಳ ಬಯಸುವ ವಲಸೆ ಕಾರ್ಮಿಕರು, ಪ್ರವಾಸಿಗರು, ಯಾತ್ರಿಗಳು ಹಾಗೂ ವಿದ್ಯಾರ್ಥಿಗಳಿಗೆ ಒಂದು ಬಾರಿ ಸ್ವಂತ ಸ್ಥಳಗಳಿಗೆ ತೆರಳಲು ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಶಹರಗಳ ನೂತನ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ನೋಂದಣಿ, ಆರೋಗ್ಯ ತಪಾಸಣೆ ಕಾರ್ಯ ಆರಂಭವಾಗಿದೆ.

Advertisement

ಧಾರವಾಡ ಶಹರದ ಹೊಸ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದ ಡಿಸಿ ದೀಪಾ ಚೋಳನ್‌, ಸಾಮಾಜಿಕ ಅಂತರ ನಿಯಮದಡಿ ಒಂದು ಬಸ್ಸಿನಲ್ಲಿ 30 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ನಿಗದಿತ ಮಾರ್ಗಗಳಲ್ಲಿ ಕನಿಷ್ಠ 30 ಜನ ಪ್ರಯಾಣಿಕ ನೋಂದಣಿಯಾದ ನಂತರ ಆದ್ಯತಾನುಸಾರ ವೈದ್ಯಕೀಯ ತಪಾಸಣೆ ಮಾಡಿ, ಚಾಲಕರ ಮೂಲಕ ಒಂದು ಪಟ್ಟಿಯನ್ನು ಪ್ರಯಾಣಿಕರು ತೆರಳುವ ಜಿಲ್ಲೆಗೆ ಕಳುಹಿಸಲು ಸೂಚಿಸಿದರು.

ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಹಡಗಲಿ ಗ್ರಾಮಕ್ಕೆ ತೆರಳಬೇಕಿರುವ ಸುಮಾರು 20ಕ್ಕೂ ಹೆಚ್ಚು ಕಾರ್ಮಿಕರು ಲಾಕ್‌ಡೌನ್‌ ಜಾರಿಯಾದಾಗಿನಿಂದ ನಿಗದಿ ಗ್ರಾಮದಲ್ಲಿಯೇ ತಂಗಿದ್ದಾರೆ. ಅವರ ಪ್ರತಿನಿಧಿ ಮೋಹನ ಗಲಗಲಿ ಸ್ವತಃ ಜಿಲ್ಲಾಧಿಕಾರಿಗಳನ್ನು ಕಂಡು ತಮ್ಮ ಅಹವಾಲು ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಕೂಡಲೇ ಕಲಬುರ್ಗಿ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಕಲ್ಪಿಸಲು ಸೂಚಿಸಿದರು.

ಜಿಲ್ಲಾ ಆರ್‌ಸಿಎಚ್‌ ಅ ಧಿಕಾರಿ ಡಾ| ಎಸ್‌.ಎಂ. ಹೊನಕೇರಿ ಮಾತನಾಡಿ, ಪ್ರಯಾಣಿಕರೆಲ್ಲರನ್ನೂ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ. ಪ್ರಯಾಣಿಕರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಈ ಸೌಕರ್ಯಗಳನ್ನು ಸದುಪಯೋಗ ಮಾಡಿಕೊಳ್ಳಲು ಮನವಿ ಮಾಡಿದರು. ಎನ್‌.ಆರ್‌. ಪುರುಷೋತ್ತಮ, ಸಂತೋಷ ಬಿರಾದಾರ, ಮಾರಿಕಾಂಬಾ, ಅಶೋಕ ಬಾಳಿಗಟ್ಟಿ, ಬಸವಲಿಂಗಪ್ಪ ಬೀಡಿ ಇದ್ದರು.

ಇನ್ನೂ ಹುಬ್ಬಳ್ಳಿ ನೂತನ ಬಸ್‌ ನಿಲ್ದಾಣದಲ್ಲಿ ಉಪವಿಭಾಗಾಧಿ ಕಾರಿ ಮಹಮದ್‌ ಜುಬೇರ್‌, ತಹಶೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ವಾಕರಸಾಸಂ ಅ ಧಿಕಾರಿಗಳಾದ ಎಚ್‌.ಆರ್‌. ರಾಮನಗೌಡರ, ಅಶೋಕ ಪಾಟೀಲ ಮತ್ತಿತರರು ಹೊರ ಜಿಲ್ಲೆಗಳ ಪ್ರಯಾಣಿಕರನ್ನು ಕಳುಹಿಸುವ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

Advertisement

5ವರೆಗೆ ಸೌಲಭ್ಯ : ಕೋವಿಡ್‌ ನಿಯಂತ್ರಣದ ಲಾಕ್‌ಡೌನ್‌ ಕಾರಣದಿಂದ ಸ್ಥಗಿತವಾಗಿರುವ ವಲಸೆ ಕಾರ್ಮಿಕರು, ಯಾತ್ರಿಗಳು, ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಇತರರು ರಾಜ್ಯದೊಳಗಿನ ಅಂತರ ಜಿಲ್ಲೆಗಳಿಗೆ ಒಂದು ಬಾರಿ, ಒಂದು ದಿನ, ಒಂದು ಮಾರ್ಗದಲ್ಲಿ ತೆರಳಲು ಅವಕಾಶ ಕಲ್ಪಿಸಲಾಗಿದೆ ಎಂದು ಡಿಸಿ ದೀಪಾ ಚೋಳನ್‌ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಲಾಕ್‌ ಡೌನ್‌ನಿಂದ ಅನ್ಯ ಸ್ಥಳಗಳಲ್ಲಿರುವ ಜನರಿಗೆ ಅವರ ಸ್ವಂತ ಸ್ಥಳಗಳನ್ನು ತಲುಪಲು ಒಂದು ಬಾರಿ, ಒಂದು ದಿನ, ಒಂದು ಮಾರ್ಗದ (One Time, One Day, One way) ಪರವಾನಗಿ ನೀಡಲು ಅವಕಾಶವಿದೆ. ಮೇ 5ರ ವರೆಗೆ ಈ ಸೌಲಭ್ಯವಿದೆ. ಜನರು ಕೂಡಲೇ ಹುಬ್ಬಳ್ಳಿ ಅಥವಾ ಧಾರವಾಡ ಹೊಸ ಬಸ್‌ ನಿಲ್ದಾಣಗಳಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು. ಅಥವಾ www.supportdharwad.in ವೆಬ್‌ಸೈಟ್‌ ಮೂಲಕ ಅಥವಾ ಜಿಲ್ಲಾಡಳಿತದ ಸಹಾಯವಾಣಿ 1077 ಕರೆ ಮಾಡಿ ಇಲ್ಲವೇ ವಾಟ್ಸ್‌ಆ್ಯಪ್‌ ಸಂಖ್ಯೆಗಳಾದ 9449847646, 9449847641 ಸಂದೇಶ ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next