Advertisement

ಥಿಯೇಟರ್‌ ತೆರೆಯುವ ಮುನ್ನ…ಓಪನ್‌ ಟಾಕ್‌

03:39 PM Aug 28, 2020 | Suhan S |

ಐದಾರು ತಿಂಗಳಿನಿಂದ ಸ್ಥಗಿತಗೊಂಡಿದ್ದ ಒಂದೊಂದೇ ಕ್ಷೇತ್ರಗಳು ಮತ್ತೆ ತೆರೆಯುತ್ತಿವೆ. ಬದಲಾವಣೆ ಜಗದ ನಿಯಮ ಎಂಬಂತೆ ಒಂದಷ್ಟು ಬದಲಾವಣೆಗಳೊಂದಿಗೆ ಕಾರ್ಯಾರಂಭ ಮಾಡಲಾರಂಭಿಸಿವೆ. ಇದರಲ್ಲಿ ಕನ್ನಡ ಚಿತ್ರರಂಗ ಕೂಡಾ ಸೇರಿದೆ. ಕೋವಿಡ್ ಹೊಡೆತಕ್ಕೆ ನಲುಗಿ ಹೋಗಿದ್ದ ಚಿತ್ರರಂಗ ಈಗ ಚೇತರಿಕೆ ಕಾಣುತ್ತಿದೆ. ಅರ್ಧಕ್ಕೆ ನಿಂತ ಸಿನಿಮಾಗಳ ಚಿತ್ರೀಕರಣ ಒಂದೆಡೆ ಆರಂಭವಾದರೆ, ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ. ಮತ್ತೆ ಸಿನಿಮಾ ಮಂದಿ ತಮ್ಮದಿನನಿತ್ಯದ ಕೆಲಸಗಳನ್ನು ಆರಂಭಿಸಿದ್ದಾರೆ. ಚಿತ್ರೀಕರಣವೇನೋ ಆರಂಭವಾಗಿದೆ.

Advertisement

ಆದರೆ, ಸಿನಿಮಾ ರಂಗದ ಮುಖ್ಯಜೀವಾಳವಾಗಿರುವ ಚಿತ್ರಮಂದಿರಗಳು ಯಾವಾಗ ತೆರೆಯುತ್ತವೆ ಎಂಬ ಪ್ರಶ್ನೆಯೊಂದು ಸಿನಿಪ್ರೇಮಿಗಳನ್ನು ಕಾಡುತ್ತಿದೆ. ಆದರೆ, ಈ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗುವ ಸಾಧ್ಯತೆ ಇದೆ. ಸೆಪ್ಟೆಂಬರ್‌ನಲ್ಲಿ ಚಿತ್ರಮಂದಿರಗಳು ತೆರೆಯುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ. ಚಿತ್ರಮಂದಿರಗಳು ತೆರೆದರೆ ಅಲ್ಲಿಗೆ ಚಿತ್ರರಂಗ ಮತ್ತೆ ತನ್ನ ಮೂಲಸ್ಥಿತಿಗೆ ಬಂದಂತಾಗುತ್ತದೆ. ಸಿನಿಮಾಗಳು ಬಿಡುಗಡೆಯಾಗಿ, ನಿರ್ಮಾಪಕರು ಒಂದಷ್ಟು ಲಾಭ ಕಂಡಾಗ ಮಾತ್ರ ಚಿತ್ರರಂಗದ ಇತರ ಚಟುವಟಿಕೆಗಳು ಮುಂದುವರೆಯಲು ಸಾಧ್ಯ. ಎಲ್ಲಾ ಓಕೆ,ಏಕಾಏಕಿ ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕರೆ ಚಿತ್ರಮಂದಿರದ ಮಾಲೀಕರು ಸಿದ್ಧರಿದ್ದಾರಾ, ಚಿತ್ರಮಂದಿರಗಳ ಸ್ಥಿತಿಗತಿ ಹೇಗಿದೆ ಎಂಬಪ್ರಶ್ನೆ ಸಹಜವಾಗಿಯೇ ಬರುತ್ತದೆ. ಚಿತ್ರಪ್ರದರ್ಶನ ನಡೆಯೋದು ತಾಂತ್ರಿಕತೆಯೊಂದಿಗೆ. ಆದರೆ, ಕಳೆದ ಆರು ತಿಂಗಳಿನಿಂದ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಸ್ತಬ್ಧವಾಗಿದೆ.

ಹೀಗಿರುವಾಗ ಏಕಾಏಕಿ ಚಿತ್ರಮಂದಿರ ತೆರೆಯಲು ಅನುಮತಿ ಸಿಕ್ಕರೆ, ತೆರೆಯಲು ಸಾಧ್ಯನಾ, ಅದಕ್ಕೆ ಯಾವ ಮಟ್ಟಿನ ಪೂರ್ವತಯಾರಿ ಬೇಕು ಎಂಬ ಪ್ರಶ್ನೆಯೂ ಇದೆ. ಜೊತೆಗೆ ಚಿತ್ರಮಂದಿರಗಳಲ್ಲಿ ಶುಚಿತ್ವ ಕಾಪಾಡೋದು ಮುಖ್ಯ. ಸಹಜವಾಗಿಯೇ ಬೆಂಗಳೂರಿನ ಒಂದಷ್ಟು ಚಿತ್ರಮಂದಿರಗಳ ನಿರ್ವಹಣೆ ಕುರಿತು ಸಿನಿಮಾ ಪ್ರೇಕ್ಷಕರಲ್ಲಿ ಬೇಸರವಿದೆ. ಸೀಟು ಸರಿಯಿಲ್ಲ, ಇಲಿ, ತಿಗಣೆ ಕಾಟ, ದುರ್ವಾಸನೆ … ಹೀಗೆ ಸಾಕಷ್ಟು ದೂರುಗಳು ಈ ಹಿಂದಿನಿಂದಲೂ ಕೇಳಿಬರುತ್ತಿತ್ತು. ಆದರೆ, ಈಗ ಬರೋಬ್ಬರಿ ಆರು ತಿಂಗಳು ಪ್ರದರ್ಶನವಿಲ್ಲದ ಚಿತ್ರಮಂದಿರಗಳ ಪರಿಸ್ಥಿತಿ ಹೇಗಾಗಿರಬೇಡ ಹೇಳಿ. ಇದರ ಸಮರ್ಪಕ ನಿರ್ವಹಣೆಯ ನಂತರವಷ್ಟೇ ಮರು ಪ್ರದರ್ಶನ ಸಾಧ್ಯ. ಚಿತ್ರಮಂದಿರಗಳ ಮಾಲೀಕರು ಇದಕ್ಕೆ ಏನೇನು ಕ್ರಮ ಕೈಗೊಂಡಿದ್ದಾರೆ, ಮುಂದಿನ ನಿಯಮಗಳು ಯಾವ ರೀತಿ ಇರುತ್ತದೆ ಎಂಬ ಪ್ರಶ್ನೆ ಸಹಜ. ಚಿತ್ರಮಂದಿರಗಳ ಮಾಲೀಕರು ಕೂಡಾ ಮಾನಸಿಕವಾಗಿ ಚಿತ್ರಪ್ರದರ್ಶನಕ್ಕೆ ಸಿದ್ಧರಾಗುತ್ತಿದ್ದಾರೆ. ಆದರೆ, ಏಕಾಏಕಿ ಅನುಮತಿ ಸಿಕ್ಕ ಬೆನ್ನಲ್ಲೇ ಚಿತ್ರಪ್ರದರ್ಶನ ಆರಂಭಿಸೋದು ಕೂಡಾ ಕಷ್ಟಎಂಬುದು ಚಿತ್ರಮಂದಿರಗಳ ಮಾಲೀಕರ ಮಾತು.  ಜೊತೆಗೆಸರ್ಕಾರ ಸೂಚಿಸುವ ಮಾರ್ಗಸೂಚಿಯೊಂದಿಗೆ ಪ್ರದರ್ಶನ ಆರಂಭಿಸಲು ನಾವು ಸಿದ್ಧ ಎಂಬ ಉತ್ತರ ಕೂಡಾ ಚಿತ್ರಮಂದಿರ ಮಾಲೀಕರಿಂದ ಬರುತ್ತಿದೆ.­

ಸರ್ಕಾರ ಚಿತ್ರಗಳ ಪ್ರದರ್ಶನಕ್ಕೆ ಒಂದಷ್ಟು ಷರತ್ತುಬದ್ದ ಅನುಮತಿ ನೀಡಬಹುದು ಎಂಬ ನಿರೀಕ್ಷೆಯಿದೆ. ಹಾಗೇನಾದರೂ ಆದರೆ ಆ ಷರತ್ತುಗಳ ಅನ್ವಯ ಸಿನಿಮಾಗಳ ಪ್ರದರ್ಶನಕ್ಕೆ ನಾವು  ಸಿದ್ಧರಿದ್ದೇವೆ. ಆದರೆ ನನಗನಿಸಿದಂತೆ, ಸಿನಿಮಾಗಳ ಪ್ರದರ್ಶನ ಅವಕಾಶ ನೀಡಿದರೂ, ತಕ್ಷಣ ಯಾರೂ ತಮ್ಮ ಸಿನಿಮಾಗಳ ಬಿಡುಗಡೆಗೆ ಮುಂದೆ ಬರುವುದಿಲ್ಲ. ಒಂದು ಸಿನಿಮಾ ರಿಲೀಸ್‌ ಮಾಡಬೇಕೆಂದ್ರೆ ಕನಿಷ್ಟ ಎರಡು – ಮೂರು ವಾರಗಳ ಪ್ಲಾನಿಂಗ್‌,ತಯಾರಿ ಬೇಕಾಗುತ್ತದೆ. ಅದೂ ಈ ವೇಳೆ ಜನ ಕೊರೊನಾಆತಂಕದಲ್ಲಿರುವುದರಿಂದ, ಥಿಯೇಟರ್‌ ಓಪನ್‌ ಆದ ಕೂಡಲೆ ಬಂದೇ ಬರುತ್ತಾರೆ ಎಂದೂ ಹೇಳಲಾಗದು. ಅದರಲ್ಲೂ ಮೊದಲು ಯಾವ ಸಿನಿಮಾಗಳು ಮೊದಲು ಬಿಡುಗಡೆ ಯಾಗುತ್ತವೆ ಅನ್ನೋದು ಕೂಡ ಮುಖ್ಯವಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್‌ಗಳು ಓಪನ್‌ ಆದ್ರೂ, ಮುಂದಿನ ಮೂರು-ನಾಲ್ಕು ತಿಂಗಳ ಸಮಯ ಈಗಾಗಲೇ ಆಗಿರುವ ನಷ್ಟ ಭರಿಸಲು ಬೇಕಾಗುತ್ತದೆ. – ಕೆ.ವಿ ಚಂದ್ರಶೇಖರ್‌, ಅಧ್ಯಕ್ಷರು ಚಲನಚಿತ್ರ ಪ್ರದರ್ಶಕರ ಸಂಘ

ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ಕೊಟ್ಟರೂ, ಥಿಯೇಟರ್‌ – ಮಲ್ಟಿಫ್ಲೆಕ್ಸ್‌ಗಳಿಗೆ ಜನ ಬಂದು ಮೊದಲಿನಂತಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, ಶೂಟಿಂಗ್‌ಗೆ ಅನುಮತಿ ಕೊಟ್ಟಿರುವಂತೆ ಥಿಯೇಟರ್‌, ಮಲ್ಟಿಫ್ಲೆಕ್ಸ್‌ ತೆರೆಯಲು ಆದಷ್ಟು ಬೇಗಅನುಮತಿ ಕೊಡುವುದು ಒಳ್ಳೆಯದು. ಯಾಕೆಂದರೆ, ಇದನ್ನೇ ನಂಬಿಕೊಂಡು ನೂರಾರು ಕುಟುಂಬಗಳು ಬದುಕುತ್ತಿವೆ. ಕಳೆದ ಆರು ತಿಂಗಳಿನಿಂದ ಸಿನಿಮಾಗಳ ಪ್ರದರ್ಶನವಿಲ್ಲದೆ ಥಿಯೇಟರ್‌ಗಳ ಮಾಲೀಕರು, ನೌಕರರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ನಯಾಪೈಸೆ ಕಲೆಕ್ಷನ್‌ ಇಲ್ಲದಿದ್ದರೂ, ಕರೆಂಟ್‌ ಬಿಲ್‌, ಟ್ಯಾಕ್ಸ್‌,ಸ್ಯಾಲರಿ, ಹೀಗೆ ಒಂದಷ್ಟು ಕನಿಷ್ಟ ನಿರ್ವಹಣಾ ಖರ್ಚುಗಳನ್ನು ಥಿಯೇಟರ್‌ ಮಾಲೀಕರು ಮಾಡಲೇಬೇಕು. ಕಲೆಕ್ಷನ್‌ ಇಲ್ಲದೆ ಇದೆಲ್ಲವನ್ನು ಭರಿಸುವುದು ಎಂಥವರಿಗೂ ಕಷ್ಟ. ಇದೇ ಪರಿಸ್ಥಿತಿ ಹೀಗೆ ಮುಂದುವರೆದರೆ, ಸಂಪೂರ್ಣವಾಗಿ ಥಿಯೇಟರ್‌ಗಳನ್ನುಮುಚ್ಚುವ ಸ್ಥಿತಿ ಬಂದ್ರೂ ಬರಬಹುದು. ಹಾಗಾಗಿ ಸರ್ಕಾರ ಆದಷ್ಟು ಎಲ್ಲರಿಗೂ ಅನುಕೂಲವಾಗುವಂಥ ನಿರ್ಧಾರ ಕೈಗೊಳ್ಳಬೇಕು. ಈ ಬಗ್ಗೆ ಪ್ರದರ್ಶಕರು ಒಟ್ಟಾಗಿ ಸೇರಿ ಒಂದು ನಿರ್ಧಾರಕ್ಕೆ ಬರಲಿದ್ದೇವೆ’ – ನರಸಿಂಹಲು, ಪ್ರದರ್ಶಕರು

Advertisement

 

 – ರವಿ ರೈ

Advertisement

Udayavani is now on Telegram. Click here to join our channel and stay updated with the latest news.

Next