Advertisement

ಬೀದರ ಪಶುಪಾಲನೆಗೆ ಯೋಗ್ಯ ಜಿಲ್ಲೆ: ಚವ್ಹಾಣ

01:26 PM Feb 10, 2020 | Naveen |

ಬೀದರ: ಬೀದರ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಈ ನೆಲವು ಕೂಡ ಪಶುಪಾಲನೆಗೆ ಹೇಳಿ ಮಾಡಿಸಿದಂತಿದೆ. ಈ ಭಾಗದ ದೇವಣಿ ತಳಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದೆ. ಕೃಷಿ ಜೊತೆಗೆ ಪಶುಪಾಲನೆ ಕೈಗೊಳ್ಳಲು ಮಾಹಿತಿ ನೀಡುವ ನಿಟ್ಟಿನಲ್ಲಿ ಪಶು ಮೇಳ ಆಯೋಜಿಸಲಾಗಿದೆ ಎಂದು ಪಶು ಸಂಗೋಪನೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ನಗರದ ಹೊರವಲಯದ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆವರಣದಲ್ಲಿ ರವಿವಾರ ನಡೆದ ರಾಜ್ಯಮಟ್ಟದ ಪಶು ಮೇಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಜಾನುವಾರು ಸಾಕಾಣಿಕೆ ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿ ಇದ್ದಲ್ಲಿ ಪಶುಗಳ ಪಾಲನೆಯನ್ನು ಸುಗಮವಾಗಿ ಮಾಡಬಹುದಾಗಿದೆ. ಹೀಗಾಗಿ ಈ ಪಶುಮೇಳದಲ್ಲಿ ಹಸು, ಎಮ್ಮೆ, ಕುರಿ, ಮೇಕೆ, ಹಂದಿ, ಮೊಲ, ಗಿರಿರಾಜ, ಸ್ವರ್ಣಧರ ಸೇರಿದಂತೆ ವಿವಿಧ ಕೋಳಿ ತಳಿಗಳ ಸಾಕಾಣಿಕೆ ಮತ್ತು ನಿರ್ವಹಣೆ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ವ್ಯವಸ್ಥೆ ಮಾಡಲಾಗಿತ್ತು ಎಂದರು.

ಜಾನುವಾರು ಆರೋಗ್ಯವು ಅತ್ಯಂತ ಅವಶ್ಯಕವಾಗಿದೆ. ಹೀಗಾಗಿ
ಪಶು ಮೇಳದಲ್ಲಿ ಜಾನುವಾರು ಔಷಧ, ಲಸಿಕೆ ಮತ್ತು ರೋಗ ಪತ್ತೆ ಸಾಧನಗಳ ಮಾಹಿತಿಗೆ ಅವಕಾಶ ಕಲ್ಪಿಸಲಾಗಿತ್ತು. ಹಾಲು ಮಾಂಸ ಮತ್ತು ಉಣ್ಣೆ ಉತ್ಪನ್ನಗಳ ಮಾಹಿತಿ ಮತ್ತು ಮಾರಾಟಕ್ಕೂ ಕೂಡ ಅವಕಾಶ ಕಲ್ಪಿಸಲಾಗಿತ್ತು. ಇಂತಹ ಕಾರ್ಯಕ್ರಮಗಳ ಮೂಲಕ ಪಶುಮೇಳ ವಿಶೇಷ ಆಕರ್ಷಣೆಯಾಗಿತ್ತು ಎಂದು ಸಚಿವರು ತಿಳಿಸಿದರು.

ಮನೆ-ಮನ ತಲುಪಿತು: ಗಡಿ ಪ್ರದೇಶ ಬೀದರನಲ್ಲಿ ಇಂತಹ ರಾಜ್ಯ ಮಟ್ಟದ ಕಾರ್ಯಕ್ರಮ ಮಾಡುವುದು ತ್ರಾಸದಾಯಕ ಕಾರ್ಯವಾಗಿದೆ. ಆದರೂ ಇದನ್ನು ಸವಾಲಾಗಿ ತೆಗೆದುಕೊಂಡು ಕಾರ್ಯಕ್ರಮವನ್ನು ಮಾಡಲಾಯಿತು. ಪಶುಪಾಲನಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಜಿಲ್ಲಾಡಳಿತ, ಜಿಪಂ ಪರಸ್ಪರ ಸಹಕಾರದಿಂದ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ರೂಪಿಸಿರುವುದು ದಾಖಲೆಯಾಗಿದೆ ಎಂದರು.

ಕರುಗಳ ಪ್ರದರ್ಶನ, ಹೈನು ರಾಸುಗಳ ಹಾಲು ಕರೆಯುವ ಸ್ಪರ್ಧೆ, ಶ್ವಾನ ಪ್ರದರ್ಶನ, ತೋಟಗಾರಿಕೆ ಇಲಾಖೆಯ ಫಲಫುಷ್ಪ ಪ್ರದರ್ಶನ, ಕೃಷಿ ಇಲಾಖೆಯ ಜಲಾನಯನ ಪ್ರಾತ್ಯಕ್ಷಿಕೆ ಸೇರಿದಂತೆ ನಾನಾ ಇಲಾಖೆಗಳ ಮಳಿಗೆಗಳು ಮತ್ತು ವಾಣಿಜ್ಯ ಮಳಿಗೆಗಳಿಗೆ ಕೂಡ ಜನರು ಕಿಕ್ಕಿರಿದು ಸೇರಿದ್ದರು. ಹೀಗೆ ಪಶು ಮೇಳವು ಮನೆಮನವನ್ನು ತಲುಪಿದ್ದು, ಖುಷಿ ತಂದಿತು ಎಂದು ತಿಳಿಸಿದ ಅವರು, ಮುಂದಿನ ವರ್ಷದ ರಾಜ್ಯ ಪಶು ಮೇಳವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಆಯೋಜಿಸಲಾಗುವುದು ಎಂದು ಸಚಿವರು ಇದೆ ವೇಳೆ ಘೋಷಿಸಿದರು.

Advertisement

ಸಂಸದ ಭಗವಂತ ಖೂಬಾ, ಎಂಎಲ್‌ಸಿ ಅರವಿಂದಕುಮಾರ ಅರಳಿ, ತಾಪಂ ಅಧ್ಯಕ್ಷ ವಿಜಯಕುಮಾರ ಬರೂರ್‌, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆಯುಕ್ತ ಎಸ್‌.ಆರ್‌.ನಟೇಶ್‌, ನಿರ್ದೇಶಕ ಡಾ| ಎಂ.ಟಿ.ಮಂಜುನಾಥ, ಡಿಸಿ ಡಾ| ಮಹಾದೇವ್‌, ಜಿಪಂ ಸಿಇಒ ಜ್ಞಾನೇಂದ್ರಕುಮಾರ ಗಂಗವಾರ, ಪಶು ವಿವಿ ಕುಲಪತಿ ಡಾ|ಎಚ್‌.ಡಿ. ನಾರಾಯಣಸ್ವಾಮಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ವೇಳೆ ಕಲಾವಿದ ಹಣಮಂತ ಅವರಿಂದ ಗಾಯನ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next