Advertisement

ಕೌಶಲ್ಯ ಕೈಪಿಡಿ ರಚನಾತ್ಮಕ ಪುಸ್ತಕ

06:02 PM Feb 06, 2020 | Naveen |

ಬೀದರ: ಯುವ ಕೌಶಲ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಅಭ್ಯರ್ಥಿಗಳಿಗೆ ಕೌಶಲ್ಯ ಕೈಪಿಡಿ ಎಂಬ ವಿನೂತನ ಪುಸ್ತಕ ವಿತರಿಸಲಾಗುವುದು. ಇದು ರಚನಾತ್ಮಕ ಪುಸ್ತಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌ ಮಹಾದೇವ ಹೇಳಿದರು.

Advertisement

ನಗರದ ಡಿಸಿ ಕಚೇರಿಯಲ್ಲಿ ಯುವ ಕೌಶಲ್ಯ ಕರ್ನಾಟಕ ಕಾರ್ಯಕ್ರಮದ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೈಪಿಡಿ ಓದುಗರಿಗೆ ತಮ್ಮ ಸಂವಹನ ಕೌಶಲ್ಯ, ತೊಂದರೆ ನಿವಾರಿಸಿಕೊಳ್ಳಬಲ್ಲ ಕೌಶಲ್ಯ, ಸಮಯ ನಿರ್ವಹಣಾ ಕೌಶಲ್ಯ ಹೀಗೆ ಹಲವಾರು ಅಂಶಗಳನ್ನು ಸುಧಾರಿಸಿಕೊಂಡು ವೃತ್ತಿ ಜೀವನದಲ್ಲಿ ಮುನ್ನಡೆಯಲು ಜಿಲ್ಲೆಯ ಯುವಜನಾಂಗ ಕೌಶಲ್ಯ ತರಬೇತಿಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗವಾರ್‌ ಮಾತನಾಡಿ, ಯುವ ಕೌಶಲ್ಯವು ಅನೇಕ ಯುವಕರ ಸಂಕಷ್ಟ ದೂರ ಮಾಡಲಿದೆ. ಜಿಲ್ಲೆಯ ಪಿಯುಸಿ, ಐಟಿಐ, ಡಿಪ್ಲೋಮಾ ಹಾಗೂ ಪದವಿ, ಸ್ನಾತಕೋತ್ತರ ವಿಭಾಗಗಳಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವವರೆಲ್ಲರೂ ಇದರ ಲಾಭ ಪಡೆಯಬೇಕು. ಮೃದು ಕೌಶಲ್ಯ ತರಬೇತಿಯಲ್ಲಿ ಅಭ್ಯರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರಲ್ಲಿರುವ ಕೊರತೆ ಅರಿತು ಸೂಕ್ತ ತರಬೇತಿ ನೀಡಿ ಮೌಲ್ಯಮಾಪನ ಮಾಡುವ ಮೂಲಕ ಉದ್ಯೋಗಾರ್ಹತೆ ಮಟ್ಟ ಹೆಚ್ಚಿಸಲಾಗುವುದು ಎಂದರು.

ಜಿಲ್ಲಾ ಐಟಿಐ ನೋಡಲ್‌ ಅಧಿಕಾರಿ ಶಿವಶಂಕರ ಟೋಕರೆ ಮಾತನಾಡಿ, ಇಲಾಖೆಯ ಯುವ ಕೌಶಲ್ಯ ಬಗ್ಗೆ ಜಿಲ್ಲೆಯಾದ್ಯಂತ ಅಭಿಯಾನ ಪ್ರಾರಂಭಿಸಿ, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ, ಯುವಕರು ವೆಬ್‌ಸೈಟ್‌ನಲ್ಲಿ ತಮ್ಮ ಹೆಸರನ್ನು ಹೇಗೆ ನೋಂದಣಿ ಮಾಡಬೇಕೆಂಬ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುತ್ತಿದೆ. ಪ್ರಯುಕ್ತ ಜಿಲ್ಲೆಯ ಡಿಪ್ಲೋಮಾ, ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರು ಹಾಗೂ ನಿರುದ್ಯೋಗಿ ಯುವಕರು ಸರ್ಕಾರದ ಯೋಜನೆಗೆ ಕೈ ಜೋಡಿಸಿ ನಿರುದ್ಯೋಗಿಗಳಿಗೆ ಸಹಕರಿಸುವಂತೆ ಮನವಿ ಮಾಡಿದರು.

ಫೆ.14ರಂದು ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣದಲ್ಲಿ ನೋಂದಾವಣಿ ಮಾಡಿದ ಯುವಕರೆಲ್ಲರಿಗೆ ಸಮಾಲೋಚನಾ ಸಭೆ ನಡೆಸಲಾಗುವುದು. ಅಂದು ಬೆಳಗ್ಗೆ 10 ಗಂಟೆಗೆ ಸಂಸ್ಥೆ ಆವರಣಕ್ಕೆ ಬರಲು ಮನವಿ ಮಾಡಿದರು. ಯುವ ಕೌಶಲ್ಯ ಸಂಪನ್ಮೂಲ ವ್ಯಕ್ತಿಗಳಾದ ಯುಸೂಫ್‌ಮಿಯಾ ಜೋಜನಾಕರ್‌, ಮಂಜುನಾಥ ಸ್ವಾಮಿ ಯೋಜನೆ ಬಗ್ಗೆ ಸಮಗ್ರ ಮಾಹಿತಿ ಪ್ರಸ್ತುತಪಡಿದರು.

Advertisement

ಇದೇ ವೇಳೆ ಯುವ ಕೌಶಲ್ಯ ಕರ್ನಾಟಕ ಕಾರ್ಯಕ್ರಮದ ಭಿತ್ತಿಪತ್ರಗಳು, ಕೌಶಲ್ಯ ಕೈಪಿಡಿ ಬಿಡುಗಡೆ ಮಾಡಲಾಯಿತು. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತ ಅಕ್ಷಯ ಶ್ರೀಧರ, ಬಲಭೀಮ ಕಾಂಬಳೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next