ಬೀದರ: ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ಕ್ರೀಡಾಂಗಣದಲ್ಲಿ ಅವೈಜ್ಞಾನಿಕ ಕಾಮಗಾರಿ ಮಾಡಲಾಗಿದ್ದು, ಜತೆಗೆ ಶೇ.20ರಷ್ಟು ಕೆಲಸ ಬಾಕಿ ಉಳಿದಿವೆ. ಆದರೆ, ಅಪೂರ್ಣ ಕ್ರೀಡಾಂಗಣವನ್ನೇ ಮುಖ್ಯಮಂತ್ರಿಗಳಿಂದ ತರಾತುರಿಯಲ್ಲಿ ಉದ್ಘಾಟಿಸಲು ಜಿಲ್ಲಾಡಳಿತ ಮುಂದಾಗಿರುವುದಕ್ಕೆ ಕ್ರೀಡಾಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
4.66 ಕೋಟಿ ರೂ. ವೆಚ್ಚದಲ್ಲಿ ಇಲ್ಲಿನ ಹಳೆ ನೆಹರು ಕ್ರೀಡಾಂಗಣದ ನವೀಕರಣ ಕಾಮಗಾರಿ ನಡೆಯುತ್ತಿದೆ. ವಾಯುಯಾನ ಸೇವೆ ಉದ್ಘಾಟನೆಗಾಗಿ ಫೆ. 7ರಂದು ಬೀದರಗೆ ಆಗಮಿಸಲಿರುವ ಸಿಎಂ ಯಡಿಯೂರಪ್ಪ ಅವರಿಂದ ಲೋಕಾರ್ಪಣೆ ಮಾಡಿಸಲಾಗುತ್ತಿದೆ. ಆದರೆ, ಕ್ರೀಡಾಂಗಣದಲ್ಲಿ ಪೂರ್ಣ ಕಾಮಗಾರಿಯೇ ಮುಗಿದಿಲ್ಲ. ಹಾಗಾಗಿ ಕ್ರೀಡಾಂಗಣ ಇನ್ನೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರವೂ ಆಗಿಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆಗೆ ಮುಂದಾಗಿದ್ದಾರೆ.
4.66 ಕೋಟಿ ರೂ. ವೆಚ್ಚ: ಸುಮಾರು ನಾಲ್ಕು ದಶಕಗಳ ಹಿಂದೆ ನಿರ್ಮಾಣವಾಗಿದ್ದ ನೆಹರು ಕ್ರೀಡಾಂಗಣ ಶಿಥಿಲಾವಸ್ಥೆಗೆ ತಲುಪಿತ್ತು. ಕ್ರೀಡಾಕೂಟ ಹಾಗೂ ತರಬೇತಿ ಸೇರಿದಂತೆ ರಾಜಕೀಯ ಮತ್ತಿತರರ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ಕಲ್ಪಿಸುತ್ತಿದ್ದ ಕ್ರೀಡಾಂಗಣ ಅತ್ಯಂತ ಕಳಾಹೀನವಾಗಿತ್ತು. ಪ್ರೇಕ್ಷಕರ ಗ್ಯಾಲರಿಗಳು ಕುಸಿದು ಬಿದ್ದು ಅನಾಹುತದ ಆತಂಕ ಇತ್ತು. ಹೀಗಾಗಿ ಹಳೆ ಕ್ರೀಡಾಂಗಣವನ್ನು ನೆಲಸಮಗೊಳಿಸಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ 4.66 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರೀಡಾಂಗಣ ನಿರ್ಮಿಸಲಾಗುತ್ತಿದ್ದು, ಪೊಲೀಸ್ ಗೃಹ ನಿರ್ಮಾಣ ಮಂಡಳಿಗೆ ಕಾಮಗಾರಿ ಉಸ್ತುವಾರಿ ವಹಿಸಲಾಗಿದೆ.
ನೂತನ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ ಟ್ರ್ಯಾಕ್, ಫುಟ್‌ಬಾಲ್, ಹಾಕಿ ಹಾಗೂ ಹೊರ ಆವರಣದಲ್ಲಿ ವಾಲಿಬಾಲ್, ಟೆನ್ನಿಸ್, ಬಾಸ್ಕೆಟ್‌ಬಾಲ್ ಸೇರಿದಂತೆ ಕಬಡ್ಡಿ, ಖೋಖೋಗೂ ಅಗತ್ಯ ಅಂಗಣ ನಿರ್ಮಾಣದ ಜತೆಗೆ ಕ್ರಿಕೆಟ್ ಆಟಗಾರರಿಗೆ ತರಬೇತಿಗಾಗಿ ನೆಟ್‌ಗಳನ್ನು ಹಾಕುವುದು ಪ್ರಸ್ತಾವನೆಯಲ್ಲಿದೆ. 2017ರ ಡಿಸೆಂಬರ್‌ನಲ್ಲಿ ಆರಂಭಗೊಂಡಿರುವ ಕಾಮಗಾರಿ 2019ರ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಈವರೆಗೆ ಕ್ರೀಡಾಂಗಣದ ಕೆಲಸ ಶೇ. 20ರಷ್ಟು ಬಾಕಿ ಉಳಿದಿವೆ.
ಅವೈಜ್ಞಾನಿಕ ಟ್ರ್ಯಾಕ್: ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಅಥ್ಲೆಟಿಕ್ ಟ್ರ್ಯಾಕ್ ಸಂಪೂರ್ಣ ಅವೈಜ್ಞಾನಿಕವಾಗಿದೆ. ಟ್ರ್ಯಾಕ್‌ಗಾಗಿ ಒಂದು ಅಡಿ ನೆಲ ತೋಡಿ ಸಮತಟ್ಟಾದ ಮಣ್ಣನ್ನು ಹಾಕಬೇಕು. ಆದರೆ, ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಹಿಂದೆ ಇದ್ದ ಟ್ರ್ಯಾಕ್ ಮೇಲೆ ನದಿಯ ಮರಳನ್ನು ಬಳಸಿ ನಿರ್ಮಿಸಿದ್ದಾರೆ ಎನ್ನಲಾಗಿದೆ. ಟ್ರ್ಯಾಕ್ ಸೇರಿದಂತೆ ವಿವಿಧ ಕ್ರೀಡಾಂಗಣ ನಿರ್ಮಿಸಲು ಕೋಚ್‌ಗಳ ಸಲಹೆಯನ್ನೆ ಪಡೆದಿಲ್ಲ. ಗುತ್ತಿಗೆದಾರ ತನಗೆ ತೋಚಿದಂತೆ ಕಾಮಗಾರಿ ಮುಗಿಸಿದ್ದಾರೆ ಎಂಬ ಆರೋಪ ಕ್ರೀಡಾಪಟುಗಳದ್ದಾಗಿದೆ.
ಇನ್ನೂ ಕ್ರೀಡಾಂಗಣದಲ್ಲಿ ಕಬಡ್ಡಿ, ವಾಲಿಬಾಲ್ ಮತ್ತು ಖೋ ಖೋ ಅಂಗಣಗಳೇ ಸಿದ್ಧಗೊಂಡಿಲ್ಲ. ಗ್ಯಾಲರಿಗಳ ಕಬ್ಬಿಣದ ಪೈಪ್‌ಗ್ಳಿಗೆ ಬಣ್ಣ ಬಳಿಯುವುದು ಸಹ ಬಾಕಿ ಉಳಿದಿದೆ. ಅವೈಜ್ಞಾನಿಕ ಕಾಮಗಾರಿ ಕುರಿತಂತೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಪೊಲೀಸ್ ಗೃಹ ನಿರ್ಮಾಣ ಮಂಡಳಿ ಗಮನಕ್ಕೆ ತಂದರೂ ಅದನ್ನು ಸರಿಪಡಿಸುವ ಪ್ರಯತ್ನ ಆಗಿಲ್ಲ ಎನ್ನಲಾಗಿದೆ.
ಕೇವಲ ಹೆಸರಿಗೆ ಮಾತ್ರ ಅತ್ಯಾಧುನಿಕ ಕ್ರೀಡಾಂಗಣ ಆಗದೇ, ಅವೈಜ್ಞಾನಿಕ ಕೆಲಸಗಳನ್ನು ಸರಿಪಡಿಸಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ನಟ್ಟಿನಲ್ಲಿ ಕ್ರೀಡಾಂಗಣ ಸಿದ್ಧಪಡಿಸಬೇಕಿದೆ. ಈ ದಿಸೆಯಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಬೇಕಿದೆ.
ಕ್ರೀಡಾಂಗಣದಲ್ಲಿ ಶೇ.20ರಷ್ಟು ಕಾಮಗಾರಿ ಇನ್ನೂ ಬಾಕಿ ಇದೆ. ಅವೈಜ್ಞಾನಿಕವಾಗಿ ಟ್ರ್ಯಾಕ್ ನಿರ್ಮಾಣ ಮಾಡಲಾಗಿದ್ದು, ಈ ಕುರಿತು ಮೂರನೇ ಹಂತದ ತಾಂತ್ರಿಕ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಕಾಮಗಾರಿ ಪೂರ್ಣಗೊಳಿಸಿದ ಬಳಿಕಷ್ಟೇ ಕ್ರೀಡಾಂಗಣವನ್ನು ಇಲಾಖೆಯ ಸುಪರ್ದಿಗೆ ಪಡೆಯಲಾಗುವುದು. ಫೆ. 7ರಂದು ಕ್ರೀಡಾಂಗಣ ಲೋಕಾರ್ಪಣೆಗೆ ನಿರ್ಣಯಿಸಲಾಗಿದ್ದು, ಇನ್ನೂ ಮುಖ್ಯಮಂತ್ರಿ ಕಚೇರಿಯಿಂದ ಅಧಿಕೃತ ಮಾಹಿತಿ ಬರಬೇಕಿದೆ.
ಅಮೃತ ಅಷ್ಟಗಿ,
ಸಹಾಯಕ ನಿರ್ದೇಶಕ, ಯುವಜನ
ಸೇವಾ ಮತ್ತು ಕ್ರೀಡಾ ಇಲಾಖೆ, ಬೀದರ
ಶಶಿಕಾಂತ ಬಂಬುಳಗೆ