ಬೀದರ: ಇನ್ನೊಂದು ತಿಂಗಳು ಕಳೆದರೆ ಶಾಲಾ ಬೇಸಿಗೆ ರಜೆಯೇ ಶುರುವಾಗಲಿದೆ. ಆದರೆ, ಸರ್ಕಾರ ರಾಜ್ಯದ ವಸತಿಯುತ ಶಾಲೆಯ ಎರಡು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದೀಗ ಶೂ ಭಾಗ್ಯ ಕರುಣಿಸಿದೆ. ಕಳೆದ ಮೂರು ವರ್ಷದಿಂದ ಶೂ-ಸಾಕ್ಸ್ ಸೌಲಭ್ಯದಿಂದ ವಂಚಿತರಾಗಿದ್ದ ಮಕ್ಕಳಿಗೆ ಶೈಕ್ಷಣಿಕ ವರ್ಷದ ಕೊನೆಗೆ ತಲುಪಿಸಿದ್ದು, ಅವು ಕಳಪೆ ಮಟ್ಟದ್ದಾಗಿವೆ.
ಟೆಂಡರ್ ಪ್ರಕ್ರಿಯೆಯಲ್ಲಿ ಸರ್ಕಾರದ ವಿಳಂಬ ನೀತಿ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್ ) ನಿರಾಸಕ್ತಿ ಪರಿಣಾಮ ರಾಜ್ಯದ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷಗಳಿಂದ ಶೂ-ಸಾಕ್ಸ್ ವಿತರಣೆ ಆಗಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷéದಿಂದಾಗಿ ವಿದ್ಯಾರ್ಥಿಗಳು ಪರದಾಡಿದ್ದು, ಬಡ ಮಕ್ಕಳು ನಿತ್ಯ ಚಪ್ಪಲಿ ಹಾಕಿಕೊಂಡು ಇಲ್ಲವೇ ಬರಗಾಲಲ್ಲಿಯೇ ಶಾಲೆಗೆ ಹಾಜರಾಗುವಂತಾಗಿತ್ತು. ಮೂರು ವರ್ಷ ಬಳಿಕ ಫೆ.17ಕ್ಕೆ ಸೌಲಭ್ಯ ಕಲ್ಪಿಸಲಾಗಿದ್ದರೂ ತಿಂಗಳಲ್ಲಿ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿರುವ ಕಾರಣ ಮಕ್ಕಳಿಗೆ ಶೂ ಧರಿಸುವ ಯೋಗ ಇಲ್ಲದಂತಾಗಿದೆ.
ರಾಜ್ಯದಲ್ಲಿ ಕ್ರೈಸ್ ವ್ಯಾಪ್ತಿಯಲ್ಲಿ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ ಸೇರಿದಂತೆ ಒಟ್ಟು 822 ವಸತಿಯುತ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಶಾಲೆಗೆ 250 ಪ್ರವೇಶದಂತೆ ಅಂದಾಜು 2.06 ಲಕ್ಷಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಮಕ್ಕಳಿಗೆ ಪ್ರತಿ ವರ್ಷ ಸಮವಸ್ತ್ರದ ಜತೆಗೆ ತಲಾ ಒಂದು ಜೋಡಿ ಕಪ್ಪು ಮತ್ತು ಬಿಳಿ ಶೂ ಹಾಗೂ ಸಾಕ್ಸ್‌ಗಳನ್ನು ಉಚಿತವಾಗಿ ವಿತರಿಸಬೇಕೆಂಬ ನಿಯಮವಿದೆ. ಆದರೆ, ಮೂರು ವರ್ಷದಿಂದ ಯೋಜನೆ ನನೆಗುದಿಗೆ ಬಿದ್ದಿತ್ತು.
ಟೆಂಡರ್ ಪ್ರತಿಕ್ರಿಯೆ ವಿಳಂಬ: ಈ ಹಿಂದೆ ಪ್ರತಿ ವರ್ಷ ಮಕ್ಕಳಿಗೆ ಶೂ-ಸಾಕ್ಸ್ ವಿತರಣೆಯಾಗುತ್ತಿತ್ತು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲೇ ಟೆಂಡರ್ ಆಗುತ್ತಿತ್ತು. ಆದರೆ, ಕೇಂದ್ರೀಕರಣಗೊಂಡ ಬಳಿಕ ರಾಜ್ಯಮಟ್ಟದಿಂದಲೇ ಟೆಂಡರ್ ನಡೆಸಬೇಕೆಂಬ ನಿಯಮ ರೂಪಿಸಿದ್ದರಿಂದ ಮಕ್ಕಳಿಗೆ ಶೂ ಮರೀಚಿಕೆಯಾಗಿದೆ. ಕ್ರೈಸ್ ಸಂಸ್ಥೆ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್) ಮೂಲಕ ವಸತಿಯುತ ಶಾಲೆಗಳಿಗೆ ಶೂಗಳನ್ನು ಸರಬರಾಜು ಮಾಡುವ ಜವಾಬ್ದಾರಿ ಹೊತ್ತಿದೆ. ಆದರೆ, ಕಳೆದ ಮೂರು ವರ್ಷದಿಂದ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬ ನೀತಿಯಿಂದಾಗಿ ವಿದ್ಯಾರ್ಥಿಗಳು ಸೌಲಭ್ಯದಿಂದ ವಂಚಿತರಾಗಿದ್ದರು.
ಲಿಡ್ಕರ್ ಸಂಸ್ಥೆ ಫೆ.17ರಂದು ರಾಜ್ಯದ ಎಲ್ಲ ವಸತಿಯುತ ಶಾಲೆಗಳಿಗೆ ಶೂ-ಸಾಕ್ಸ್ ಸರಬರಾಜು ಮಾಡಿದ್ದು, ಮಾರ್ಚ್ ತಿಂಗಳಲ್ಲಿ ಪರೀಕ್ಷೆಗಳು ನಡೆಯುವುದರಿಂದ ಮಕ್ಕಳಿಗೆ ಲಾಭ ಇಲ್ಲದಂತಾಗಿದೆ. ಇನ್ನೊಂದೆಡೆ ಶೂ ಮತ್ತು ಸಾಕ್ಸ್‌ಗಳು ಕಳಪೆ ಮಟ್ಟದಿಂದ ಕೂಡಿರುವ ಆರೋಪಗಳು ಕೇಳಿ ಬಂದಿವೆ. ಬೆಂಗಳೂರಿನ ರಿಜಿಡ್ ಮತ್ತು ಸೂರ್ಯ ಇಂಡಸ್ಟ್ರೀಜ್ ಕಂಪನಿಗಳಲ್ಲಿ ತಯಾರುಗೊಂಡಿರುವ ಶೂಗಳನ್ನು ಲಿಡ್ಕರ್ ಸರಬರಾಜು ಮಾಡಿದೆ. ಕಪ್ಪು ಶೂಗೆ 258 ರೂ., ಬಿಳಿ ಶೂಗೆ 252 ರೂ. ಹಾಗೂ ಸಾಕ್ಸ್‌ಗೆ 40 ರೂ. ದರ ನಿಗದಿ ಮಾಡಲಾಗಿದ್ದು, ಇದಕ್ಕಿಂತ ಕಡಿಮೆ ದರದಲ್ಲಿ ಪ್ರಚಲಿತ ಕಂಪನಿ-ಉತ್ತಮ ಗುಣಮಟ್ಟದ ಶೂ ಮಾರುಕಟ್ಟೆಯಲ್ಲಿ ಸಿಗಲಿವೆ ಎಂಬುದು ವಿದ್ಯಾರ್ಥಿಗಳ ಅಳಲು.
ರಾಜ್ಯದ ವಸತಿಯುತ ಶಾಲೆ ವಿದ್ಯಾರ್ಥಿಗಳಿಗೆ ಕಳೆದ ಮೂರು ವರ್ಷದಿಂದ ಶೂ-ಸಾಕ್ಸ್ ವಿತರಣೆ ಆಗಿರಲಿಲ್ಲ. ಇದಕ್ಕೆ ಟೆಂಡರ್ ಪ್ರಕ್ರಿಯೆಯಲ್ಲಿ ವಿಳಂಬ ಮುಖ್ಯ ಕಾರಣ. ಈಗ ಕಳೆದೆರಡು ದಿನದಲ್ಲಿ ಎಲ್ಲ ಶಾಲೆಗಳಿಗೆ ಸರಬರಾಜು ಆಗಿವೆ. ಬರುವ ಶೈಕ್ಷಣಿಕ ವರ್ಷದಿಂದ ಈ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು. ಶೂ ಕಳಪೆ ಮಟ್ಟದ್ದಾಗಿದ್ದರೆ ತನಿಖೆ ನಡೆಸಿ ಅನುದಾನ ತಡೆಹಿಡಿಯಲಾಗುವುದು.
ಡಾ. ರಾಘವೇಂದ್ರ,
ಕಾರ್ಯನಿರ್ವಾಹಕ ನಿರ್ದೇಶಕ, ಕ್ರೈಸ್
ಶಿಕಾಂತ ಬಂಬುಳಗೆ