Advertisement

ವಚನ ಸಾಹಿತ್ಯದ ಭವ್ಯ ಮೆರವಣಿಗೆ

11:49 AM Feb 10, 2020 | Naveen |

ಬೀದರ: ಕಲ್ಯಾಣ ಕರ್ನಾಟಕ ಭಾಗದ ಹೆಮ್ಮೆಯ ಉತ್ಸವ 17ನೇ ವಚನ ವಿಜಯೋತ್ಸವದ ಮೂರನೇ ದಿನವಾದ ರವಿವಾರ ನಗರದಲ್ಲಿ ಬಸವ ಸೇವಾ ಪ್ರತಿಷ್ಠಾನದಿಂದ ಕನ್ನಡ ಸಾಹಿತ್ಯದ ಅನರ್ಘ್ಯ ರತ್ನ “ವಚನ ಸಾಹಿತ್ಯ, ಗುರುವಚನ ಮತ್ತು ಲಿಂಗಾಯತ ಧರ್ಮ ಗ್ರಂಥ’ದ ಭವ್ಯ ಮೆರವಣಿಗೆ ನಡೆಯಿತು.

Advertisement

ವಚನ ಸಾಹಿತ್ಯ ಮತ್ತು ಧರ್ಮ ಗ್ರಂಥವನ್ನು ವಿಶೇಷ ಅಲಂಕೃತ ವಾಹನದಲ್ಲಿಟ್ಟು ರಾಜ ಮರ್ಯಾದೆಯಂತೆ ಮೆರವಣಿಗೆ ಮಾಡಲಾಯಿತು. ಛತ್ರಿ, ಷಟಸ್ಥಲ ಚಾಮರಗಳು, ಬಸವ ಧ್ವಜಗಳು ಆಕರ್ಷಿಸಿದವು. ಮೆರವಣಿಗೆಯುದ್ದಕ್ಕೂ ತಲೆ ಮೇಲೆ ಧರ್ಮಗ್ರಂಥ ಹೊತ್ತು ಹೆಜ್ಜೆ ಹಾಕಿದ ಶ್ವೇತ ವಸ್ತ್ರಧಾರಿ ಶರಣೆಯರು, ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ನೂರಾರು ಬಸವ ಜ್ಯೋತಿಗಳು, ಕುದುರೆಗಳ ಮೇಲೆ ಶರಣರ ವೇಷಧಾರಿಗಳು ಕಣ್ಮನ ಸೆಳೆದರು.

ಮಕ್ಕಳಿಂದ ಹಿಡಿದು ಹಿರಿಯರ ಬಸವ ನಾಮಸ್ಮರಣೆ ಮುಗಿಲು ಮುಟ್ಟಿತ್ತು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಷಟಸ್ಥಲ ಧ್ವಜಗಳು ರಾರಾಜಿಸುತ್ತಿದ್ದವು. ಎಲ್ಲೆಡೆ ನಿಂತಿದ್ದ ಬಸವಾನುಯಾಯಿಗಳು ಹಾರ, ಹೂವು ಹಾರಿಸುತ್ತ ಇನ್ನಷ್ಟು ಹುರುಪು ತಂದರು.

ವಿಶೇಷ ಅಲಂಕೃತ ಗುರು ವಚನಗಳನ್ನು ಹೊತ್ತ ಹೂವಿನ ರಥ ಮೆರವಣಿಗೆ ಕೇಂದ್ರಬಿಂದುವಾಗಿತ್ತು. ಬಸವಣ್ಣ, ಅಕ್ಕನಾಗಮ್ಮ, ಚನ್ನಬಸವಣ್ಣ, ಪ್ರಭುದೇವರು, ಅಕ್ಕಮಹಾದೇವಿ ಮುಂತಾದ ಶರಣರ ಪಾತ್ರಧಾರಿಗಳು 12ನೇ ಶತಮಾನದ ಶರಣರ ವೈಭವವನ್ನು ನೆನಪಿಸಿದರು.

ಮಹಿಳೆಯರು, ಮಕ್ಕಳು ವಚನಗಳ ಹಾಡಿಗೆ ಕುಣಿದು ಕುಪ್ಪಳಿಸಿದರೆ, ಶರಣ-ಶರಣೆಯರ ಸಾಲು ಭಕ್ತಿಯ ಹೊನಲನ್ನು ಹರಿಸಿತು. ಸೊಲ್ಲಾಪುರದ ನಂದಿಕೋಲು, ಜಾನಪದ ಕಲಾತಂಡದ ಜತೆಗೆ ಸ್ಥಳೀಯ ಕೋಲಾಟ ತಂಡಗಳು ಭಾಗವಹಿಸಿ ಮೆರಗು ಹೆಚ್ಚಿಸಿದವು. ಯುವಕರು ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದರು. ಗಣ್ಯರು ವಚನ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದರು.

Advertisement

ಜಿಲ್ಲಾಧಿಕಾರಿ ಡಾ| ಎಚ್‌.ಆರ್‌. ಮಹಾದೇವ ಅವರು ನಗರದ ಬಸವೇಶ್ವರ ವೃತ್ತದಲ್ಲಿ ವಚನ ಪಠಿಸುವ ಮೂಲಕ ಮೆರವಣಿಗೆ ವಿಧ್ಯುಕ್ತ ಚಾಲನೆ ಕೊಟ್ಟರು. ಬಸವೇಶ್ವರ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತ, ನೆಹರು ಸ್ಟೇಡಿಯಂ, ಮಡಿವಾಳ ವೃತ್ತ, ಹೊಸ ಬಸ್‌ ನಿಲ್ದಾಣ ಮೂಲಕ ಹಾಯ್ದು ಬಸವಗಿರಿಗೆ ತೆರಳಿ ಸಮಾವೇಶಗೊಂಡಿತು.

ಜಿಲ್ಲಾಧಿಕಾರಿ ಡಾ| ಮಹಾದೇವ ಮಾತನಾಡಿ, ಬಸವಣ್ಣನವರು ವಿಶ್ವದ ಶ್ರೇಷ್ಠ ದಾರ್ಶನಿಕರು. ಅವರು ಯಾವುದೇ ಜಾತಿ-ಮತ ಪಂಥಕ್ಕೆ ಸೀಮಿತರಲ್ಲ. ಮಹಾಪುರುಷರನ್ನು ಒಂದು ಹಂತಕ್ಕೆ ಸಿಮೀತಗೊಳಿಸುವುದು ಸರಿಯಲ್ಲ ಎಂದರು.

ಕೂಡಲಸಂಗಮದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಪ್ರತಿಷ್ಠಾನದ ಅಕ್ಕ ಅನ್ನಪೂರ್ಣತಾಯಿ, ಅಕ್ಕ ಗಂಗಾಂಬಿಕೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕ ರಾಜಶೇಖರ ಪಾಟೀಲ, ಸ್ವಾಗತ ಸಮಿತಿ ಅಧ್ಯಕ್ಷ ಧನರಾಜ ತಾಳಂಪಳ್ಳಿ, ಕಾರ್ಯಾಧ್ಯಕ್ಷ ಗುರುನಾಥ ಕೊಳ್ಳೂರು, ಶರಣಪ್ಪ ಮಿಠಾರೆ, ಬಸವರಾಜ ಧನ್ನೂರ, ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶೈಲೇಂದ್ರ ಬೆಲ್ದಾಳೆ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ, ರಾಜೇಂದ್ರಕುಮಾರ ಗಂದಗೆ, ಬಾಬು ವಾಲಿ, ಚಂದ್ರಕಾಂತ ಹೆಬ್ಟಾಳೆ, ಆನಂದ ದೇವಪ್ಪ, ರಮೇಶ ಮಠಪತಿ, ವಿರೂಪಾಕ್ಷ ಗಾದಗಿ ಮತ್ತಿತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next