ಬೆಂಗಳೂರು: ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಮತ್ತು ಉತ್ಪತ್ತಿಯಾಗುತ್ತಿರುವ ತ್ಯಾಜ್ಯದಲ್ಲಿ ಶೇ.50ರಷ್ಟನ್ನು ವಿಂಗಡಣೆ ಮಾಡುತ್ತಿರುವ ದೇಶದ ಮೊದಲ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ.
ಪಾಲಿಕೆಯ ವ್ಯಾಪ್ತಿಯಲ್ಲಿ ನಿತ್ಯ ಉತ್ಪತ್ತಿಯಾಗುವ ಸುಮಾರು 4 ಸಾವಿರ ಟನ್ ತ್ಯಾಜ್ಯದ ಪೈಕಿ ಶೇ.50ರಷ್ಟು ತ್ಯಾಜ್ಯ ವಿಂಗಡಣೆಯಾಗುತ್ತಿದೆ. ಏಪ್ರಿಲ್ 4ರ ವರೆಗಿನ ಅಂಕಿ ಅಂಶಗಳ ಪ್ರಕಾರ ನಿತ್ಯ ನಗರದಲ್ಲಿ 4039 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದ್ದು, 2057 ಟನ್ ವಿಂಗಡಣೆಯಾಗುತ್ತಿದೆ ಎಂಬ ಮಾಹಿತಿಯನ್ನು ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಸಫìರಾಜ್ ಖಾನ್ ನೀಡಿದ್ದಾರೆ.
ಪಾಲಿಕೆಯಿಂದ ನಿತ್ಯ ಸಂಗ್ರಹಿಸುತ್ತಿರುವ ನಾಲ್ಕು ಸಾವಿರ ಟನ್ ಪೈಕಿ ವಿಂಗಡಿತ 2057 ಟನ್‌ಗಳಲ್ಲಿ 1677 ಟನ್‌ಗಳ ಹಸಿ ಹಾಗೂ 362 ಟನ್ ಒಣ ತ್ಯಾಜ್ಯವಿದೆ. ಇದರೊಂದಿಗೆ ದೇಶದಲ್ಲಿ ಮೊದಲ ಬಾರಿಗೆ ನಗರದಲ್ಲಿ ಪ್ರತ್ಯೇಕವಾಗಿ ಸ್ಯಾನಿಟರಿ ತ್ಯಾಜ್ಯವನ್ನು ಸಂಗ್ರಹ ಮಾಡಲಾಗುತ್ತಿದ್ದು, ಏ.4ರ ವೇಳೆಗೆ ಪಾಲಿಕೆಯ ವ್ಯಾಪ್ತಿಯಲ್ಲಿ 20 ಟನ್ ಸ್ಯಾನಿಟರಿ ತ್ಯಾಜ್ಯ ಸಂಗ್ರಹಿಸಲಾಗಿದೆ ಎಂದರು.
ತ್ಯಾಜ್ಯ ವಿಂಗಡಣೆ ಹೆಚ್ಚಾದಂತೆ ನಗರದಲ್ಲಿ ಮಿಶ್ರಿತ ತ್ಯಾಜ್ಯ ಪ್ರಮಾಣ ಕಡಿಮೆಯಾಗುತ್ತಿದ್ದು, ಕ್ವಾರಿಗಳ ಮೇಲಿನ ಒತ್ತಡ ಕಡಿಮೆಯಾಗಿದೆ. ಪ್ರಸ್ತುತ ಸಂದರ್ಭದಲ್ಲಿ ನಿತ್ಯ 1600 ರಿಂದ 1800 ಟನ್ ಮಿಶ್ರಿತ ತ್ಯಾಜ್ಯ ಮಾತ್ರ ಕ್ವಾರಿಗಳಿಗೆ ಹೋಗುತ್ತಿದ್ದು, ಕ್ವಾರಿಗಳ ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಾಗರಿಕರು ವಿಂಗಡಿಸಿ ನೀಡಿದ ತ್ಯಾಜ್ಯವನ್ನು ಪೌರಕಾರ್ಮಿಕರು ಮಿಶ್ರಣ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿದ್ದು, ಈ ಕುರಿತು ಪೌರಕಾರ್ಮಿಕರು ಹಾಗೂ ಗುತ್ತಿಗೆದಾರರುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ತರಬೇತಿ ಕಾರ್ಯಕ್ರಮಗಳ ಮೂಲಕ ಪೌರಕಾರ್ಮಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಖಾನ್ ತಿಳಿಸಿದ್ದಾರೆ.
ವಿಂಗಡಣೆಯಲ್ಲಿ ಯಲಹಂಕ ನಂ.1
ತ್ಯಾಜ್ಯ ವಿಂಗಡಣೆ ವಿಚಾರದಲ್ಲಿ ಯಲಹಂಕ ವಲಯ ಪ್ರಥಮ ಸ್ಥಾನದಲ್ಲಿದ್ದು, ಏಪ್ರಿಲ್ ಮೊದಲ ವಾರದ ವೇಳೆಗೆ ವಲಯದಲ್ಲಿ ಶೇ.63ರಷ್ಟು ತ್ಯಾಜ್ಯ ವಿಂಗಡಣೆಯಾಗಿದೆ. ಉಳಿದಂತೆ ಎಲ್ಲ ವಲಯಗಳಲ್ಲಿ ಸರಾಸರಿ ಶೇ.50ರಷ್ಟು ತ್ಯಾಜ್ಯ ವಿಂಗಡಣೆಯಾಗುತ್ತಿದ್ದು, ಎಂಟು ವಲಯಗಳ ಪೈಕಿ ಪಶ್ಚಿಮ ವಲಯ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಕೇವಲ ಶೇ.46.8 ರಷ್ಟು ಮಾತ್ರ ತ್ಯಾಜ್ಯ ವಿಂಗಡಣೆಯಾಗುತ್ತಿದೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.