Advertisement

ಗೋಮಾಂಸ ಬೇಡ ಎನ್ನುವವರು ಬೇರೆ ಮಾಂಸವನ್ನೂ ತಿನ್ನಬಾರದು

12:44 AM Jan 21, 2019 | Team Udayavani |

ಮೈಸೂರು: ಗೋಮಾಂಸ ತಿನ್ನಬಾರದು ಎನ್ನುವವರು ಬೇರೆ ಮಾಂಸವನ್ನೂ ತಿನ್ನಬಾರದು ಎಂದು ಖ್ಯಾತ ಕಾದಂಬರಿಕಾರ ಡಾ| ಎಸ್‌.ಎಲ್‌. ಭೈರಪ್ಪ ಪ್ರತಿಪಾದಿಸಿದ್ದಾರೆ.

Advertisement

ಎಸ್‌.ಎಲ್‌. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ ಎಸ್‌.ಎಲ್‌. ಭೈರಪ್ಪ ಸಾಹಿತ್ಯೋತ್ಸವದ ಸಮಾರೋಪ  ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಹುಟ್ಟಿದ ವೈದಿಕ ಧರ್ಮಗಳಲ್ಲಿ ಪುನರ್‌ ಜನ್ಮದಲ್ಲಿ ನಂಬಿಕೆ ಇದೆ. ಮಾಂಸ ತಿನ್ನುವಾಗ ಆ ರೂಪದಲ್ಲಿ ಪುನರ್‌ಜನ್ಮ ತಳೆದಿರುವ ನನ್ನ ಪೂರ್ವಜರನ್ನು ತಿನ್ನುತ್ತಿದ್ದೇನೆಂಬ ನಂಬಿಕೆ ಬಂತು. ಜೈನ ಧರ್ಮದವರು ಎಲ್ಲ ಪ್ರಾಣಿಗಳಿಗೂ ಜೀವ ಇರುತ್ತದೆ, ಹೀಗಾಗಿ ಮಾಂಸವನ್ನು ವರ್ಜಿಸಬೇಕು ಎಂದು ಪ್ರತಿಪಾದಿಸಿದರು. ಅನಂತರ ದಲ್ಲಿ ಹೋಮ-ಹವನಗಳಲ್ಲಿ ಪ್ರಾಣಿ ಹಿಂಸೆಯನ್ನು ಬಿಡಲಾಯಿತು ಎಂದರು.

ಎಲ್ಲ ಕಾಲದಲ್ಲೂ ಬದುಕಿರುವ ಸಮಸ್ಯೆಯನ್ನು ಗ್ರಹಿಸಿ ಕಾದಂಬರಿ ಬೆಳೆಸಬೇಕು. ಎಲ್ಲ ಕಾಲಕ್ಕೂ ಅನ್ವಯಿ ಸುವ ಥೀಮ್‌ ಸಾಹಿತ್ಯಕ್ಕೆ ಮುಖ್ಯ. ಇದೇ ನನ್ನ ಸಾಹಿತ್ಯಕ್ಕೆ ಗಟ್ಟಿತನ ಕೊಟ್ಟಿದೆ. ಜನ ರಸ ಅನುಭವಿಸಲು ನನ್ನ ಕಾದಂಬರಿ ಓದುತ್ತಾರೆ. ಯಾರ ಜೀವನದ ಸಮಸ್ಯೆಯನ್ನೂ ನಾನು ಪರಿಹಾರ ಮಾಡುವುದಿಲ್ಲ. ಓದುಗರಿಗೂ ಇದು ಗೊತ್ತಿರಬೇಕು. ಇದು ಗೊತ್ತಿದ್ದೇ ಕನ್ನಡ ಸಹಿತ ಇತರ ಭಾಷೆಗಳ ಓದುಗರು ನನ್ನನ್ನು ಬೆಳೆಸಿದ್ದಾರೆ. ಚಳವಳಿಗಾರರ ಬಗ್ಗೆ ನನಗೆ ಕನಿಕರ ಇದೆ. ನನ್ನ ಬೆಳೆವಣಿಗೆಗೆ ಒಂದು ರೀತಿಯಲ್ಲಿ ಅವರೂ ಕಾರಣರಾಗಿದ್ದಾರೆ. ಎರಡು ದಿನಗಳ ಈ ಸಾಹಿತ್ಯೋತ್ಸವ ನನಗೆ ಪ್ರಚೋದನೆ ಕೊಟ್ಟಿದೆ ಎಂದರು.

ಶುದ್ಧ ಸಾಹಿತ್ಯದಲ್ಲಷ್ಟೇ ನಂಬಿಕೆ
ಸೃಜನಶೀಲ ಲೇಖಕ ಯಾವತ್ತೂ ಚಳವಳಿಯಿಂದ ದೂರ ಇರಬೇಕು. ಹೀಗಾಗಿ ನನಗೆ ಶುದ್ಧ ಸಾಹಿತ್ಯದಲ್ಲಿ ಮಾತ್ರ ನಂಬಿಕೆ ಎಂದರು.

ಕರ್ನಾಟಕದಲ್ಲಿ ಇರುವಷ್ಟು ಚಳವಳಿ ಸಾಹಿತ್ಯ ದೇಶದ ಇನ್ಯಾವ ರಾಜ್ಯಗಳಲ್ಲೂ ಕಾಣ ಸಿಗುವುದಿಲ್ಲ. ಚಳವಳಿಗಾರರು ತಮ್ಮ ಸಾಹಿತ್ಯದ ಮೂಲಕ ಸಮಾಜದ ಉದ್ಧಾರ ಮಾಡುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ಸಾಹಿತ್ಯದಿಂದ ಸಮಾಜವನ್ನು ಉದ್ಧಾರ ಮಾಡಿ ಬಿಡುತ್ತೇನೆಂಬ ಭ್ರಮೆ ನನಗಿಲ್ಲ ಎಂದರು.

Advertisement

ನಾನೇಕೆ ಬರೆಯುತ್ತೇನೆಂಬ ಲೇಖನ, ಪರ್ವ, ಮಂದ್ರ ಕಾದಂಬರಿ ಗಳು ತೃಪ್ತಿಕೊಟ್ಟಿವೆ. ಉಳಿದಿದ್ದೆಲ್ಲ ಅಲ್ಲಿ ಇಲ್ಲಿ ತಿಳಿದು ಬರೆದಿದ್ದು, ಅವಕ್ಕೆ ಮೌಲ್ಯ ಇದೆ ಎಂದು ಅನಿಸುವುದಿಲ್ಲ. “ದಾಟು’ ಕಾದಂಬರಿ ಭಾರತದಲ್ಲಿನ ಜಾತಿ ಪದ್ಧತಿಯನ್ನು ಹೇಳುತ್ತದೆ. ಅದೇ ಆ ಕಾದಂಬರಿಯ ಗಟ್ಟಿತನ. 1973ರಲ್ಲಿ ನಾನು ಬರೆದ “ದಾಟು’ ಕಾದಂಬರಿಯನ್ನು ಸರಿಗಟ್ಟುವ ಮತ್ತೂಂದು ಕಾದಂಬರಿ ಬಂದಿಲ್ಲ ಎಂದರು.

ಭಾಷಣ ಮಾಡುವುದು ನನಗೆ ಹಿಂಸೆಯ ಕೆಲಸ. ಅವರು ಕರೆದರು ಎಂದು ಕಷ್ಟಪಟ್ಟು ಹೋಗಬಹುದು. ಅಲ್ಲಿ ಹೋಗಿ ಏನು ಮಾತನಾಡುವುದು ಅನ್ನುವುದು ತೋಚುವುದಿಲ್ಲ. ಹೀಗಾಗಿ ನಾನು ಭಾಷಣಗಳಿಗೆ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ಸಭಿಕರು, ಬೇರೆಯವರು ಏನು ಹೇಳುತ್ತಾರೆ ಎಂಬುದು ಕಿವಿಗೆ ಬಿದ್ದ ಮೇಲೆ ಏನು ತೋಚುತ್ತೋ ಅಷ್ಟೇ ನಾನು ಮಾತನಾಡುವುದು.
ಡಾ| ಎಸ್‌.ಎಲ್‌. ಭೈರಪ್ಪ

Advertisement

Udayavani is now on Telegram. Click here to join our channel and stay updated with the latest news.

Next