Advertisement

ಸರ್ಕಾರಿ ಪ್ರೌಢಶಾಲೇಲಿ ಟೆಕ್ನಾಲಜಿ ಪಾರ್ಕ್‌!

12:29 PM Feb 29, 2020 | Naveen |

ಬೀರೂರು: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ ಎಂಬ ಭಾವನೆಯಿಂದ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಾರೆ. ಆದರೆ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ನಿರೂಪಿಸಲು ಬಹಳಷ್ಟು ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿದೆ. ಆ ಪೈಕಿ ವಿಜ್ಞಾನ ಹೊರಾಂಗಣ ಉದ್ಯಾನವನವೂ ಒಂದಾಗಿದೆ.

Advertisement

ಸರ್ಕಾರ ಕೆಲವು ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಆ ಶಾಲೆಗಳಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಅಳವಡಿಸುತ್ತಿರುವ ವಿಜ್ಞಾನ ಹೊರಾಂಗಣ ಉದ್ಯಾನವನದ ಪರಿಕರಗಳು ಮಕ್ಕಳ ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವುದರಲ್ಲಿ ಅನುಮಾನವೇ ಇಲ್ಲ. ಇದನ್ನು ಟೆಕ್ನಾಲಜಿ ಪಾರ್ಕ್‌ ಅಥವಾ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಪಾರ್ಕ್‌ ಎಂದು ಕರೆಯಲಾಗುತ್ತದೆ. ಇದನ್ನು ಆಸ್ತಿ ಆಧಾರಿತ ಅಭಿವೃದ್ಧಿ ಎಂದು ವ್ಯಾಖ್ಯಾನಿಸಲಾಗಿದೆ. ಅದು ಕಲಿಕೆಯ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ಈ ವಿಜ್ಞಾನ ಹೊರಾಂಗಣ ಉದ್ಯಾನವನವನ್ನು ರಾಜ್ಯದ ಕೇವಲ 10 ಶಾಲೆಗಳಿಗೆ ಮಾತ್ರ ಅಳವಡಿಸಲಾಗಿದೆ.

ಆ ಶಾಲೆಗಳಲ್ಲಿ ಬೀರೂರಿನ ಲಿಂಗದಹಳ್ಳಿ ರಸ್ತೆಯಲ್ಲಿರುವ ಮಾರ್ಗದ ಮಹದೇವಪ್ಪ ಸರ್ಕಾರಿ ಪ್ರೌಢಶಾಲೆಯೂ ಒಂದು ಎಂಬುದು ಹೆಮ್ಮೆಯ ಸಂಗತಿ. ಇದು ಬೀರೂರು ಶೈಕ್ಷಣಿಕ ವಲಯದಲ್ಲಿಯೇ ಮೊದಲ ಶಾಲೆಯಾಗಿದೆ.

ಶಾಲೆಯ ಆವರಣದಲ್ಲಿ ಮರಗಳ ತಂಪಾದ ನೆರಳಿನ ಮಧ್ಯೆ ಭೌತಶಾಸ್ತ್ರದ ಪರಿಕಲ್ಪನೆಗಳ ಪ್ರಾಯೋಗಿಕ ಪರಿಕರಗಳು ಸ್ಥಾಪನೆಯಾಗಿವೆ. ಇನ್ನೂ ಕೆಲವು ಪರಿಕರಗಳು ಅದಕ್ಕೆಂದೇ ಸಿದ್ಧವಾಗುತ್ತಿರುವ ಕೊಠಡಿಗಳಲ್ಲಿ ಸ್ಥಾಪಿಸಬೇಕಾಗಿದೆ. ಈ ವಿಜ್ಞಾನ ಪರಿಕರಗಳು ವೈಜ್ಞಾನಿಕ ಜ್ಞಾನ ಮತ್ತು ನಾವೀನ್ಯತೆಯ ಮೂಲಕ ಮಕ್ಕಳಲ್ಲಿ ತಂತ್ರಜ್ಞಾನದ ಅಭಿವೃದ್ಧಿಯನ್ನು ಪ್ರೇರೆಪಿಸುತ್ತದೆ.

ಇಂದಿನ ಬೆಳವಣಿಗೆ ಗಮನಿಸಿದರೆ ಬಹುಮುಖ್ಯವಾಗಿ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಲಿಯಾಗುವ ಪೋಷಕರಿಗೆ ಈ ವಿಷಯದ ಬಗ್ಗೆ ಉಲ್ಲೇಖ ಮಾಡಲೇಬೇಕಾಗಿದೆ. ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂ. ವ್ಯಯಿಸಿ ಮಕ್ಕಳನ್ನು ದಾಖಲು ಮಾಡಿದರೂ ಪೋಷಕರಲ್ಲಿ ನೆಮ್ಮದಿ ಇಲ್ಲ. ಪೋಷಕರ ಕೆಲಸದ ಒತ್ತಡದ ನಡುವೆಯೂ ಶಾಲೆಗೆ ಹೋಗಿ ಬಂದ ಮಕ್ಕಳಿಗೆ ಹೋಂ ವರ್ಕ್‌ ಕೂಡ ಪೋಷಕರೇ ಮಾಡಿಸುವಂತಾಗಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿನ ಸ್ಥಿತಿ ಸ್ವಲ್ಪ ವಿಭಿನ್ನ.

Advertisement

ಮಕ್ಕಳು ಓದಿ ಕಲಿಯುವುದಕ್ಕಿಂತ ತಮ್ಮ ವಿದ್ಯೆಯ ಅನುಭವದ ಆಧಾರದ ಮೇಲೆ ಕಲಿಯುವುದೇ ಹೆಚ್ಚು. ಸರ್ಕಾರಿ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಕಲಿಯುವ ಮಕ್ಕಳ ಬುದ್ದಿಮತ್ತೆ ಖಾಸಗಿ ಶಾಲೆಗಳ ಮಕ್ಕಳ ಬೌದ್ದಿಕ ಮಟ್ಟಕ್ಕಿಂತ ತುಸು ಹೆಚ್ಚೇ ಇರುತ್ತದೆ ಎನ್ನುವುದು ಹಲವು ಅಧ್ಯಯನಗಳ ಸಾರವಾಗಿದೆ. ಇಂದು ಅಂತಹ ಶಿಕ್ಷಣ ಮಕ್ಕಳಿಗೆ ಅಗತ್ಯವಾಗಿದೆ ಮತ್ತು ಇಂತಹ ವಿಷಯಾಧಾರಿತ ಶಿಕ್ಷಣ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬಹುಕಾಲ ಉಳಿಯುವಂತಹದ್ದಾಗಿದೆ.

ಸದ್ಯ ತಂತ್ರಜ್ಞಾನ ಪಾರ್ಕ್‌ನಲ್ಲಿ ನ್ಯೂಟನ್‌ ನ ಮೂರನೇ ನಿಯಮ, ದ್ರವ್ಯರಾಶಿ ಮತ್ತು ಜಡತ್ವ, ರಾಟೆಗಳಿಂದ ನಾದ ಸ್ವರಗಳು, ಪ್ರತಿಧ್ವನಿ ಕೊಳವೆ, ದ್ವಿಕೋನ, ಕನ್ನಡಿಯೊಂದಿಗೆ ಆಟ, ಕೋನೀಯ ಚಲನ ಪರಿಮಾಣ, ಘರ್ಷಣೆ ಮತ್ತು ಜವ, ನ್ಯೂಟನ್‌ನ ತೊಟ್ಟಿಲು, ತರಂಗ ಚಲನೆ, ಗೈರೋಸ್ಕೋಪ್‌, ಲಿಸಶೂ ಚಿತ್ರಗಳು, ಸನ್ನೆ, ಪರಿದರ್ಶಕ ಹೀಗೆ ಹತ್ತಾರು ಪರಿಕರಗಳು ಸ್ಥಾಪಿತವಾಗಿವೆ. ಇನ್ನೂ ಅನೇಕ ಪರಿಕರಗಳು ಕೊಠಡಿಯ ಒಳಭಾಗದಲ್ಲಿ ಸ್ಥಾಪಿತವಾಗುತ್ತವೆ. ಅದಕ್ಕಾಗಿ ಎರಡು ನೂತನ ಕೊಠಡಿಗಳು ನಿರ್ಮಾಣವಾಗುತ್ತಿವೆ .

ನಮ್ಮ ಶಾಲೆಯ ಸಮಗ್ರ ಅಭಿವೃದ್ಧಿಯ ಚಿಂತನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಮಕ್ಕಳಿಗೆ ಪುಸ್ತಕದ ಪಾಠಕ್ಕಿಂತ ಪ್ರಾಯೋಗಿಕ ಪಾಠವನ್ನು ಸುಲಭವಾಗಿ ಅರ್ಥ ಮಾಡಿಸಬಹುದು. ಇದರಿಂದ ಮಕ್ಕಳ ಮನಸ್ಸಿನಲ್ಲಿ ಕಲಿಕೆ ಅಚ್ಚಳಿಯದೆ ಉಳಿಯಲು ಸಹಕಾರಿಯಾಗುತ್ತದೆ. ಈ ಶಾಲೆಯಲ್ಲಿ ತಂತ್ರಜ್ಞಾನ ಉದ್ಯಾನವನ ಸ್ಥಾಪನೆ ವಿಷಯವಾಗಿ ಮೊದಲಿನ ಮುಖ್ಯ ಶಿಕ್ಷಕರಾದ ತಿಮ್ಮಯ್ಯ ಅವರಿಗೆ ನಮ್ಮ ಶಾಲೆ ವತಿಯಿಂದ ಅಭಿನಂದನೆ ಹೇಳಬೇಕು. ಅವರ ಅವಧಿಯಲ್ಲಿ ಈ ಶಾಲೆಗೆ ವಿಜ್ಞಾನ ಉದ್ಯಾನವನ ಅವಶ್ಯಕತೆ ಇದೆ ಎಂಬ ಬಗ್ಗೆ ಶಿಫಾರಸ್ಸು ಮಾಡಿದ್ದು ಇಂದು ಶಾಲೆಯ ಮಕ್ಕಳಿಗೆ ಅನುಕೂಲವಾಗಿದೆ.
ವೈ.ಟಿ.ಬಾಬು,
ಶಾಲಾ ಮುಖ್ಯೋಪಾಧ್ಯಾಯರು,
ಮಾರ್ಗದ ಮಹದೇವಪ್ಪ ಸರ್ಕಾರಿ ಪ್ರೌಢಶಾಲೆ

ನಾವು ಆಟದ ಜೊತೆಗೆ ಕೆಲವು ವಿಷಯಗಳನ್ನು ಕಲಿಯಲು ಸುಲಭವಾಗುವಂತಹ ವಿಜ್ಞಾನ ಸಾಧನಗಳು ನಮ್ಮ ಶಾಲೆಗೆ ಬಂದಿರುವುದು ಉತ್ತಮ ಬೆಳವಣಿಗೆ. ಪ್ರಾಯೋಗಿಕವಾಗಿ ನಾವು ವಿಷಯವನ್ನು ಕಲಿಯಲು ಸಹಾಯಕವಾಗುತ್ತದೆ. ನಾವು ಶಿಕ್ಷಕರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿರಲು ಸ್ಫೂರ್ತಿದಾಯಕವಾಗಿದೆ. ಒಳ್ಳೆಯ ಶಿಕ್ಷಕರು ಹಾಗೂ ಕಲಿಕೆ ಸಾಧನಗಳು ನಮ್ಮ ಮುಂದಿನ ಒಳ್ಳೆಯ ಭವಿಷ್ಯಕ್ಕೆ ನಾಂದಿಯಾಗಲಿವೆ.
ರಂಜು ಎಂ., 9ನೇ ತರಗತಿ ವಿದ್ಯಾರ್ಥಿ,
ಮಾರ್ಗದ ಮಹದೇವಪ್ಪ ಸರ್ಕಾರಿ ಪ್ರೌಢಶಾಲೆ

ಗಿರೀಶ್‌ ಜಿ.

Advertisement

Udayavani is now on Telegram. Click here to join our channel and stay updated with the latest news.

Next