ಬೀದರ: ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ತ ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಯಿತು. ಜಿಲ್ಲಾಧಿಕಾರಿ ಡಾ|ಎಚ್.ಆರ್.ಮಹಾದೇವ್ ಅವರು ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಅಕ್ಷಯ್ ಶ್ರೀಧರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಕೋಟೆಪ್ಪಗೋಳ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಡಿ.ಬಾಬುರೆಡ್ಡಿ, ಜಿಲ್ಲಾ ಭೂಮಾಪನಾಧಿಕಾರಿ ಕೆ.ವೇಣುಗೋಪಾಲ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ಕಚೇರಿಗಳಲ್ಲಿ ಪ್ರತಿಜ್ಞಾವಿಧಿ ಬೋಧನೆ: ಕಮಲನಗರ, ಚಿಟಗುಪ್ಪಾ ತಹಶೀಲ್ದಾರ್ ಕಚೇರಿ, ಭಾಲ್ಕಿ ಎಂಆರ್‌ಎ ಪದವಿ ಪೂರ್ವ ಕಾಲೇಜು, ವಾರ್ತಾ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. “ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆ ಎಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ’ ಎಂದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.
ಸರ್ಕಾರಿ ಐಟಿಐ: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ವಿವಿಧ ವೃತ್ತಿಯ ಕುಶಲಕರ್ಮಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿ, ದೇಶದ ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕು. ಯುವಕರು ಭಾಷೆ, ಜಾತಿ, ಧರ್ಮ, ಜನಾಂಗಗಳಿಗೆ ಸೀಮಿತಗೊಳ್ಳದೇ ಪ್ರಜಾಪ್ರಭುತ್ವಕ್ಕೆ ಗೌರವ ನೀಡಿ ಪ್ರತಿ ಸಲ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಮಾಡುವಾಗ ಯಾವುದೇ ಒತ್ತಡಕ್ಕೆ ಒಳಗಾಗದೇ ನಿರ್ಮಲವಾದ ಮನಸ್ಸಿನಿಂದ ಮತ ಚಲಾಯಿಸಬೇಕು. 18 ಪೂರೈಸಿದ ಪ್ರತಿಯೊಬ್ಬರು ಅರ್ಜಿ ಸಂಖ್ಯೆ 16ನ್ನು ಭರ್ತಿ ಮಾಡಿ ಎಪಿಕ್ ಕಾರ್ಡ್ ತೆಗೆದುಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದರು.
ಸಂಸ್ಥೆಯ ತರಬೇತಿ ಅಧಿಕಾರಿ ಬಾಬು ರಾಜೋಳಕರ, ಕಚೇರಿ ಅಧಿಧೀಕ್ಷಕ ಸುದರ್ಶನ ಮಂಗಲಗಿಕರ, ಎನ್‌ಎಸ್‌ಎಸ್ ಅಧಿಕಾರಿ ಯುಸುಫಮಿಯ್ಯ ಜೊಜನಾ ಇನ್ನಿತರ ಸಿಬ್ಬಂದಿ ಇದ್ದರು. ಕವಿರತ್ನ ಕಾಳಿದಾಸ ಕಾಲೇಜು: ನಗರದ ಕವಿರತ್ನ ಕಾಳಿದಾಸ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು. ಎನ್‌ಎಸ್‌ಎಸ್ ಅಧಿಕಾರಿ ಶಿವಶಂಕರ ಉಪ್ಪಿನ್ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಮತದಾರರೇ ಭದ್ರ ಬುನಾದಿಯಾಗಿದ್ದಾರೆ ಎಂದರು.
ಪ್ರಾಚಾರ್ಯ ಪ್ರೊ| ಗಿರಿರಾವ್ ಕುಲಕರ್ಣಿ ಮಾತನಾಡಿ, ಮತದಾರರು ಚುನಾವಣೆಗಳಲ್ಲಿ ಮತದಾನ ಮಾಡಬೇಕು ಎಂಬ ಉದ್ದೇಶದಿಂದ ಜಾಗೃತಿ ಮೂಡಿಸಲು ಚುನಾವಣಾ ಆಯೋಗದಿಂದ ಈ ದಿನ ಆಚರಿಸುತ್ತಿದೆ ಎಂದರು.
ಗೋವಿಂದ ಜಾಧವ ಮಾತನಾಡಿದರು. ಡಾ| ಶ್ರೀನಿವಾಸ ಬಂಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ವೈಜಿನಾಥ ಮಲ್ಲಿಕಾರ್ಜುನ, ಪ್ರೊ| ಲೀಲಾವತಿ ಪೂಜಾರ, ಓಂಕಾರ ಮಹಾಶೆಟ್ಟಿ ಇನ್ನಿತರರು ಇದ್ದರು. ಬಿವಿ ಭೂಮರೆಡ್ಡಿ ಕಾಲೇಜು: ನಗರದ ಬಿವಿ ಭೂಮರಡ್ಡಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು. ಸ್ವೀಪ್ ಸಮಿತಿಯ ಜಿಲ್ಲಾ ಸಂಯೋಜನಾಧಿಕಾರಿ ಡಾ| ಗೌತಮ ಅರಳಿ ಮಾತನಾಡಿ, ಮತದಾನ ಪವಿತ್ರವಾದ ಕಾರ್ಯ. 18 ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ತಮ್ಮ ಕುಟುಂಬ ಮತ್ತು ಓಣಿಯ ಪರಿಚಿತರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಕರೆ ನೀಡಿದರು.
ಎನ್‌ಸಿಸಿ ಅಧಿಕಾರಿ ಮೇಜರ್ ಡಾ| ಪಿ. ವಿಠಲರಡ್ಡಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾನ ಜಾಗೃತಿ ಕುರಿತು ವಿವಿಧ ಸಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಿಗೆ ಈ ವೇಳೆ ಬಹುಮಾನ ವಿತರಿಸಲಾಯಿತು.ಪ್ರಾಂಶುಪಾಲ ಡಾ| ಎಸ್.ಕೆ. ಸಾತನೂರ ಅಧ್ಯಕ್ಷತೆ ವಹಿಸಿದ್ದರು. ಶಿವಲೀಲಾ ನಿರೂಪಿಸಿದರು. ಡಾ|ಹಣಮಂತಪ್ಪಾ ಸೇಡಂಕರ ಸ್ವಾಗತಿಸಿದರು. ಉಪ ಪ್ರಾಂಶುಪಾಲ ಡಾ| ಎಸ್.ಬಿ. ಗಾಮಾ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಡಿ.ಎಚ್., ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.