Advertisement

ವಚನ ಸವೆಯದ ಸಂಪತ್ತು: ಅನ್ನಪೂರ್ಣ

01:14 PM Feb 09, 2020 | Naveen |

ಬೀದರ: ವಚನಗಳು ಶರಣರು ವಿಶ್ವಕ್ಕೆ ನೀಡಿದ ಸವೆಯದ ಸಂಪತ್ತು. ವಚನ ಪಾರಾಯಣವು ಕೋಟಿ ಜಪದ ಪ್ರತಿಫಲವನೀಯುತ್ತವೆ. ವಚನಗಳು ಸುಖ-ಶಾಂತಿ-ನೆಮ್ಮದಿಯ ಬದುಕಿನ ಸೂತ್ರಗಳು. ವಚನಗಳು ಶ್ರೇಷ್ಠ ಮಂತ್ರಗಳು ಎಂದು ಶ್ರೀ ಅಕ್ಕ ಅನ್ನಪೂರ್ಣತಾಯಿ ಹೇಳಿದರು.

Advertisement

ನಗರದ ಬಸವಗಿರಿಯಲ್ಲಿ ನಡೆಯುತ್ತಿರುವ 17ನೇ ವಚನ ವಿಜಯೋತ್ಸವದ ಎಡರನೇ ದಿನ ಶನಿವಾರ ಬೆಳಗ್ಗೆ ಲಿಂಗಾಯತ ಧರ್ಮಗ್ರಂಥ “ಗುರುವಚನ’ ಸಾಮೂಹಿಕ ಪಾರಾಯಣದ ಸಾನಿಧ್ಯವಹಿಸಿ ಅನುಭಾವ ನೀಡಿದರು.

ವಚನಗಳಲ್ಲಿ ಶರಣ ದರ್ಶನವಿದೆ. ದೇವದಾರಿಯಿದೆ, ಜೀವನ ದರ್ಶನವಿದೆ. ವಚನ ಸಾಹಿತ್ಯದಲ್ಲಿ ಮನೆ ಮಹಾಮನೆ. ಆದ್ದರಿಂದ ಮನೆ ಮನೆಗಳಲ್ಲಿ ವಚನ ಸಾಹಿತ್ಯದ ಸೌರಭ ಹರಡಲಿ. ವಚನಗಳನ್ನು ಓದುವ ಸಂಸ್ಕೃತಿ ಬೆಳೆಸುವ ಗುರಿಯಿಂದ ವಚನ ಪಾರಾಯಣ ಕಾರ್ಯಕ್ರಮ ಪ್ರತಿ ವರ್ಷವೂ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಇಂಥ ಕಾರ್ಯಕ್ರಮ ಲಿಂಗಾಯತ ಮಹಾಮಠದಲ್ಲಿ ಮಾತ್ರ ಜರುಗುತ್ತಿರುವುದು ವಿಶೇಷ. ಬಸವಾದಿ ಶರಣರ ಅಧ್ಯಾತ್ಮ ಮಂಥನದಿಂದ ಉದಿಸಿ ನವನೀತವಾಗಿರುವ ವಚನಗಳು ಉತ್ತಮ ಸಂಸ್ಕೃತಿಯ ಗುಣಗಳಾದ ಶ್ರದ್ಧೆ, ಭಕ್ತಿ, ಜ್ಞಾನ, ವಿನಯ, ಧೈರ್ಯ, ಸಮತೆ, ಸ್ವಾತಂತ್ರ್ಯ, ಸಹಜತೆಗಳನ್ನು ಹೊಂದಿದ್ದು, ಪರಿಪೂರ್ಣ ಜೀವನ ಕಟ್ಟಿಕೊಡುವವು. ವಚನಗಳು ಹಬ್ಬಕ್ಕೆ ತೊಡುವ ಆಭರಣಗಳಾಗದೆ ದಿನನಿತ್ಯದ ಧರಿಸುವ ಬಟ್ಟೆಗಳಾಗಬೇಕೆಂದು ಅಕ್ಕನವರು ಕರೆಯಿತ್ತರು.

ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ| ಬಸವರಾಜ ಸಾದರ ಮಾತನಾಡಿ, ಶರಣರು ಕಷ್ಟಪಟ್ಟು ಉಳಿಸಿದ ವಚನ ಸಾಹಿತ್ಯದ ಸಂದರ್ಭ ನೆನೆಯುವುದೇ ವಚನ ವಿಜಯೋತ್ಸವ. ಶರಣರು ಕೋಟಿ ಕೋಟಿ ವಚನಗಳನ್ನು ಬರೆದಿದ್ದಾರೆ. ನಮಗೆ ಸಿಕ್ಕಿದ್ದು ಕೇವಲ 16 ಸಾವಿರ ವಚನಗಳು. ಸಿಕ್ಕಿದ್ದರಲ್ಲೆ ಸಂಭ್ರಮ ಪಡುವ ಸ್ಥಿತಿ ಇದೆ ಎಂದು ಹೇಳಿದರು.

Advertisement

ಮುಂದಿನ ಜಗತ್ತಿಗೆ ಗತಿ ಎಂದರೆ ಬಸವಣ್ಣ ಮತ್ತು ವಚನ ಸಾಹಿತ್ಯ. ಕರ್ನಾಟಕದ ತಲೆ ಬೀದರ ಅಲ್ಲ ಬಸವಣ್ಣ. ಈ ತಲೆ ಬಳಸಿಕೊಂಡು ರಾಜಕಾರಣ ಮಾಡಿದರೆ ಕಲ್ಯಾಣ ರಾಜ್ಯ ನಿರ್ಮಾಣ ಆಗುವುದರಲ್ಲಿ ಸಂದೇಹವಿಲ್ಲ. ಬಸವಣ್ಣನವರ ವ್ಯಕ್ತಿತ್ವ ಬಣ್ಣಿಸಲು ವರ್ಷ ಸಾಲದು. ಎಲ್ಲ ಜ್ಞಾನಗಳ ಒಟ್ಟು ಮೊತ್ತವೆ ಬಸವಣ್ಣ. ನಿಜವಾಗಿಯೂ ನೋಬೆಲ್‌ ಸಲ್ಲಬೇಕಾದದ್ದು ಬಸವಣ್ಣನವರಿಗೆ ಮತ್ತು ವಚನ ಸಾಹಿತ್ಯಕ್ಕೆ ಎಂದು ಹೇಳಿದರು.

ಡಾ| ಗಂಗಾಂಬಿಕೆ ಅಕ್ಕ ಸಾನ್ನಿಧ್ಯ, ಮಾತೆ ಅಕ್ಕನಾಗಲಾಂಬಿಕೆ, ಮಾತೆ ಶಾಂತಾದೇವಿ ನೇತೃತ್ವ ವಹಿಸಿದ್ದರು. ಶಿವಶಂಕರ ಕಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗೆದಾರ ಜಗದೀಶ ಖೂಬಾ, ಇಂಜಿನಿಯರ್‌ ಅಶೋಕ ಖಂಡ್ರೆ, ಬಸವನಬಾಗೇವಾಡಿಯ ವೀರಣ್ಣ ಮರ್ತೂರ್‌, ಅಭಿಯಂತರ ಮಹೇಶ ಘಾಳೆ, ಸಾಹಿತಿ ಶ್ರೀಧರ ಅಸಂಗಿಹಾಳ, ಕಸಾಪ ಅಧ್ಯಕ್ಷ ಜಗನ್ನಥ ಮೂಲಗೆ, ಬಸವನಗೌಡ ಪಾಟೀಲ, ಸಂತೋಷ ಮಲಶೆಟ್ಟಿ, ಸಂಜಯ ಇಂಡೆ, ನೀಲಾಂಬಿಕಾ ಕಳಕಪ್ಪ, ಇನಾಮತಿ ಹುಬ್ಬಳ್ಳಿ, ಸುಮಂಗಲಾ ಪ್ರಭು ಅಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಲಿಂಗಾಕ್ಷಿ ಖೇಣಿ, ಬಸವಪ್ರಿಯ, ಬಸವಗೌರಿ ಕಲಬುರ್ಗಿ ವಚನ ನೃತ್ಯ ನಡೆಸಿಕೊಟ್ಟರು. ಶಾಂತಾ ಖಂಡ್ರೆ ಸ್ವಾಗತಿಸಿದರು. ಜ್ಞಾನದೇವಿ ಬಬಚಡೆ ನಿರೂಪಿಸಿದರು. ಮಹಾನಂದಾ ಪಾಟೀಲ ಶರಣು ಸಮರ್ಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next