Advertisement

ಭಿಕ್ಷುಕರು-ಅಪರಿಚಿತರ ಮೇಲೆ ಹಲ್ಲೆ

04:51 PM May 21, 2018 | Team Udayavani |

ವಾಡಿ: ಪಟ್ಟಣ ಸೇರಿದಂತೆ ಸುತ್ತಲ ಗ್ರಾಮಗಳಲ್ಲಿ ಮಕ್ಕಳ ಕಳ್ಳರು ಕಾಲಿಟ್ಟಿದ್ದಾರೆ ಎಂಬ ವದಂತಿ ದಟ್ಟವಾಗಿ ಹರಡಿಕೊಂಡಿದ್ದು, ಗ್ರಾಮಸ್ಥರು ನಿದ್ದೆಗೆಟ್ಟು ರಾತ್ರಿ ಗಸ್ತು ತಿರುಗುತ್ತಿದ್ದಾರೆ.

Advertisement

ಗುರುಮಠಕಲ್‌ನಲ್ಲಿ ಪೊಲೀಸರು ನಾಲ್ವರು ಮಕ್ಕಳು ಕಳ್ಳರನ್ನು ಹಿಡಿದಿದ್ದಾರಂತೆ. ರಾಯಚೂರಿನಲ್ಲಿ ಒಬ್ಬ ಕಳ್ಳನನ್ನು ಜನರು ಗಿಡಕ್ಕೆ ಕಟ್ಟಿ ಥಳಿಸಿದ್ದಾರಂತೆ. ಯಾದಗಿರಿಯಲ್ಲೂ ಕಳ್ಳರು ತಿರುಗುತ್ತಿದ್ದಾರಂತೆ. ನಾಲವಾರ ಗ್ರಾಮದಲ್ಲೂ ಒಬ್ಬ ಕಳ್ಳನನ್ನು ಹಿಡಿದು ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರಂತೆ. ಕಳ್ಳರು ಮಕ್ಕಳ ದೇಹವನ್ನು ಸುಲಿಯುತ್ತಿರುವ ಫೂಟೊಗಳು ವ್ಯಾಟ್ಸಾಪ್‌ ಗಳಲ್ಲಿ ಬಂದಿವೆ. ನಿಮ್ಮೂರಿಗೂ ಕಾಲಿಡಬಹುದು. ಯಾರಾದರೂ ಅಪರಿಚಿತರು ಕಂಡರೆ ಸುಮ್ಮನೆ ಬಿಡಬೇಡಿ. ಹೀಗೆ ಬಾಯಿಯಿಂದ ಬಾಯಿಗೆ ಹರಿದಾಡಿದ ಅಂತೆ ಕಂತೆಗಳ ಕಟ್ಟುಕಥೆಯ ವದಂತಿಯನ್ನು ನಂಬಿ ಗ್ರಾಮೀಣ ಜನರು ಭಯಭೀತರಾಗಿದ್ದಾರೆ.

ಕಳೆದ ಮೂರ್‍ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಕಳ್ಳರದ್ದೇ ವದಂತಿ ಹರಿದಾಡುತ್ತಿದೆ.
ಪಟ್ಟಣ ಸೇರಿದಂತೆ ನಾಲವಾರ, ಲಾಡ್ಲಾಪುರ, ಸನ್ನತಿ, ಕೊಲ್ಲೂರ, ರಾವೂರ, ಕಮರವಾಡಿ, ಹಳಕರ್ಟಿ
ಹಾಗೂ ಚಿತ್ತಾಪುರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಗಲು ರಾತ್ರಿ ಮಕ್ಕಳ ಕಳ್ಳರದ್ದೇ ಚರ್ಚೆಯಾಗುತ್ತಿದೆ.

ಪಟ್ಟಣದಲ್ಲಿ ಎಸಿಸಿ ಸಿಮೆಂಟ್‌ ಕಂಪನಿಯಿದೆ ಎಂಬ ಕಾರಣಕ್ಕೆ ದೇಶದ ವಿವಿಧ ರಾಜ್ಯಗಳಿಂದ ಗುತ್ತಿಗೆ ಕಾರ್ಮಿಕರು ಬಂದು ಹೋಗುತ್ತಾರೆ. ತರಕಾರಿ ತರಲು ಮಾರುಕಟ್ಟೆಗೆ ಬರುವ ಗುಜರಾತಿ, ಬಂಗಾಳಿ, ಬಿಹಾರ ಹಾಗೂ ಉತ್ತರ ಪ್ರದೇಶದ ಜನರನ್ನು ಸ್ಥಳಿಯರು ಮಕ್ಕಳ ಕಳ್ಳರೆಂದು ಭಾವಿಸಿ ಹಲ್ಲೆ ಮಾಡಲು ಮುಂದಾಗುತ್ತಿರುವ ಪ್ರಸಂಗಗಳು ಘಟಿಸಿವೆ. ಚಿಂದಿ ಆಯುವವರನ್ನು ಅನುಮಾನದಿಂದ ಕಂಡು ಜನರು ಸಾಮೂಹಿಕವಾಗಿ ಹಲ್ಲೆಗೆ ಮುಂದಾ ಗುತ್ತಿದ್ದಾರೆ. ಒಟ್ಟಾರೆ ಅಕ್ಷರಸ್ಥರು ಹಾಗೂ ಅನಕ್ಷರಸ್ಥರು ವದಂತಿಗೆ ಬೆಚ್ಚಿಬಿದ್ದಿದ್ದಾರೆ. ಗ್ರಾಮೀಣ ಭಾಗದಲ್ಲಿ ಮನೆಯ ಹೊರಗೆ ಯಾರೂ ಮಲಗುತ್ತಿಲ್ಲ. ಮಕ್ಕಳಿಗೆ ಹೊರಗೆ ಬಿಡಲು ಹೆದರುತ್ತಿದ್ದಾರೆ. ಯುವಕರು ರಾತ್ರಿ ವೇಳೆ ಕೈಯಲ್ಲಿ ಬಡಿಗೆ, ಕುಡಗೋಲು, ಕೊಡಲಿ, ಕತ್ತಿ ಹಿಡಿದುಕೊಂಡು ಗಸ್ತು ತಿರುಗುತ್ತಿರುವ ಬೆಳವಣಿಗೆ ಪೊಲೀಸರ ನಿದ್ದೆಗೆಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next